ಮಂಗಳೂರಿನಲ್ಲಿ ನ. 25ರಿಂದ ಎರಡು ದಿನಗಳ ಅಂತಾರಾಷ್ಟ್ರೀಯ ತಂತ್ರಜ್ಞಾನ ಸಮ್ಮೇಳನ

ಮಂಗಳೂರು: ಯೆನೆಪೋಯ ಸ್ಕೂಲ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ ನೇತೃತ್ವದಲ್ಲಿ ಕಂಪ್ಯೂಟಿಂಗ್, ಕೃತಕ ಬುದ್ಧಿಮತ್ತೆ, ಕ್ವಾಂಟಮ್ ಇಂಟೆಲಿಜೆನ್ಸ್ ಹಾಗೂ ಭವಿಷ್ಯದ ತಂತ್ರಜ್ಞಾನಗಳ ಕುರಿತ ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನ ನವೆಂಬರ್ 25 ಮತ್ತು 26ರಂದು ಮಂಗಳೂರಿನ ಬಲ್ಮಠ ಕ್ಯಾಂಪಸ್‌ನಲ್ಲಿ ನಡೆಯಲಿದೆ.

ಸಮ್ಮೇಳನದಲ್ಲಿ ಪ್ರಸ್ತುತಪಡಿಸಲು ಒಟ್ಟು 221 ಸಂಶೋಧನಾ ಪ್ರಬಂಧಗಳು ಸಲ್ಲಿಕೆಯಾಗಿದ್ದು, ಪರಿಶೀಲನೆಯ ಬಳಿಕ 107 ಪ್ರಬಂಧಗಳನ್ನು ಆಯ್ಕೆ ಮಾಡಿ ನೋಂದಾಯಿಸಲಾಗಿದೆ ಎಂದು ಸಂಸ್ಥೆಯ ಡೀನ್ ಆರ್.ಜಿ. ಡಿಸೋಜ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಂತಾರಾಷ್ಟ್ರೀಯ ಶೈಕ್ಷಣಿಕ ಸಹಯೋಗವನ್ನು ಉತ್ತೇಜಿಸುವ ಹಾಗೂ ನೆರೆಯ ರಾಷ್ಟ್ರಗಳ ಸಂಶೋಧಕರು ಮತ್ತು ಶಿಕ್ಷಣ ತಜ್ಞರ ಭಾಗವಹಿಸುವಿಕೆಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಸಮ್ಮೇಳನ ಆಯೋಜಿಸಲಾಗಿದೆ. ಶ್ರೀಲಂಕಾ, ನೇಪಾಳ, ಬಾಂಗ್ಲಾದೇಶ, ಮಾಲ್ಡೀವ್ಸ್, ಭೂತಾನ್ ಸೇರಿದಂತೆ ವಿವಿಧ ದೇಶಗಳ ಸಂಶೋಧಕರು ಮತ್ತು ಶಿಕ್ಷಣ ತಜ್ಞರು ಭಾಗವಹಿಸಲಿದ್ದಾರೆ.ನವೆಂಬರ್ 25ರಂದು ಬೆಳಿಗ್ಗೆ 9.30ಕ್ಕೆ ಸಮ್ಮೇಳನ ಉದ್ಘಾಟನೆಗೊಳ್ಳಲಿದೆ. ಮಲೇಷ್ಯಾದ ಇಂಟರ್‌ನ್ಯಾಷನಲ್ ಇಸ್ಲಾಮಿಕ್ ಯೂನಿವರ್ಸಿಟಿಯ ಸಹಪ್ರಾಧ್ಯಾಪಕ ಡಾ. ಹಸನ್ ಫಿರ್ದೌಸ್ ಬಿನ್ ಮೊಹಮ್ಮದ್ ಝಾಕಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಸಮ್ಮೇಳನದಲ್ಲಿ ಜರ್ಮನಿಯ ಪ್ರೊ. ಎಚ್.ಸಿ. ಜೋರ್ಗ್ ಮೋಲ್ಟ್, ಆಸ್ಟ್ರೇಲಿಯಾದ ಆರ್‌ಎಂಐಟಿ ವಿಶ್ವವಿದ್ಯಾಲಯದ ಡಾ. ಶಹರಿಯಾರ್ ಕೈಸರ್, ಸ್ಪೇನ್‌ನ ಡಾ. ಅರಸಲಿ ವೆನೆಗಾಸ್-ಗೋಮೆಸ್ ಹಾಗೂ ಯುನೈಟೆಡ್ ಕಿಂಗ್‌ಡಮ್‌ನ ಡಾ. ಹಜ್ರತ್ ಅಲಿ ಅವರು ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಲಿದ್ದಾರೆ.ಸುದ್ದಿಗೋಷ್ಠಿಯಲ್ಲಿ ವಿಭಾಗದ ಮುಖ್ಯಸ್ಥ ಡಾ. ಪ್ರಭಾಕರ್ ಬಿ.ಕೆ. ಹಾಗೂ ಸಹಪ್ರಾಧ್ಯಾಪಕ ಡಾ. ಮೊಹಮ್ಮದ್ ಸಿದ್ದಿಕ್ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!