ಪುತ್ತೂರು: ಅಕ್ರಮವಾಗಿ ಜಾನುವಾರುಗಳನ್ನು ಕೇರಳದ ಕಡೆಗೆ ಸಾಗಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ಗ್ರಾಮಾಂತರ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ದಿನಾಂಕ 05-10-2026ರಂದು ಬೆಳಗಿನ ಜಾವ, ಪಿಕಪ್ ವಾಹನದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಕೇರಳದ ಕಡೆಗೆ ಸಾಗಾಟ ಮಾಡುತ್ತಿರುವ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಸುಷ್ಮಾ ಜಿ. ಭಂಡಾರಿ ಅವರಿಗೆ ಮಾಹಿತಿ ಲಭಿಸಿತ್ತು.
ಮಾಹಿತಿ ಮೇರೆಗೆ ಪೊಲೀಸರು ಸಿಬ್ಬಂದಿಗಳೊಂದಿಗೆ ಪುತ್ತೂರು ಬಲ್ನಾಡು ಗ್ರಾಮದ ಬಿಳಿಯೂರುಕಟ್ಟೆ ಎಂಬಲ್ಲಿ KA-19-AF-8558 ನೋಂದಣಿಯ ಪಿಕಪ್ ವಾಹನವನ್ನು ತಡೆದು ಪರಿಶೀಲನೆ ನಡೆಸಿದ್ದಾರೆ.

ಈ ವೇಳೆ ವಾಹನದಲ್ಲಿದ್ದ ಚಾಲಕ ಹಾಗೂ ಮತ್ತೋರ್ವ ವ್ಯಕ್ತಿ ಪರಾರಿಯಾಗಿದ್ದು, ವಾಹನವನ್ನು ಪರಿಶೀಲಿಸಿದಾಗ 11 ಜಾನುವಾರುಗಳನ್ನು ಹಿಂಸಾತ್ಮಕವಾಗಿ ತುಂಬಿರುವುದು ಪತ್ತೆಯಾಗಿದೆ.
ಯಾವುದೇ ಪರವಾನಗಿ ಇಲ್ಲದೆ ಜಾನುವಾರುಗಳನ್ನು ಮಾಂಸಕ್ಕಾಗಿ ಮಾರಾಟ ಮಾಡುವ ಉದ್ದೇಶದಿಂದ ಕೇರಳದ ಕಡೆಗೆ ಸಾಗಾಟ ಮಾಡಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 125/2026, ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020ರ ಕಲಂ 4, 6, 7, 12 ಹಾಗೂ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ, 1960ರ ಕಲಂ 11(d) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಪ್ರಕರಣದ ತನಿಖೆ ನಡೆಸಿದ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು, ಅಗತ್ಯ ಪರವಾನಗಿ ಇಲ್ಲದೆ ಜಾನುವಾರುಗಳನ್ನು ಮಾರಾಟ ಮಾಡಿದ ಆರೋಪದ ಮೇಲೆ ಪುತ್ತೂರು ಆರ್ಯಾಪು ನಿವಾಸಿ ಶಿವಪ್ರಸಾದ್ (52) ಎಂಬಾತನನ್ನು ದಸ್ತಗಿರಿ ಮಾಡಿದ್ದಾರೆ.

