ದೈವ ಪರಿಚಾರಕರ ಕ್ಷೇಮಾಭಿವೃದ್ಧಿಗೆ ‘ಕೊಡಿಯಾಡಿತ ನಿರೇಲ್ ಇರುವರದ ಲೇಸ್ ದ ಗೌಜಿ’ಅ.5ರಂದು ಮಂಗಳೂರಿನ ಪುರಭವನದಲ್ಲಿ ಕಾರ್ಯಕ್ರಮ; 500ಕ್ಕೂ ಹೆಚ್ಚು ಪರಿಚಾರಕರಿಗೆ ವಿಮಾ ಯೋಜನೆ

ಮಂಗಳೂರು: ತುಳುನಾಡಿನ ದೈವಾರಾಧನೆ ಪರಂಪರೆಯನ್ನು ಸಂರಕ್ಷಿಸುವುದರ ಜತೆಗೆ ದೈವ ಪರಿಚಾರಕರ ಹಾಗೂ ಅವರ ಕುಟುಂಬಗಳ ಕ್ಷೇಮಾಭಿವೃದ್ಧಿಗೆ ನೆರವಾಗುವ ಉದ್ದೇಶದಿಂದ ತುಳುನಾಡ ದೈವ ಪರಿಚಾರಕರ ಕ್ಷೇಮಾಭಿವೃದ್ಧಿ ಟ್ರಸ್ಟ್ (ರಿ.) ಮಂಗಳೂರು ವತಿಯಿಂದ ‘ಕೊಡಿಯಾಡಿತ ನಿರೇಲ್ ಇರುವರಾದ ಲೇಸ್ ದ ಗೌಜಿ’ ಕಾರ್ಯಕ್ರಮವನ್ನು ಅ.5ರಂದು ಮಂಗಳೂರಿನ ಪುರಭವನದಲ್ಲಿ ಆಯೋಜಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಲಕ್ಷ್ಮೀ ನಾರಾಯಣ ಎಂ. ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ಕರಾವಳಿ ಭಾಗದಿಂದ ಕಾಸರಗೋಡು–ಚಂದ್ರಗಿರಿ ವರೆಗೆ ವ್ಯಾಪಿಸಿರುವ ತುಳುನಾಡು ತನ್ನದೇ ಆದ ಶ್ರೀಮಂತ ಜಾನಪದ, ಸಾಂಸ್ಕೃತಿಕ ಹಾಗೂ ಆರಾಧನಾ ಪರಂಪರೆಯನ್ನು ಹೊಂದಿದೆ. ಅದರಲ್ಲೂ ದೈವಾರಾಧನೆಗೆ ವಿಶೇಷ ಗೌರವ ಹಾಗೂ ಸ್ಥಾನಮಾನವಿದೆ. ಗ್ರಾಮ ದೈವಗಳು, ರಾಜನ್ ದೈವಗಳು, ಮನೆ ದೈವಗಳು, ಗುತ್ತು–ಜಾಗದ ದೈವಗಳು ಸೇರಿದಂತೆ ವಿವಿಧ ದೈವಗಳನ್ನು ತುಳುನಾಡಿನ ಜನರು ಶ್ರದ್ಧಾ–ಭಕ್ತಿಯಿಂದ ಆರಾಧಿಸುತ್ತಿದ್ದಾರೆ ಎಂದರು.

ದೈವಾರಾಧನೆಯ ಕೋಲ, ನೇಮ, ಮಾನೆಚ್ಚಿಲು ಮೊದಲಾದ ಸೇವಾ ಸಂದರ್ಭಗಳಲ್ಲಿ ದೈವವು ದೈವಪಾತ್ರಿಯ ಮೂಲಕ ನಂಬಿದ ಕುಟುಂಬಗಳಿಗೆ ಅಭಯದ ನುಡಿ ನೀಡಿ ಧೈರ್ಯ ಹಾಗೂ ವಿಶ್ವಾಸ ತುಂಬುತ್ತದೆ. ಇಂತಹ ಶ್ರೀಮಂತ ಪರಂಪರೆಯನ್ನು ಅದರ ವಿಧಿ–ವಿಧಾನ, ಸಂಪ್ರದಾಯ ಹಾಗೂ ಕಟ್ಟುಪಾಡುಗಳೊಂದಿಗೆ ಮುಂದಿನ ಪೀಳಿಗೆಗೆ ಕೊಂಡೊಯ್ಯುವಲ್ಲಿ ದೈವ ಪರಿಚಾರಕರ ಪಾತ್ರ ಮಹತ್ವದ್ದಾಗಿದೆ ಎಂದು ಅವರು ಹೇಳಿದರು.

ದೈವದ ಸೇವೆಯಲ್ಲಿ ತೊಡಗಿಸಿಕೊಂಡಿರುವ ಹದಿನಾರು ವರ್ಗದ ಪರಿಚಾರಕರಲ್ಲಿ ಬಹುತೇಕರು ದೈವಸೇವೆಯಿಂದ ದೊರೆಯುವ ಗೌರವಧನದಿಂದಲೇ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ಅಪಘಾತ, ಗಂಭೀರ ಅನಾರೋಗ್ಯ ಅಥವಾ ಇತರ ತುರ್ತು ಸಂದರ್ಭಗಳಲ್ಲಿ ಅವರಿಗೆ ಹಾಗೂ ಕುಟುಂಬಕ್ಕೆ ಆರ್ಥಿಕ ಸಂಕಷ್ಟ ಎದುರಾಗುತ್ತದೆ. ಈ ಹಿನ್ನೆಲೆಯಲ್ಲಿ ಪರಿಚಾರಕರಿಗೆ ವಿಮಾ ಯೋಜನೆ, ಮಕ್ಕಳ ಶಿಕ್ಷಣಕ್ಕೆ ನೆರವು, ಅನಾರೋಗ್ಯಪೀಡಿತರಿಗೆ ವೈದ್ಯಕೀಯ ನೆರವು ಹಾಗೂ ಬಡ ಕುಟುಂಬಗಳ ಹೆಣ್ಣುಮಕ್ಕಳ ವಿವಾಹಕ್ಕೆ ಸಹಾಯ ಸೇರಿದಂತೆ ಹಲವು ಯೋಜನೆಗಳನ್ನು ಟ್ರಸ್ಟ್ ರೂಪಿಸಿದೆ ಎಂದರು.

ಕಳೆದ ಬಾರಿ ಹೃದಯಾಘಾತದಿಂದ ಮೃತಪಟ್ಟ ಸುದೇಶ್ ಪೂಜಾರಿ ಕಾವೂರ್ ಶಾಂತಿ ನಗರ ಅವರ ಕುಟುಂಬ ಆರ್ಥಿಕ ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಟ್ರಸ್ಟ್ ವತಿಯಿಂದ ₹1.07 ಲಕ್ಷ ನೆರವು ನೀಡಲಾಗಿತ್ತು. ಇದೇ ರೀತಿ ಅನಾರೋಗ್ಯಕ್ಕೆ ಒಳಗಾದ ಹಲವು ದೈವ ಪರಿಚಾರಕರಿಗೆ ಸಹಾಯ ಮಾಡಲಾಗಿದೆ. ಕಳೆದ ವರ್ಷ 400ರಿಂದ 450 ಮಂದಿ ದೈವನರ್ತಕರು ಹಾಗೂ ದೈವ ಪರಿಚಾರಕರಿಗೆ ವಿಮೆ ಮಾಡಿಸಲಾಗಿದ್ದು, ಈ ಬಾರಿ 500ಕ್ಕೂ ಹೆಚ್ಚು ಮಂದಿಗೆ ವಿಮಾ ಯೋಜನೆ ಕಲ್ಪಿಸುವ ಕಾರ್ಯ ನಡೆಯುತ್ತಿದೆ ಎಂದು ಲಕ್ಷ್ಮೀ ನಾರಾಯಣ ತಿಳಿಸಿದರು.

ಟ್ರಸ್ಟ್ ಉಪಾಧ್ಯಕ್ಷ ವಿಜಯ್ ಚೌಟ ಕೆಂಜಾರು ಮಾತನಾಡಿ, ದೈವಗಳ ವೇಷಭೂಷಣ ಧರಿಸಿ ಚಲನಚಿತ್ರ, ನಾಟಕ, ಸಾಮಾಜಿಕ ಜಾಲತಾಣ ಸೇರಿದಂತೆ ವಿವಿಧ ಮಾಧ್ಯಮಗಳಲ್ಲಿ ದೈವಗಳನ್ನು ಅಪಮಾನಿಸುವ ಅಥವಾ ಅವಮಾನಿಸುವ ಕೃತ್ಯಗಳ ವಿರುದ್ಧ ಕಾನೂನುಬದ್ಧ ಹೋರಾಟ ನಡೆಸುವುದು ಟ್ರಸ್ಟ್‌ನ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ. ದೈವಾರಾಧನೆಯ ಸಂಪ್ರದಾಯ ಮತ್ತು ಕಟ್ಟುಪಾಡುಗಳಿಗೆ ಧಕ್ಕೆ ಬಾರದಂತೆ ದೈವ ಪರಿಚಾರಕರಿಗೆ ಮಾರ್ಗದರ್ಶನ ನೀಡುವುದರ ಜತೆಗೆ ಹಿರಿಯ ದೈವ ಪರಿಚಾರಕರಿಂದ ಕಿರಿಯರಿಗೆ ದೈವಾರಾಧನೆಯ ವಿಧಿ–ವಿಧಾನ ಹಾಗೂ ಸಂಪ್ರದಾಯಗಳ ಬಗ್ಗೆ ಜ್ಞಾನ ಹಸ್ತಾಂತರಿಸುವ ಕಾರ್ಯಕ್ಕೂ ಆದ್ಯತೆ ನೀಡಲಾಗುತ್ತಿದೆ ಎಂದರು.

ದೈವಸೇವೆ ಮಾಡುವವರ ಜೀವನ ಭದ್ರತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು 2024ರ ನ.11ರಂದು ಟ್ರಸ್ಟ್ ಸ್ಥಾಪಿಸಲಾಗಿದ್ದು, 2025ರ ಜ.28ರಂದು ಅಧಿಕೃತವಾಗಿ ನೋಂದಣಿ ಮಾಡಲಾಗಿದೆ. ಕಳೆದ ಸಾಲಿನಲ್ಲಿ ದಾನಿಗಳ ನೆರವಿನಿಂದ ಹಲವು ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದ್ದು, ಈ ವರ್ಷವೂ ಪರಿಚಾರಕರ ಕಲ್ಯಾಣಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಟ್ರಸ್ಟ್ ಕಾರ್ಯದರ್ಶಿ ಉದಯ್ ಪೂಜಾರಿ ಮರ್ನಬೈಲ್ ಮಾತನಾಡಿ, ದೈವ ಪರಿಚಾರಕರಿಗೆ ಬೆನ್ನೆಲುಬಾಗಿ ನಿಲ್ಲುವುದು ಟ್ರಸ್ಟ್‌ನ ಪ್ರಮುಖ ಉದ್ದೇಶವಾಗಿದೆ. ದೈವಗಳಿಗೆ ಅಪಮಾನವಾಗುವ ಕೃತ್ಯಗಳ ವಿರುದ್ಧ ಕಾನೂನು ಹೋರಾಟ ನಡೆಸುವುದರ ಜತೆಗೆ, ಸಂಕಷ್ಟದಲ್ಲಿರುವ ಪರಿಚಾರಕರ ಕುಟುಂಬಗಳಿಗೆ ನೆರವು ನೀಡಲಾಗುವುದು. ಮರಣ ಹೊಂದಿದ ಸದಸ್ಯರ ಕುಟುಂಬಕ್ಕೆ ವಿಮಾ ಸೌಲಭ್ಯದ ಜತೆಗೆ ಟ್ರಸ್ಟ್ ವತಿಯಿಂದ ₹50 ಸಾವಿರದವರೆಗೆ ಸಾಂತ್ವನ ನೆರವು ನೀಡುವ ಯೋಜನೆಯೂ ಇದೆ ಎಂದರು.

ಟ್ರಸ್ಟ್ ಆರಂಭದಲ್ಲಿ ನಾಲ್ವರು ಸದಸ್ಯರೊಂದಿಗೆ ಪ್ರಾರಂಭವಾಗಿದ್ದು, ಇದೀಗ 400ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ. ಶೀಘ್ರದಲ್ಲೇ ಸದಸ್ಯರ ಸಂಖ್ಯೆ 500 ದಾಟುವ ನಿರೀಕ್ಷೆಯಿದೆ. ದಾನಿಗಳು ಹಾಗೂ ಸಾರ್ವಜನಿಕರ ಸಹಕಾರದಿಂದ ಸಂಘಟನೆ ಬಲಿಷ್ಠವಾಗಿ ಬೆಳೆಯುತ್ತಿದೆ. ಬಡತನದಲ್ಲಿರುವ ಕುಟುಂಬಗಳಿಗೆ ಮನೆ ನಿರ್ಮಾಣ, ಮಕ್ಕಳ ಶಿಕ್ಷಣ ಹಾಗೂ ಬಡ ಕುಟುಂಬಗಳ ಹೆಣ್ಣುಮಕ್ಕಳ ವಿವಾಹಕ್ಕೆ ನೆರವು ನೀಡುವ ಉದ್ದೇಶವೂ ಟ್ರಸ್ಟ್ ಹೊಂದಿದೆ ಎಂದು ತಿಳಿಸಿದರು.

ಅ.5ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 3ರವರೆಗೆ ಪುರಭವನದಲ್ಲಿ ನಡೆಯುವ ಕಾರ್ಯಕ್ರಮವು ಟ್ರಸ್ಟ್ ಅಧ್ಯಕ್ಷ ಲಕ್ಷ್ಮೀ ನಾರಾಯಣ ಎಂ. ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮಾವಂತೂರು ಶ್ರೀ ದುರ್ಗಾಪ್ರಸಾದ್ ಶೆಟ್ಟಿ ಗಡಿಕಾರರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಬಲವಂಡಿ ಪಿಚ್ಚಂಡಿ ಕ್ಷೇತ್ರ ಮಾವಂತೂರು ಅವರಿಂದ ದೀಪ ಬೆಳಗಿಸುವ ಕಾರ್ಯಕ್ರಮ ನಡೆಯಲಿದೆ. ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅವರು ಟ್ರಸ್ಟ್‌ನ ಸಾಮಾಜಿಕ ಜಾಲತಾಣವನ್ನು ಲೋಕಾರ್ಪಣೆಗೊಳಿಸಲಿದ್ದಾರೆ.

ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಸಂಸ್ಥಾಪಕ ಪಟ್ಲ ಸತೀಶ್ ಶೆಟ್ಟಿ ಅವರು ಫಲಾನುಭವಿಗಳಿಗೆ ವಿಮಾ ಯೋಜನೆಯ ಹಸ್ತಾಂತರ ಮಾಡಲಿದ್ದು, ಸಾಲ್ಯಾನ್ ಕುಟುಂಬ ಕೂರ್ಮನ್ ಕಲ್ಲಡ್ಕದ ಯಜಮಾನ ವಿಶ್ವನಾಥ ಪೂಜಾರಿ ಅವರು ಟ್ರಸ್ಟ್ ಸದಸ್ಯರಿಗೆ ಡಿಜಿಟಲ್ ಗುರುತಿನ ಚೀಟಿ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. 2025–26ನೇ ಸಾಲಿನಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಟ್ರಸ್ಟ್ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು.

ಬೆಳಗ್ಗೆ 11.30ಕ್ಕೆ ಜಿಲ್ಲೆಯ ಹೆಸರಾಂತ ‘ಚಾ ಪರ್ಕ’ ತಂಡದ ಕಲಾವಿದರ ಕೂಡುವಿಕೆಯಲ್ಲಿ ಸಾಮಾಜಿಕ ತುಳು ಹಾಸ್ಯಮಯ ನಾಟಕ ಪ್ರದರ್ಶನ ನಡೆಯಲಿದೆ.

ಅ.8ರಂದು ಕಾವೂರು ಸೊಸೈಟಿ ಹಾಲ್‌ನಲ್ಲಿ ಅಂಚೆ ಇಲಾಖೆಯ ಸಹಯೋಗದೊಂದಿಗೆ ವಿಮಾ ಯೋಜನೆ ಹಾಗೂ ಎ.ಜೆ. ಆಸ್ಪತ್ರೆಯ ಸಹಕಾರದಲ್ಲಿ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದು ಟ್ರಸ್ಟ್ ಪದಾಧಿಕಾರಿಗಳು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಂಟಿ ಕಾರ್ಯದರ್ಶಿ ದಿನೇಶ್ ಕಕ್ಕೆಪದವು, ಕೋಶಾಧಿಕಾರಿ ಜಿತೇಶ್ ಮಡ್ಯಾರ್, ಜೊತೆ ಕೋಶಾಧಿಕಾರಿ ಸುದರ್ಶನ್ ಸನಿಲ್ ಅಬ್ಬೆಟ್ಟು ಮೇರಮಜಲ್ ಅಬ್ಬೆಟ್ಟು ಹಾಗೂ ಕಾರ್ಯಕ್ರಮ ಸಂಘಟಕ ಹೊನ್ನಯ್ಯ ಪೂಜಾರಿ ಪೆರಾರ ಬಜಪೆ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!