ತುಳುವಿಗೆ 8ನೇ ಪರಿಚ್ಛೇದದ ಮಾನ್ಯತೆ, ಕೇರಳದಲ್ಲೂ ಅಧಿಕೃತ ಭಾಷಾ ಸ್ಥಾನಕ್ಕೆ ಆಗ್ರಹ

ಮಂಗಳೂರು: ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವುದರೊಂದಿಗೆ ಕರ್ನಾಟಕದಲ್ಲಿ ರಾಜ್ಯವ್ಯಾಪಿ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ ನೀಡಬೇಕು. ಕೇರಳದಲ್ಲೂ ತುಳುವಿಗೆ ಅಧಿಕೃತ ಭಾಷೆಯ ಸ್ಥಾನಮಾನ ಕಲ್ಪಿಸಬೇಕು ಹಾಗೂ ತುಳು ಭಾಷೆಯ ಆಡಳಿತಾತ್ಮಕ ಅನುಷ್ಠಾನಕ್ಕೆ ಕನಿಷ್ಠ ₹5 ಕೋಟಿ ಅನುದಾನ ನೀಡಬೇಕು ಎಂದು ಜೈ ತುಳುನಾಡ್‌ ಕುಡ್ಲ ಘಟಕದ ಸ್ಥಾಪಕ ಸದಸ್ಯ ಕಿರಣ್‌ ತುಲುವೆ ಒತ್ತಾಯಿಸಿದರು.

ನಗರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತುಳು ಭಾಷೆಯ ಸಮಗ್ರ ಅಭಿವೃದ್ಧಿ, ಸಂರಕ್ಷಣೆ ಹಾಗೂ ಆಡಳಿತಾತ್ಮಕ ಅನುಷ್ಠಾನಕ್ಕಾಗಿ ಸರ್ಕಾರದ ಮುಂದೆ ಹಲವು ಬೇಡಿಕೆಗಳನ್ನು ಮಂಡಿಸಲಾಗುತ್ತಿದೆ ಎಂದರು.

ತುಳು ಭಾಷೆಯನ್ನು ನಿರ್ದಿಷ್ಟ ಜಿಲ್ಲೆಗಳಿಗೆ ಸೀಮಿತಗೊಳಿಸದೆ ಸಂಪೂರ್ಣ ಕರ್ನಾಟಕ ರಾಜ್ಯಕ್ಕೆ ಅನ್ವಯವಾಗುವಂತೆ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ ನೀಡಬೇಕು. ತುಳುವನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಲು ರಾಜ್ಯ ಸರ್ಕಾರ ಕೇಂದ್ರದ ಮೇಲೆ ಅಗತ್ಯ ಒತ್ತಡ ತಂದು ಕ್ರಮ ಕೈಗೊಳ್ಳಬೇಕು. ಕೇರಳದಲ್ಲೂ ತುಳುವಿಗೆ ಅಧಿಕೃತ ಭಾಷಾ ಸ್ಥಾನಮಾನ ನೀಡುವಂತೆ ಅಲ್ಲಿನ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ನಿಟ್ಟಿನಲ್ಲಿ ಈಗಾಗಲೇ #TuluOfficialinKeralam ಸಾಮಾಜಿಕ ಜಾಲತಾಣ ಅಭಿಯಾನ ಆರಂಭಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯನ್ನು ‘ಮಂಗಳೂರು ಜಿಲ್ಲೆ’ ಎಂದು ಮರುನಾಮಕರಣ ಮಾಡಬೇಕು. ತುಳು ಭಾಷೆಯ ಆಡಳಿತಾತ್ಮಕ ಅನುಷ್ಠಾನಕ್ಕೆ ಸ್ಪಷ್ಟ ಕಾರ್ಯಯೋಜನೆ ರೂಪಿಸಿ, ಡಿಜಿಟಲ್ ಹಾಗೂ ಆಡಳಿತಾತ್ಮಕ ಅಭಿವೃದ್ಧಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ತುಳು ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು, ಆಡಳಿತಾತ್ಮಕ ಅನುಷ್ಠಾನಕ್ಕೆ ಕನಿಷ್ಠ ₹5 ಕೋಟಿ ಅನುದಾನ ನೀಡಬೇಕು, ಉಡುಪಿ ಜಿಲ್ಲೆ ಹಾಗೂ ಪುತ್ತೂರಿನಲ್ಲಿ ‘ತುಳು ಭವನ’ ನಿರ್ಮಿಸಬೇಕು ಮತ್ತು ಹಂತ ಹಂತವಾಗಿ ತುಳು ಲಿಪಿಯ ಬಳಕೆಯನ್ನು ಜಾರಿಗೊಳಿಸಬೇಕು ಎಂದು ಕಿರಣ್‌ ತುಲುವೆ ಹೇಳಿದರು.

ಮಾಜಿ ಅಧ್ಯಕ್ಷ ಸುದರ್ಶನ್‌ ಸುರತ್ಕಲ್‌ ಮಾತನಾಡಿ, ಈ ಎಲ್ಲ ಬೇಡಿಕೆಗಳ ಈಡೇರಿಕೆಗಾಗಿ ಜೈ ತುಳುನಾಡ್‌ ಕುಡ್ಲ ಘಟಕವು ಪ್ರಜಾಸತ್ತಾತ್ಮಕ, ಶಾಂತಿಯುತ ಹಾಗೂ ಪಕ್ಷಾತೀತ ಪ್ರಯತ್ನಗಳನ್ನು ಮುಂದುವರಿಸಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷೆ ರಾಜಶ್ರೀ ಚಂದ್ರಶೇಖರ್‌, ಉಪಾಧ್ಯಕ್ಷ ಚೇತನ್‌ ಅಂಚನ್‌ ಮಂಜಲ್‌ಕಟ್ಟೆ, ಮಾಜಿ ಅಧ್ಯಕ್ಷ ಉದಯ್‌ ಪೂಂಜ ತಾರಿಪಾಡಿಗುತ್ತು ಹಾಗೂ ಸಂಘಟನಾ ಕಾರ್ಯದರ್ಶಿ ನಿರಂಜನ್‌ ಕರ್ಕೇರ ಪೊರ್ಕೋಡಿ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!