ಮಂಗಳೂರು:ಮಹಾತ್ಮ ಗಾಂಧೀಜಿಯವರ ಅಹಿಂಸಾ ತತ್ವ ಮತ್ತು ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ ಕೊಡುಗೆ ಇಂದಿಗೂ ಜಗತ್ತಿಗೆ ಪ್ರೇರಣೆಯಾಗಿದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಗಾಂಧಿ ಜಯಂತಿ ಅಂಗವಾಗಿ ನಗರದ ಅಂಬೇಡ್ಕರ್ ವೃತ್ತದಿಂದ ರಾಜಾಜಿ ಪಾರ್ಕ್ವರೆಗೆ ಸದ್ಭಾವನಾ ನಡಿಗೆ ನಡೆಯಿತು. ಬಳಿಕ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ರಮಾನಾಥ ರೈ ಮಾತನಾಡಿದರು.

ದೇಶ ಸ್ವಾತಂತ್ರ್ಯ ಪಡೆಯುವಲ್ಲಿ ಮಹಾತ್ಮ ಗಾಂಧೀಜಿಯವರ ಕೊಡುಗೆ ಅತ್ಯಂತ ಮಹತ್ವದ್ದಾಗಿದೆ. ಅವರ ಅಹಿಂಸಾ ತತ್ವವನ್ನು ವಿಶ್ವದ ಅನೇಕ ರಾಷ್ಟ್ರಗಳು ಸ್ವೀಕರಿಸಿವೆ. 80ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಗಾಂಧೀಜಿಯವರ ಪ್ರತಿಮೆಗಳನ್ನು ನಿರ್ಮಿಸಿರುವುದು ಅವರ ತತ್ವ-ಆದರ್ಶಗಳಿಗೆ ಜಗತ್ತು ನೀಡುತ್ತಿರುವ ಗೌರವಕ್ಕೆ ಸಾಕ್ಷಿಯಾಗಿದೆ ಎಂದರು.
ಗಾಂಧೀಜಿಯವರ ವಿಚಾರಧಾರೆ ಹಾಗೂ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಅಗತ್ಯವಿದೆ. ಯುವಜನತೆ ಗಾಂಧೀಜಿಯವರ ಜೀವನ ಮತ್ತು ಹೋರಾಟದ ಬಗ್ಗೆ ಹೆಚ್ಚು ಅಧ್ಯಯನ ಮಾಡಬೇಕು ಎಂದು ರಮಾನಾಥ ರೈ ಕರೆ ನೀಡಿದರು.

ಜಗತ್ತೇ ಗೌರವಿಸುವ ಮಹಾತ್ಮ ಗಾಂಧೀಜಿಯವರನ್ನು ದೇಶದವರೇ ಟೀಕಿಸುವುದು ಬೇಸರದ ಸಂಗತಿ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ಕೊಡುಗೆಯನ್ನು ಅರಿತುಕೊಳ್ಳುವ ಅಗತ್ಯವಿದೆ ಎಂದು ಅವರು ಹೇಳಿದರು.
ವಿಧಾನ ಪರಿಷತ್ ಸದಸ್ಯ ಡಾ. ಮಂಜುನಾಥ್ ಭಂಡಾರಿ ಮಾತನಾಡಿ, ಗಾಂಧೀಜಿಯವರ ವಿಚಾರಧಾರೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಸದ್ಭಾವನಾ ನಡಿಗೆ ಆಯೋಜಿಸಲಾಗಿದೆ ಎಂದರು.

ಗಾಂಧೀಜಿಯವರ ಬಗ್ಗೆ ಮಾತನಾಡುವುದಕ್ಕಿಂತ ಅವರ ವಿಚಾರಗಳನ್ನು ಆಲಿಸುವುದು ಮತ್ತು ಅರ್ಥಮಾಡಿಕೊಳ್ಳುವುದು ಸಂತೋಷದ ಸಂಗತಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಗೇರು ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಮಾಜಿ ಶಾಸಕ ಜೆ.ಆರ್. ಲೋಬೊ, ಮುಖಂಡರಾದ ಶಶಿಧರ್ ಹೆಗ್ಡೆ, ಸಲೀಂ, ಬೇಬಿ ಕುಂದರ್, ಚಂದ್ರಶೇಖರ್ ಭಂಡಾರಿ, ಅಪ್ಪಿ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಆಶ್ರಫ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಯೂತ್ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಜ್ ಸ್ವಾಗತಿಸಿದರು.
ಗಾಂಧಿ ಜಯಂತಿಯ ಸಂದೇಶದೊಂದಿಗೆ ನಡೆದ ಸದ್ಭಾವನಾ ನಡಿಗೆ, ಅಹಿಂಸೆ ಮತ್ತು ಸಾಮರಸ್ಯದ ಮಹತ್ವವನ್ನು ಸಾರಿತು.

