ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ನಿವೃತ್ತ ಬ್ಯಾಂಕ್ ಉದ್ಯೋಗಿಗೆ ₹2 ಕೋಟಿ ವಂಚನೆ .ಮಂಗಳೂರಿನ ಸೈಬರ್ ಠಾಣಾ ಪೊಲೀಸರಿಂದ ತನಿಖೆ ಚುರುಕು

ಮಂಗಳೂರು: ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಸೈಬರ್ ವಂಚಕರು 75 ವರ್ಷದ ನಿವೃತ್ತ ಬ್ಯಾಂಕ್ ಉದ್ಯೋಗಿಯೊಬ್ಬರಿಂದ ಬರೋಬ್ಬರಿ ₹2 ಕೋಟಿ ವಂಚಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಈ ಸಂಬಂಧ ಮಂಗಳೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಇತ್ತೀಚೆಗೆ ಅಪರಿಚಿತ ವ್ಯಕ್ತಿಯೊಬ್ಬರು ದೂರುದಾರರಿಗೆ ಕರೆ ಮಾಡಿ, ತಾನು ಮುಂಬೈನ ಕೊಲಾಬಾ ಪೊಲೀಸ್ ಠಾಣೆಯ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ. ನಿಮ್ಮ ವಿರುದ್ಧ ಮನಿ ಲಾಂಡರಿಂಗ್, ಡ್ರಗ್ ವ್ಯವಹಾರ ಹಾಗೂ ಮಕ್ಕಳ ಕಳ್ಳಸಾಗಣೆ ಪ್ರಕರಣ ದಾಖಲಾಗಿದೆ ಎಂದು ಹೇಳಿ ಆತಂಕ ಸೃಷ್ಟಿಸಿದ್ದ.
ಅಲ್ಲದೆ, ಅಂತಾರಾಷ್ಟ್ರೀಯ ಮನಿ ಲಾಂಡರಿಂಗ್ ಆರೋಪಿ ನರೇಶ್ ಗೋಯಲ್ ಅವರೊಂದಿಗೆ ನೀವು ಭಾಗಿಯಾಗಿದ್ದೀರಿ ಎಂದು ಆರೋಪಿಗಳು ತಿಳಿಸಿದ್ದಾರೆ. ಬಳಿಕ ವಾಟ್ಸ್‌ಆ್ಯಪ್ ಮೂಲಕ ವಿಡಿಯೋ ಕಾಲ್ ಮಾಡಿ, ತಾನು ಸಮಾಧಾನ್ ಪವಾರ್ ಎಂಬ ಸಿಬಿಐ ಅಧಿಕಾರಿ ಎಂದು ಮತ್ತೊಬ್ಬ ವ್ಯಕ್ತಿ ಪರಿಚಯಿಸಿಕೊಂಡಿದ್ದಾನೆ.

ಇದೇ ವೇಳೆ, ಜಡ್ಜ್ ಚಂದ್ರಚೂಡ್ ಎಂಬವರು ಪ್ರಕರಣದಲ್ಲಿ ಸಹಾಯ ಮಾಡಲಿದ್ದಾರೆ ಎಂದು ಹೇಳಿ ದೂರುದಾರರನ್ನು ಮತ್ತಷ್ಟು ನಂಬಿಸಿದ್ದಾರೆ. ನೀವು ಅಂತರಾಷ್ಟ್ರೀಯ ಮಟ್ಟದ ಅಪರಾಧದಲ್ಲಿ ಭಾಗಿಯಾಗಿದ್ದೀರಿ ಹಾಗೂ ಸುಪ್ರೀಂ ಕೋರ್ಟ್‌ನ ನ್ಯಾಷನಲ್ ಸೀಕ್ರೆಟ್ಸ್ ಆ್ಯಕ್ಟ್ ಪಾಲಿಸಬೇಕಾಗಿದೆ ಎಂದು ಹೇಳಿ ಭಯ ಹುಟ್ಟಿಸಿದ್ದಾರೆ.

ಆತಂಕಗೊಂಡ ದೂರುದಾರರು ಈ ವಿಚಾರವನ್ನು ಯಾರಿಗೂ ತಿಳಿಸದೆ ಆರೋಪಿಗಳ ಸೂಚನೆಯಂತೆ ತಮ್ಮ ಬ್ಯಾಂಕ್ ಖಾತೆಗಳು ಹಾಗೂ ಆಸ್ತಿ ವಿವರಗಳನ್ನು ನೀಡಿದ್ದಾರೆ. ಎರಡು ದಿನಗಳಲ್ಲಿ ಪರಿಶೀಲನೆ ನಡೆಸಿ ಕ್ಲಿಯರೆನ್ಸ್ ನೀಡುವುದಾಗಿ ಆರೋಪಿಗಳು ಭರವಸೆ ನೀಡಿದ್ದಾರೆ.

ನಂತರ ಆರೋಪಿಗಳು ಸೂಚಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಮೊದಲು ₹60 ಲಕ್ಷ, ಬಳಿಕ ₹1.40 ಕೋಟಿ ಸೇರಿದಂತೆ ಒಟ್ಟು ₹2 ಕೋಟಿ ಹಣವನ್ನು ದೂರುದಾರರು ವರ್ಗಾಯಿಸಿದ್ದಾರೆ. ಸೆಪ್ಟೆಂಬರ್ 25ರಿಂದ ಅಕ್ಟೋಬರ್ 5ರ ನಡುವೆ ಈ ಹಣ ವರ್ಗಾವಣೆಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕೊನೆಗೆ ಈ ವಿಚಾರವನ್ನು ತಮ್ಮ ಗೆಳೆಯರೊಬ್ಬರಿಗೆ ತಿಳಿಸಿದಾಗ, ತಾವು ಸೈಬರ್ ವಂಚನೆಗೆ ಬಲಿಯಾಗಿರುವುದು ದೂರುದಾರರಿಗೆ ತಿಳಿದುಬಂದಿದೆ.
ಈ ಸಂಬಂಧ ಮಂಗಳೂರಿನ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಣ ವರ್ಗಾವಣೆಯಾದ ಬ್ಯಾಂಕ್ ಖಾತೆಗಳು, ಆರೋಪಿಗಳ ಮೊಬೈಲ್ ಸಂಖ್ಯೆಗಳು ಹಾಗೂ ಡಿಜಿಟಲ್ ಸಂಪರ್ಕಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

SHARE
Loading spinner

2 thoughts on “ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ನಿವೃತ್ತ ಬ್ಯಾಂಕ್ ಉದ್ಯೋಗಿಗೆ ₹2 ಕೋಟಿ ವಂಚನೆ .ಮಂಗಳೂರಿನ ಸೈಬರ್ ಠಾಣಾ ಪೊಲೀಸರಿಂದ ತನಿಖೆ ಚುರುಕು”

Leave a Reply

Your email address will not be published. Required fields are marked *

error: Content is protected !!