ಮಂಗಳೂರು: ತುಳುನಾಡ ದೈವಪರಿಚಾರಕರ ಕ್ಷೇಮಾಭಿವೃದ್ಧಿ ಟ್ರಸ್ಟ್ ಕುಡ್ಲ ವತಿಯಿಂದ ‘ಕೊಡಿಯಡಿತ ನಿರೇಲ್–ಇರುವರದ ಲೇಸ್ ದ ಗೌಜಿ’ ಕಾರ್ಯಕ್ರಮ ಸೋಮವಾರ ನಗರದ ಪುರಭವನದಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾವಂತೂರು ಗುತ್ತು ಬಲವಾಂಡಿ ಪಿಲ್ಚಂಡಿ ದೈವ ಕ್ಷೇತ್ರದ ಗಡಿಕಾರ ಮಾವಂತೂರು ದುರ್ಗದಾಸ್ ಶೆಟ್ಟಿ, ದೈವಪರಿಚಾರಕರು ಸಂಘಟಿತರಾಗಿ ಪರಸ್ಪರ ಸಹಕಾರದೊಂದಿಗೆ ಮುನ್ನಡೆಯುವ ಉದ್ದೇಶದಿಂದ ಟ್ರಸ್ಟ್ ರಚಿಸಿರುವುದು ಶ್ಲಾಘನೀಯ. ಇಂದು ದೈವಾರಾಧನೆ ಮನರಂಜನೆಯ ಮಟ್ಟಕ್ಕೆ ತಲುಪುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಇಂತಹ ಪ್ರವೃತ್ತಿಯ ವಿರುದ್ಧ ಧ್ವನಿ ಎತ್ತುವ ಅಗತ್ಯವಿದೆ ಎಂದರು.

ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅವರು ಟ್ರಸ್ಟ್ನ ಸಾಮಾಜಿಕ ಜಾಲತಾಣವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ, ದೈವದ ಕೊಡಿ ಅಡಿಯಲ್ಲಿ ಚಾಕರಿ ಮಾಡುವ ದೈವಪರಿಚಾರಕರು ಟ್ರಸ್ಟ್ ಮೂಲಕ ಸಂಘಟಿತರಾಗಿರುವುದು ಮಹತ್ವದ ಬೆಳವಣಿಗೆಯಾಗಿದೆ. ಇದರಿಂದ ಸರಕಾರದ ಮಟ್ಟದಲ್ಲಿ ದೊರೆಯುವ ವಿವಿಧ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗಲಿದೆ. ಪರಿಚಾರಕರ ಸಮುದಾಯದ ಎಲ್ಲರೂ ಇದರ ಪ್ರಯೋಜನ ಪಡೆದುಕೊಳ್ಳುವಂತಾಗಬೇಕು ಎಂದರು.
ದೈವಾರಾಧನೆಯ ಪದ್ಧತಿ, ಆಚಾರ–ವಿಚಾರ ಹಾಗೂ ಸಂಪ್ರದಾಯಗಳ ಕುರಿತು ಯುವಜನತೆ ಮತ್ತು ಮಕ್ಕಳಿಗೆ ಅರಿವು ಮೂಡಿಸುವ ಕಾರ್ಯಗಳು ನಿರಂತರವಾಗಿ ನಡೆಯಬೇಕು. ದೈವವನ್ನು ನಿರ್ಲಕ್ಷಿಸುವ ಅಥವಾ ದೈವಕ್ಕೆ ಅವಮಾನವಾಗುವಂತಹ ಯಾವುದೇ ಚಟುವಟಿಕೆಗಳಿಗೆ ಅವಕಾಶ ನೀಡಬಾರದು ಎಂದು ಅವರು ಹೇಳಿದರು.

ಶ್ರೀ ಕ್ಷೇತ್ರ ಪೆರಾರ ಬಲವಾಂಡಿ ದೈವದ ಮುಕ್ಕಲ್ದಿ ಬಾಲಕೃಷ್ಣ ಶೆಟ್ಟಿ ಅಳಿಕೆ ಗುತ್ತು ಮಾತನಾಡಿ, ದೈವದ ಕಲದಲ್ಲಿ ಚಿತ್ರೀಕರಣ ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸುವ ಅಗತ್ಯವಿದೆ. ದೈವವು ಯಾವುದೇ ಕಾರಣಕ್ಕೂ ಮಾರಾಟದ ಸರಕಾಗಬಾರದು. ದೈವಾರಾಧನೆಯ ಪಾವಿತ್ರ್ಯ ಮತ್ತು ಸಂಪ್ರದಾಯವನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕಲ್ಲಡ್ಕ ಕುರ್ಮ್ಮಣ್ ಸಾಲ್ಯಾನ್ ಕುಟುಂಬದ ಯಾಜಮಾನ ವಿಶ್ವನಾಥ ಪೂಜಾರಿ ಅವರು ಟ್ರಸ್ಟ್ನ ಪದಾಧಿಕಾರಿಗಳಿಗೆ ಗುರುತಿನ ಚೀಟಿ ಹಸ್ತಾಂತರಿಸಿದರು. ಬೆಂಗಳೂರಿನ ಉದ್ಯಮಿ ಶ್ರೀಕಾಂತ್ ಕರ್ಕೇರ ಅವರು ಫಲಾನುಭವಿಗಳಿಗೆ ವಿಮಾ ಯೋಜನೆಯ ಸೌಲಭ್ಯಗಳನ್ನು ವಿತರಿಸಿದರು. ಎಸ್ಎಸ್ಎಲ್ಸಿ, ಪಿಯುಸಿ ಹಾಗೂ ಪದವಿ ಹಂತದಲ್ಲಿ ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಫಲಾನುಭವಿಗಳಿಗೆ ವೈದ್ಯಕೀಯ ನೆರವಿನ ಚೆಕ್ಗಳನ್ನು ವಿತರಿಸಲಾಯಿತು. ನಟ ಹಾಗೂ ನಿರ್ದೇಶಕ ದೇವದಾಸ್ ಕಾಪಿಕಾಡ್ ಅವರನ್ನು ಸನ್ಮಾನಿಸಲಾಯಿತು.

ಟ್ರಸ್ಟ್ ಅಧ್ಯಕ್ಷ ಲಕ್ಷ್ಮಿನಾರಾಯಣ ಎಂ. (ಅಣ್ಣು ಪೂಜಾರಿ) ಅಧ್ಯಕ್ಷತೆ ವಹಿಸಿದ್ದರು. ಕಾವೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಲೋಕೇಶ್ ಭಂಡಾರಿ, ಉದ್ಯಮಿ ಹಾಗೂ ಕೂಳೂರು ಮಲರಾಯಸಾನದ ಉಮೇಶ್, ಉದ್ಯಮಿ ತುಷಾರ್ ಸುರೇಶ್ ಸುರತ್ಕಲ್ ಉಪಸ್ಥಿತರಿದ್ದರು.
ದಿನೇಶ್ ಕಕ್ಕೆಪದವು ಸ್ವಾಗತಿಸಿದರು. ಹರ್ಷ ಕುಮಾರ್ ಪ್ರಸ್ತಾವನೆಗೈದರು. ವಿಜಯ್ ಚೌಟ ವಂದಿಸಿದರು.

