ಮಂಜೇಶ್ವರ: ಸ್ಥಳೀಯ ಬಹುದಿನಗಳ ಬೇಡಿಕೆಯಾಗಿದ್ದ ಮಂಜೇಶ್ವರ ಗೋವಿಂದ ಪೈ ಕಾಲೇಜಿನಿಂದ ನೆತ್ತಿಲಪದವುವರೆಗಿನ ರಸ್ತೆಯ ಅಗಲೀಕರಣ ಕಾಮಗಾರಿಗೆ ಯು.ಡಿ.ಎಫ್. ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮಂಡಿಸಿದ ಮೊದಲ ಬಜೆಟ್ನಲ್ಲಿ ರೂ.1.5 ಕೋಟಿ ಅನುದಾನ ಮಂಜೂರು ಮಾಡಿದೆ.

ಮಂಜೇಶ್ವರ ಕ್ಷೇತ್ರದ ಶಾಸಕ ಎ.ಕೆ.ಎಂ. ಅಶ್ರಫ್ ಅವರ ವಿಶೇಷ ಮುತುವರ್ಜಿ ಹಾಗೂ ನಿರಂತರ ಶ್ರಮದಿಂದಾಗಿ ಈ ಮೊತ್ತ ಮಂಜೂರಾಗಿದ್ದು, ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಯ ನೇತೃತ್ವದಲ್ಲಿ ಕೈಗೆತ್ತಿಕೊಳ್ಳಲಾಗುವುದು.
ಅನುದಾನ ಮಂಜೂರಾದ ಹಿನ್ನೆಲೆಯಲ್ಲಿ ಗುರುವಾರದಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಕಾಮಗಾರಿಯ ಪ್ರಾಥಮಿಕ ಎಸ್ಟಿಮೇಟ್ ತಯಾರಿಸುವ ಪ್ರಕ್ರಿಯೆಯನ್ನು ಸ್ಥಳದಲ್ಲೇ ನಡೆಸಿದರು.

ಈ ಸಂದರ್ಭದಲ್ಲಿ ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯ ಹರ್ಷಾದ್ ವರ್ಕಾಡಿ, ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ಬಶೀರ್ ಸೇರಿದಂತೆ ಪ್ರಮುಖ ಜನಪ್ರತಿನಿಧಿಗಳು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದು ಕಾಮಗಾರಿಯ ರೂಪುರೇಷೆ ಕುರಿತು ಪರಿಶೀಲನೆ ನಡೆಸಿದರು.
ರಸ್ತೆ ಅಗಲೀಕರಣದಿಂದಾಗಿ ಗೋವಿಂದ ಪೈ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸುತ್ತಮುತ್ತಲಿನ ಸಾರ್ವಜನಿಕರ ಸುಗಮ ಸಂಚಾರಕ್ಕೆ ಇದ್ದ ದೊಡ್ಡ ತೊಡಕು ನಿವಾರಣೆಯಾಗಲಿದೆ.



