ಕೊಳಲಗಿರಿ–ಪರಾರಿ ಸೇತುವೆ ದುಸ್ಥಿತಿ: ತಕ್ಷಣ ದುರಸ್ತಿ, ಸಿಸಿಟಿವಿ ಅಳವಡಿಕೆಗೆ ಆಗ್ರಹ

ಉಡುಪಿ, ಜು.16:ಉಡುಪಿ ನಗರಸಭೆ ವ್ಯಾಪ್ತಿಯ ಕೊಳಲಗಿರಿ–ಪರಾರಿ–ಮಣಿಪಾಲ ಸಂಪರ್ಕಿಸುವ ಶೀಮ್ರಾ (ಪರಂಪಳ್ಳಿ) ಸೇತುವೆ ತೀವ್ರ ದುಸ್ಥಿತಿಯಲ್ಲಿದ್ದು, ಸಾರ್ವಜನಿಕರು, ಮಹಿಳೆಯರು ಹಾಗೂ ವಾಹನ ಸವಾರರ ಸುರಕ್ಷತೆಗೆ ಗಂಭೀರ ಅಪಾಯ ಎದುರಾಗಿದೆ. ಸೇತುವೆಯನ್ನು ತಕ್ಷಣ ದುರಸ್ತಿ ಮಾಡಿ ಅಗತ್ಯ ಮೂಲಸೌಕರ್ಯ ಕಲ್ಪಿಸುವಂತೆ ಉಡುಪಿ ಜಿಲ್ಲೆಯ ಸಾಮಾಜಿಕ ಕಾರ್ಯಕರ್ತ ಹಾಗೂ ಸಮಾಜಸೇವಕ ಸತೀಶ್ ಪೂಜಾರಿ ಕೀಳಂಜೆ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮಣಿಪಾಲ, ಕೆಎಂಸಿ ಆಸ್ಪತ್ರೆ, ಬ್ರಹ್ಮಾವರ, ಪೆರಡೂರು, ಮಂದರ್ತಿ, ಕೊಕ್ಕರ್ಣೆ ಸೇರಿದಂತೆ ವಿವಿಧ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಈ ಸೇತುವೆಯ ಮೂಲಕ ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುತ್ತಿವೆ. ಆದರೆ ಸೇತುವೆಯ ಮೇಲಿನ ಬೀದಿ ದೀಪಗಳು ಕಳೆದ ಒಂದು ವರ್ಷದಿಂದ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದ ರಾತ್ರಿ ವೇಳೆ ಸಂಪೂರ್ಣ ಕತ್ತಲು ಆವರಿಸಿ ಅಪಘಾತಗಳ ಭೀತಿ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.

ಸೇತುವೆಯ ಮೇಲೆ ವಾಹನಗಳನ್ನು ನಿಲ್ಲಿಸಿ ಮದ್ಯಪಾನ, ಅಕ್ರಮ ಗುಂಪುಗೂಡುವಿಕೆ ನಡೆಯುತ್ತಿದ್ದು, ಮಹಿಳೆಯರು ಹಾಗೂ ಸಾರ್ವಜನಿಕರಿಗೆ ಆತಂಕದ ವಾತಾವರಣ ನಿರ್ಮಾಣವಾಗಿದೆ. ಅಲ್ಲದೆ ಸೇತುವೆಯ ಮೇಲೆ ಕಸ ಹಾಗೂ ಖಾಲಿ ಮದ್ಯದ ಬಾಟಲಿಗಳು ಬಿದ್ದಿರುವುದರಿಂದ ಸ್ವಚ್ಛತೆಗೂ ಧಕ್ಕೆಯಾಗಿದೆ ಎಂದು ಅವರು ದೂರಿದ್ದಾರೆ.

ಈ ಕುರಿತು ಶಾಸಕರು, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ನಗರಸಭೆ ಆಯುಕ್ತರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ, ಇದುವರೆಗೆ ಯಾವುದೇ ಶಾಶ್ವತ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸೇತುವೆಯನ್ನು ತುರ್ತಾಗಿ ದುರಸ್ತಿ ಮಾಡುವುದು, ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ, ಬೀದಿ ದೀಪಗಳ ದುರಸ್ತಿ, ಸೇತುವೆ ಹಾಗೂ ಸಂಪರ್ಕ ರಸ್ತೆಗಳ ಎರಡೂ ಬದಿಯ ಪೊದೆಗಳ ತೆರವು, ಅಕ್ರಮ ವಾಹನ ನಿಲುಗಡೆ ಮತ್ತು ಗುಂಪುಗೂಡುವಿಕೆ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸತೀಶ್ ಪೂಜಾರಿ ಕೀಳಂಜೆ ಜಿಲ್ಲಾಡಳಿತ ಹಾಗೂ ನಗರಸಭೆಯನ್ನು ಒತ್ತಾಯಿಸಿದ್ದಾರೆ. ಮತ್ತೊಂದು ಅವಘಡ ಸಂಭವಿಸುವ ಮುನ್ನವೇ ಸಂಬಂಧಪಟ್ಟ ಇಲಾಖೆ ಎಚ್ಚೆತ್ತುಕೊಂಡು ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!