ಮಂಗಳೂರು: ಏಷ್ಯನ್ ಕ್ರೀಡಾಕೂಟದ 4×400 ಮೀಟರ್ ರಿಲೇ ಸ್ಪರ್ಧೆಯಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟು, ಜಾಗತಿಕ ಮಟ್ಟದಲ್ಲಿ ದೇಶದ ಹಾಗೂ ಕರಾವಳಿಯ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿದ ಅಂತರರಾಷ್ಟ್ರೀಯ ಅಥ್ಲೀಟ್ ಎಂ.ಆರ್. ಪೂವಮ್ಮ ಅವರ ಮಂಗಳೂರಿನ ನಿವಾಸಕ್ಕೆ ಉಡುಪಿ-ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ಶ್ರೀ ಕಿಶೋರ್ ಕುಮಾರ್ ಪುತ್ತೂರು ಅವರ ನೇತೃತ್ವದ ಬಿಜೆಪಿ ನಿಯೋಗವು ಭೇಟಿ ನೀಡಿ ಆತ್ಮೀಯವಾಗಿ ಗೌರವಿಸಿ, ಅಭಿನಂದಿಸಿತು.

ನಿಯೋಗದಲ್ಲಿ ಹಿರಿಯ ಬಿಜೆಪಿ ವಕ್ತಾರ ರಾಜಗೋಪಾಲ್ ರೈ, ಮಾಜಿ ಮೇಯರ್ ಹಾಗೂ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಯುವಮೋರ್ಚಾ ನಾಯಕ ಸಚಿನ್ ರಾಜ್ ರೈ ಸೇರಿದಂತೆ ಪಕ್ಷದ ಪ್ರಮುಖ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಸಾಧಕಿಗೆ ಅರ್ಹ ಗೌರವ ಸಿಗದಿರುವುದಕ್ಕೆ ಶಾಸಕರ ಬೇಸರ:
ಪೂವಮ್ಮ ಅವರೊಂದಿಗೆ ಸಮಾಲೋಚನೆ ನಡೆಸಿದ ವೇಳೆ, ಬೇರೆ ಬೇರೆ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ನಾಯಕರು ತಮ್ಮ ರಾಜ್ಯದ ಪದಕ ವಿಜೇತ ಕ್ರೀಡಾಪಟುಗಳನ್ನು ಖುದ್ದು ಸಂಪರ್ಕಿಸಿ, ಕರೆದು ಕೋಟ್ಯಂತರ ರೂಪಾಯಿ ಪ್ರೋತ್ಸಾಹಧನ ನೀಡಿ ಗೌರವಿಸುತ್ತಿದ್ದಾರೆ. ಆದರೆ, ಕರ್ನಾಟಕಕ್ಕೆ ಹಾಗೂ ದೇಶಕ್ಕೆ ಇಷ್ಟೊಂದು ದೊಡ್ಡ ಹಿರಿಮೆ ತಂದರೂ ನಮ್ಮ ರಾಜ್ಯ ಸರ್ಕಾರದಿಂದ ನಿರೀಕ್ಷಿತ ಮಟ್ಟದ ಸ್ಪಂದನೆ, ಗೌರವ ಅಥವಾ ಕನಿಷ್ಠ ಪ್ರೋತ್ಸಾಹದ ಮಾತುಗಳು ಸಿಗದಿರುವ ಬಗ್ಗೆ ಪೂವಮ್ಮ ಅವರು ಹಂಚಿಕೊಂಡ ನೋವನ್ನು ಆಲಿಸಿದ ಶಾಸಕರು, ಸರ್ಕಾರದ ಈ ತಾರತಮ್ಯ ಮತ್ತು ನಿರುತ್ಸಾಹದ ಧೋರಣೆಗೆ ತೀವ್ರ ವಿಷಾದ ವ್ಯಕ್ತಪಡಿಸಿದರು.

ಪೂವಮ್ಮ ಕರಾವಳಿಯ ಹೆಮ್ಮೆ:
ಈ ಸಂದರ್ಭದಲ್ಲಿ ಮಾತನಾಡಿದ ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರು ಅವರು, “ಎಂ.ಆರ್. ಪೂವಮ್ಮ ಅವರು ಕೇವಲ ಪದಕ ಗೆದ್ದ ಕ್ರೀಡಾಪಟುವಲ್ಲ, ಅವರು ಕರಾವಳಿಯ ಮಣ್ಣಿನ ಹೆಮ್ಮೆ ಹಾಗೂ ಭಾರತದ ಕ್ರೀಡಾ ಲೋಕದ ಧ್ರುವತಾರೆ. ಏಷ್ಯನ್ ಗೇಮ್ಸ್ನ ಅತ್ಯಂತ ಸವಾಲಿನ 4×400 ಮೀಟರ್ ರಿಲೇಯಲ್ಲಿ ಅವರು ತೋರಿದ ಛಲ ಮತ್ತು ಸಾಹಸ ಪ್ರತಿಯೊಬ್ಬ ಭಾರತೀಯನಿಗೂ ರೋಮಾಂಚನ ಉಂಟುಮಾಡಿದೆ. ದೇಶದ ತ್ರಿವರ್ಣ ಧ್ವಜವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ರಾರಾಜಿಸುವಂತೆ ಮಾಡಿದ ಇಂತಹ ಹೆಮ್ಮೆಯ ಸಾಧಕಿಯನ್ನು ಗುರುತಿಸಿ ಪ್ರೋತ್ಸಾಹಿಸುವುದು ಪ್ರತಿಯೊಂದು ಸರ್ಕಾರದ ಆದ್ಯ ಕರ್ತವ್ಯ. ಸರ್ಕಾರ ಜಾಣ ಮೌನ ವಹಿಸಿದರೂ, ನಾವು ಮತ್ತು ನಮ್ಮ ಜನತೆ ಸದಾ ಇಂತಹ ನೈಜ ಸಾಧಕರ ಬೆನ್ನಿಗೆ ನಿಲ್ಲುತ್ತೇವೆ” ಎಂದು ಶ್ಲಾಘಿಸಿದರು.

ಮುಂದಿನ ದಿನಗಳಲ್ಲಿ ಮುಖ್ಯ ಮಂತ್ರಿಗಳ ಭೇಟಿಗೆ ಅವಕಾಶ ಕೇಳಿ ಪೂವಮ್ಮ ರಂತ ಪ್ರತಿಭೆಗೆ ಸರಕಾರ ಮಟ್ಟದಲ್ಲಿ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಒತ್ತಾಯಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಹಾಗೂ ಅವರಂತಹ ಕ್ರೀಡಾ ಪ್ರತಿಭೆಗಳಿಗೆ ಸರ್ಕಾರದಿಂದ ಸಿಗಬೇಕಾದ ಎಲ್ಲಾ ಸೌಲಭ್ಯ, ಪ್ರೋತ್ಸಾಹಧನ ಹಾಗೂ ಉದ್ಯೋಗ ಭದ್ರತೆ ದೊರಕಿಸಿಕೊಡಲು ಪಕ್ಷಾತೀತವಾಗಿ ಮತ್ತು ಸದನದ ಒಳಗೂ-ಹೊರಗೂ ಸಂಪೂರ್ಣ ಒತ್ತಡ ಹೇರಲಾಗುವುದು ಎಂದು ಶಾಸಕರು ಭರವಸೆ ನೀಡಿದರು.

