ಅಥ್ಲೀಟ್ ಎಂ.ಆರ್. ಪೂವಮ್ಮ ಅವರಿಗೆ ಆತ್ಮೀಯ ಸ್ವಾಗತರಾಜ್ಯ ಸರ್ಕಾರದಿಂದ ಸೂಕ್ತ ಗೌರವಧನ ನೀಡಲು ಅಕ್ಷಿತ್ ಸುವರ್ಣ ಆಗ್ರಹ

ಮಂಗಳೂರು: ಅಂತರರಾಷ್ಟ್ರೀಯ ಮಟ್ಟದಲ್ಲಿ ಅಥ್ಲೆಟಿಕ್ಸ್ ಕ್ಷೇತ್ರದಲ್ಲಿ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತಂದಿರುವ ಖ್ಯಾತ ಕ್ರೀಡಾಪಟು ಎಂ.ಆರ್. ಪೂವಮ್ಮ ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಯುವ ಜನತಾದಳ (ಜಾತ್ಯತೀತ) ಅಧ್ಯಕ್ಷ ಅಕ್ಷಿತ್ ಸುವರ್ಣ ಅವರು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆತ್ಮೀಯವಾಗಿ ಸ್ವಾಗತಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಎಂ.ಆರ್. ಪೂವಮ್ಮ ಅವರಿಗೆ ಪುಷ್ಪಗುಚ್ಛ ನೀಡಿ ಅಭಿನಂದಿಸಿದ ಅಕ್ಷಿತ್ ಸುವರ್ಣ ಅವರು, ಅವರ ಕ್ರೀಡಾ ಸಾಧನೆ, ಪರಿಶ್ರಮ ಹಾಗೂ ಸಮರ್ಪಣಾ ಮನೋಭಾವವನ್ನು ಶ್ಲಾಘಿಸಿದರು.

ಕೇಂದ್ರ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರು ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಕೂಡ ಎಂ.ಆರ್. ಪೂವಮ್ಮ ಅವರ ಕ್ರೀಡಾ ಸಾಧನೆಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ, ಶುಭ ಹಾರೈಸಿದ್ದಾರೆ ಎಂದು ಅಕ್ಷಿತ್ ಸುವರ್ಣ ತಿಳಿಸಿದರು.

ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಿ ಗಮನಾರ್ಹ ಸಾಧನೆ ಮಾಡಿರುವ ಎಂ.ಆರ್. ಪೂವಮ್ಮ ಅವರಿಗೆ ರಾಜ್ಯ ಸರ್ಕಾರ ಸೂಕ್ತ ಗೌರವಧನ ಹಾಗೂ ಅಗತ್ಯ ಪ್ರೋತ್ಸಾಹ ನೀಡಬೇಕು ಎಂದು ಅವರು ಆಗ್ರಹಿಸಿದರು.

ಕ್ರೀಡಾಪಟುಗಳು ತಮ್ಮ ಜೀವನದ ಅಮೂಲ್ಯ ಸಮಯವನ್ನು ದೇಶದ ಕೀರ್ತಿಗಾಗಿ ಮೀಸಲಿಟ್ಟು ಕಠಿಣ ಪರಿಶ್ರಮ ಪಡುತ್ತಾರೆ. ಇಂತಹ ಸಾಧಕರನ್ನು ಗುರುತಿಸಿ ಗೌರವಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಪ್ರತಿಭೆಗಳಿಗೆ ಪ್ರಶಂಸೆಯ ಜೊತೆಗೆ ಅವರ ಸಾಧನೆಗೆ ತಕ್ಕ ಆರ್ಥಿಕ ಗೌರವ, ಪ್ರೋತ್ಸಾಹ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು. ಇದರಿಂದ ಯುವ ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೇರಣೆ ದೊರೆಯಲಿದೆ ಎಂದು ಅಕ್ಷಿತ್ ಸುವರ್ಣ ಹೇಳಿದರು.

ರಾಜ್ಯ ಸರ್ಕಾರವು ಎಂ.ಆರ್. ಪೂವಮ್ಮ ಅವರ ಕ್ರೀಡಾ ಸಾಧನೆಯನ್ನು ಪರಿಗಣಿಸಿ ಸೂಕ್ತ ಗೌರವಧನ ಘೋಷಿಸುವ ಮೂಲಕ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಬೇಕು. ಸರ್ಕಾರದ ಮಾನ್ಯತೆ ಹಾಗೂ ಬೆಂಬಲವು ಕ್ರೀಡಾ ಪ್ರತಿಭೆಗಳಿಗೆ ಮತ್ತಷ್ಟು ಸಾಧನೆ ಮಾಡಲು ಉತ್ತೇಜನ ನೀಡಲಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರ ಅಧ್ಯಕ್ಷ ಸತ್ತಾರ್ ಬಂದರು, ಯುವ ಪದಾಧಿಕಾರಿಗಳಾದ ಆದರ್ಶ ಪೂಜಾರಿ, ನಿಶಾಂತ್, ಸುಶಾಂತ್, ವಿನಿತ್ ಮತ್ತಿತರರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!