ಮಂಗಳೂರು: ಕದ್ರಿಯ ನೂಪುರ (ರಿ) ನೃತ್ಯ ಮತ್ತು ಸಂಗೀತ ಅಕಾಡೆಮಿಯ 45ನೇ ವಾರ್ಷಿಕೋತ್ಸವದ ಅಂಗವಾಗಿ ‘ನೂಪುರ ಧ್ವನಿ-2026’ ಸಾಂಸ್ಕೃತಿಕ ಕಾರ್ಯಕ್ರಮ ನ.28 ಮತ್ತು 29ರಂದು ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಎಲ್ಸಿಆರ್ಐ ಸಭಾಂಗಣದಲ್ಲಿ ನಡೆಯಲಿದೆ ಎಂದು ಅಕಾಡೆಮಿಯ ಅಧ್ಯಕ್ಷ ಡಾ. ಪವಮಾನ್ ಪಿ.ಎಸ್. ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ.28ರಂದು ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದ್ದು, ನೂಪುರದ ವಿದ್ಯಾರ್ಥಿಗಳ ಸಂಗೀತ ಕಾರ್ಯಕ್ರಮ ಹಾಗೂ ಹುಬ್ಬಳ್ಳಿಯ ವಿದ್ವಾನ್ ಸುಜಯ್ ಶಾನುಭೋಗ್ ಮತ್ತು ಬೆಂಗಳೂರಿನ ವಿದುಷಿ ಗೌರಿ ಸಾಗರ್ ಅವರಿಂದ ಭರತನಾಟ್ಯ ಪ್ರದರ್ಶನ ನಡೆಯಲಿದೆ ಎಂದರು.

ನ.29ರಂದು ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಕಲಾಶ್ರೀ ಪುರಸ್ಕೃತೆ ವಿದುಷಿ ನಯನ ವಿ. ರೈ, ವಿದ್ವಾನ್ ಗಣೇಶ್ರಾಜ್ ಎಂ.ವಿ. ಹಾಗೂ ಡಾ. ಪಿ. ಶ್ರೀಧರ ಆಚಾರ್ಯ ಅವರಿಗೆ ‘ನೂಪುರ ಕಸ್ತೂರಿ’ ಬಿರುದು ನೀಡಿ ಗೌರವಿಸಲಾಗುವುದು. ಇದೇ ಸಂದರ್ಭದಲ್ಲಿ ‘ನೂಪುರ ಸಿಂಚನ’ ಸ್ಮರಣ ಸಂಚಿಕೆ ಬಿಡುಗಡೆಗೊಳ್ಳಲಿದ್ದು, ವಿದುಷಿ ಶುಭಶ್ರೀ ಅಡಿಗ ಅವರ ವೀಣಾವಾದನ ಹಾಗೂ ವಿದ್ಯಾರ್ಥಿಗಳಿಂದ ‘ಮಹಿಷಾಸುರ ಮರ್ದಿನಿ’ ನೃತ್ಯರೂಪಕ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸುಧಾಕರ ರಾವ್ ಪೇಜಾವರ, ಸುಲೋಚನಾ ವಿ. ಭಟ್, ಪ್ರಶಾಂತ್ ಹಾಗೂ ಅನು ಉಪಸ್ಥಿತರಿದ್ದರು.

