
ಮಂಗಳೂರು: ಆಸ್ತಿಗಾಗಿ ಮಗಳೇ ತಂದೆಯನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಸುಮಾರು ಎರಡು ತಿಂಗಳ ಹಿಂದೆ ಮೃತಪಟ್ಟಿದ್ದ ಆಲ್ಬರ್ಟ್ ರೇಗೋ ಅವರ ಶವವನ್ನು ಮಂಗಳೂರಿನ ದೇರೆಬೈಲ್ ಚರ್ಚ್ನ ದಫನ ಭೂಮಿಯಿಂದ ಹೊರತೆಗೆಯುವ ಪ್ರಕ್ರಿಯೆ ಆರಂಭಿಸಲಾಗಿದೆ. ಮಂಗಳೂರು ತಹಶೀಲ್ದಾರ್ ಸಮ್ಮುಖದಲ್ಲಿ ಉರ್ವಾ ಪೊಲೀಸರು ಹಾಗೂ ಫಾರೆನ್ಸಿಕ್ ತಜ್ಞರ ತಂಡ ಈ ಕಾರ್ಯಾಚರಣೆ ನಡೆಸುತ್ತಿದ್ದು, ಮೃತದೇಹದ ಅವಶೇಷಗಳನ್ನು ಪರೀಕ್ಷೆಗೆ ಒಳಪಡಿಸಲು ಸಿದ್ಧತೆ ನಡೆಸಲಾಗಿದೆ.
ಮಂಗಳೂರಿನ ಕೊಟ್ಟಾರ ಫಸ್ಟ್ ಕ್ರಾಸ್ ನಿವಾಸಿ ಆಲ್ಬರ್ಟ್ ರೇಗೋ ಅವರು ಕಳೆದ ಜುಲೈ 19ರಂದು ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು. ಅವರ ಸಾವಿನ ಬಳಿಕ ಸಂಬಂಧಿಕರಿಗೆ ಹಾಗೂ ಸ್ಥಳೀಯರಿಗೆ ಮಾಹಿತಿ ನೀಡದೆ, ಮರಣೋತ್ತರ ಪರೀಕ್ಷೆಯನ್ನೂ ನಡೆಸದೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಮಗಳ ವಿರುದ್ಧ ಗಂಭೀರ ಆರೋಪ
ಆಲ್ಬರ್ಟ್ ರೇಗೋ ಅವರ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಅವರ ಸ್ನೇಹಿತ ಹೆರಾಲ್ಡ್ ಪಿರೇರಾ ಅವರು ಉರ್ವಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಆಧಾರದಲ್ಲಿ ಆಲ್ಬರ್ಟ್ ಅವರ ಮಗಳು ಮಾಯಾ ರೇಗೋ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.
ಮೃತ ಆಲ್ಬರ್ಟ್ ರೇಗೋ ಅವರು ವಿದೇಶದಲ್ಲಿ ಕೆಲಸ ಮಾಡಿ ಸಾಕಷ್ಟು ಆಸ್ತಿ ಸಂಪಾದಿಸಿದ್ದರು ಎನ್ನಲಾಗಿದೆ. ಅವರೊಂದಿಗೆ ವಾಸಿಸುತ್ತಿದ್ದ ಮಗಳು ನಿರಂತರವಾಗಿ ಕಿರುಕುಳ ನೀಡುತ್ತಿದ್ದರು ಹಾಗೂ ಸಾವಿಗೂ ಮುನ್ನ ಬಲವಂತವಾಗಿ ವಿಲ್ ಬರೆಸಿಕೊಂಡಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಅಲ್ಲದೆ, ಆಸ್ತಿಯ ವಿಚಾರವಾಗಿ ಮಗಳು ತನ್ನ ಆಪ್ತರೊಂದಿಗೆ ಸೇರಿ ತಂದೆಯನ್ನು ಕೊಲೆ ಮಾಡಿರುವ ಸಾಧ್ಯತೆಯಿದೆ ಎಂಬ ಶಂಕೆಯನ್ನೂ ದೂರಿನಲ್ಲಿ ವ್ಯಕ್ತಪಡಿಸಲಾಗಿದೆ. ಮಾತ್ರೆ ನೀಡಿ ಸಾಯಿಸಿರುವ ಅನುಮಾನಗಳ ಬಗ್ಗೆಯೂ ತನಿಖೆ ನಡೆಯಬೇಕಿದೆ ಎಂದು ದೂರುದಾರರು ಆಗ್ರಹಿಸಿದ್ದಾರೆ ಎನ್ನಲಾಗಿದೆ.

ಶವ ಹೊರತೆಗೆದು ಎಫ್ಎಸ್ಎಲ್ ಪರೀಕ್ಷೆಗೆ ಸಿದ್ಧತೆ
ಸಂಶಯಾಸ್ಪದ ಸಾವಿನ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿವಿಧ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ಇದೀಗ ದೇರೆಬೈಲ್ ಚರ್ಚ್ನ ದಫನ ಭೂಮಿಯಿಂದ ಆಲ್ಬರ್ಟ್ ರೇಗೋ ಅವರ ಶವವನ್ನು ಹೊರತೆಗೆದು ವೈಜ್ಞಾನಿಕ ಪರೀಕ್ಷೆ ನಡೆಸಲು ಮುಂದಾಗಿದ್ದಾರೆ.
ಮಂಗಳೂರು ತಹಶೀಲ್ದಾರ್ ಸಮ್ಮುಖದಲ್ಲಿ ನಡೆಯುತ್ತಿರುವ ಪ್ರಕ್ರಿಯೆಯಲ್ಲಿ ಉರ್ವಾ ಪೊಲೀಸರು ಹಾಗೂ ಫಾರೆನ್ಸಿಕ್ ತಜ್ಞರು ಉಪಸ್ಥಿತರಿದ್ದಾರೆ. ಮೃತದೇಹದ ಅವಶೇಷಗಳನ್ನು ಪರೀಕ್ಷೆಗೆ ಕಳುಹಿಸುವ ಮೂಲಕ ಸಾವಿನ ನೈಜ ಕಾರಣ ಪತ್ತೆಹಚ್ಚಲು ಪೊಲೀಸರು ಮುಂದಾಗಿದ್ದಾರೆ.
ಮೃತರಿಗೆ ನಾಲ್ವರು ಮಕ್ಕಳಿದ್ದು, ಅವರಲ್ಲಿ ಇಬ್ಬರು ದುಬೈನಲ್ಲಿ ನೆಲೆಸಿದ್ದಾರೆ ಎನ್ನಲಾಗಿದೆ. ತಂದೆಯ ಸಾವಿನ ಕುರಿತು ವ್ಯಕ್ತವಾಗಿರುವ ಅನುಮಾನಗಳು ಹಾಗೂ ಆಸ್ತಿ ವರ್ಗಾವಣೆಗೆ ಸಂಬಂಧಿಸಿದ ಆರೋಪಗಳ ಹಿನ್ನೆಲೆಯಲ್ಲಿ ಪ್ರಕರಣ ಮಹತ್ವ ಪಡೆದುಕೊಂಡಿದೆ.
ಆಲ್ಬರ್ಟ್ ರೇಗೋ ಅವರ ಸಾವಿಗೆ ನಿಖರ ಕಾರಣವೇನು? ಇದು ಸಹಜ ಸಾವೇ ಅಥವಾ ಕೊಲೆಯೇ? ಎಂಬುದಕ್ಕೆ ಫಾರೆನ್ಸಿಕ್ ಪರೀಕ್ಷೆ ಹಾಗೂ ಪೊಲೀಸ್ ತನಿಖೆಯ ಬಳಿಕ ಸ್ಪಷ್ಟತೆ ದೊರೆಯಬೇಕಿದೆ.


