ಮಂಗಳೂರು, ಅ.2: ಕರಾವಳಿಯ ಗಂಡುಕಲೆ ಯಕ್ಷಗಾನದಲ್ಲಿ ಧಾರ್ಮಿಕ ಸೌಹಾರ್ದತೆಯ ಅಪೂರ್ವ ದೃಶ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಯಕ್ಷಗಾನ ರಂಗ ಪ್ರವೇಶಿಸಿದ ಮೊದಲ ಮುಸ್ಲಿಂ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಆರ್ಷಿಯಾ ಖಾನ್, ಅ.20ರಂದು ಕದ್ರಿ ದೇವಸ್ಥಾನದಲ್ಲಿ ನಡೆಯಲಿರುವ ‘ಸಂಪೂರ್ಣ ಶ್ರೀದೇವಿ ಮಹಾತ್ಮೆ’ ಪ್ರಸಂಗದಲ್ಲಿ ಶ್ರೀದೇವಿಯ ಪಾತ್ರ ನಿರ್ವಹಿಸಲಿದ್ದಾರೆ.

ಕದಳಿ ಕಲಾ ಕೇಂದ್ರದ 14ನೇ ವರ್ಷದ ‘ಕದಳಿ ದಶಾಹ’ ಯಕ್ಷಗಾನ ಸಂಭ್ರಮದ ಅಂಗವಾಗಿ ಈ ಪ್ರದರ್ಶನ ನಡೆಯಲಿದೆ. ಕಟೀಲು, ಪಾವಂಜೆ ಸೇರಿದಂತೆ ಪ್ರಸಿದ್ಧ ತೆಂಕುತಿಟ್ಟು ಮೇಳಗಳ ಕಲಾವಿದರೊಂದಿಗೆ ಆರ್ಷಿಯಾ ಖಾನ್ ರಂಗಸ್ಥಳದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
‘ತನು ವಿಟ್ಲ’ ಎಂದೇ ಪರಿಚಿತರಾಗಿರುವ ಆರ್ಷಿಯಾ, 12 ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದು, ಗುರು ಕದ್ರಿ ರಮೇಶ್ ಭಟ್ ಅವರಿಂದ ತರಬೇತಿ ಪಡೆದಿದ್ದಾರೆ. ಈ ಹಿಂದೆ ‘ದೇವಿ ಮಹಾತ್ಮೆ’ಯ ಮಹಿಷಾಸುರ ಸೇರಿದಂತೆ ಹಲವು ಪ್ರಮುಖ ಪಾತ್ರಗಳನ್ನು ನಿರ್ವಹಿಸಿರುವ ಅವರು, ಶ್ರೀದೇವಿ ಪಾತ್ರಕ್ಕಾಗಿ ಸಾತ್ವಿಕ ಆಹಾರ ಹಾಗೂ ವ್ರತಾಚರಣೆ ಪಾಲಿಸುತ್ತಿದ್ದಾರೆ.

ಬಾಲ್ಯದಲ್ಲೇ ಯಕ್ಷಗಾನದತ್ತ ಆಕರ್ಷಿತರಾಗಿ 9ನೇ ವಯಸ್ಸಿನಲ್ಲಿ ಕಲಿಕೆ ಆರಂಭಿಸಿದ ಆರ್ಷಿಯಾ ಅವರಿಗೆ ಪೋಷಕರು ಸಂಪೂರ್ಣ ಪ್ರೋತ್ಸಾಹ ನೀಡಿದ್ದರು. ಇದೀಗ ಶ್ರೀದೇವಿ ಪಾತ್ರದ ಮೂಲಕ ಯಕ್ಷಗಾನದಲ್ಲಿ ಧಾರ್ಮಿಕ ಸಾಮರಸ್ಯದ ಸಂದೇಶವನ್ನು ಸಾರಲು ಸಜ್ಜಾಗಿದ್ದಾರೆ.

