ಬಂಟ್ವಾಳ: ಸಾಮಾನ್ಯವಾಗಿ ಜಕ್ರಿಬೆಟ್ಟು ಹಾಗೂ ಹರೇಕಳ ಅಣೆಕಟ್ಟುಗಳಲ್ಲಿ ನವೆಂಬರ್ ಕೊನೆಯ ಭಾಗದಲ್ಲಿ ಗೇಟ್‌ಗಳನ್ನು ಮುಚ್ಚಿ ನೀರು ಸಂಗ್ರಹಿಸಲಾಗುತ್ತಿತ್ತು. ಆದರೆ, ಈ ಬಾರಿ ಮಳೆ ಕೊರತೆಯಿಂದ ನದಿಯ ನೀರಿನ ಒಳಹರಿವು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಅಕ್ಟೋಬರ್ ಮಧ್ಯಭಾಗದಲ್ಲೇ ಜಕ್ರಿಬೆಟ್ಟು ಬ್ಯಾರೇಜ್‌ನ ಗೇಟ್‌ಗಳನ್ನು ಮುಚ್ಚುವ ಸಿದ್ಧತೆ ನಡೆದಿದೆ. ಇತ್ತೀಚೆಗೆ ಒಂದೆರಡು ಬಾರಿ ಮಳೆಯಾದ ಕಾರಣ ಪ್ರಕ್ರಿಯೆ ಮುಂದೂಡಿಕೆಯಾಗಿದ್ದು, ಮುಂದಿನ ವಾರದೊಳಗೆ ಗೇಟ್ ಮುಚ್ಚುವ ಕಾರ್ಯ ನಡೆಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಬೇಸಿಗೆಯಲ್ಲಿ ಕುಡಿಯುವ ನೀರು ಹಾಗೂ ಇತರ ಅಗತ್ಯಗಳಿಗೆ ನೀರಿನ ಕೊರತೆ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸುವ ಉದ್ದೇಶದಿಂದ ಲಭ್ಯವಿರುವ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವುದು ಅಗತ್ಯವಾಗಿದೆ. ಆದರೆ, ಬ್ಯಾರೇಜ್‌ನಲ್ಲಿ ಗರಿಷ್ಠ ಪ್ರಮಾಣದಲ್ಲಿ ನೀರು ನಿಲ್ಲಿಸಿದಾಗ ಹಿನ್ನೀರು ಸಮೀಪದ ಕೃಷಿ ತೋಟಗಳಿಗೆ ನುಗ್ಗುವ ಸಮಸ್ಯೆ ಇರುವುದರಿಂದ ನೀರಿನ ಸಂಗ್ರಹದ ಜತೆಗೆ ರೈತರ ಹಿತವನ್ನೂ ಕಾಪಾಡಬೇಕಾದ ಪರಿಸ್ಥಿತಿ ಇದೆ.

ಶಾಸಕ ರಾಜೇಶ್ ನಾಯ್ಕ್ ಅವರ ಮುತುವರ್ಜಿ
ಬಂಟ್ವಾಳದ ಜಕ್ರಿಬೆಟ್ಟುವಿನಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ ಸುಮಾರು ರೂ135 ಕೋಟಿ ವೆಚ್ಚದಲ್ಲಿ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಿಸಲಾಗಿದೆ. ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಮುತುವರ್ಜಿ ಹಾಗೂ ಪ್ರಯತ್ನಗಳೊಂದಿಗೆ ಈ ಯೋಜನೆ ಸಾಕಾರಗೊಂಡಿದ್ದು, ನೀರಿನ ಸಂಗ್ರಹದ ಮೂಲಕ ಸ್ಥಳೀಯ ನೀರಿನ ಅಗತ್ಯಗಳಿಗೆ ನೆರವಾಗುವ ಉದ್ದೇಶ ಹೊಂದಿದೆ.

351.25 ಮೀಟರ್ ಉದ್ದ ಹಾಗೂ 5.50 ಮೀಟರ್ ಎತ್ತರ ಹೊಂದಿರುವ ಈ ಬ್ಯಾರೇಜ್‌ನಲ್ಲಿ ಒಟ್ಟು 21 ಕಿಂಡಿಗಳಿದ್ದು, ಪ್ರತಿ ಕಿಂಡಿಗೆ 12 ಮೀಟರ್ ಅಗಲದ ವರ್ಟಿಕಲ್ ಲಿಫ್ಟ್ ಗೇಟ್‌ಗಳನ್ನು ಅಳವಡಿಸಲಾಗಿದೆ. ಎಲ್ಲ ಗೇಟ್‌ಗಳನ್ನು ಮುಚ್ಚಿದಾಗ ಸುಮಾರು 166 ಎಂಸಿಎಫ್‌ಟಿ ನೀರು ಸಂಗ್ರಹಿಸುವ ಸಾಮರ್ಥ್ಯವಿದೆ.
ಹಿನ್ನೀರು ಸಮಸ್ಯೆಗೆ ಪರಿಹಾರದ ನಿರೀಕ್ಷೆ
ಕಳೆದ ವರ್ಷ ಬ್ಯಾರೇಜ್‌ನ ಗೇಟ್‌ಗಳನ್ನು ಮುಚ್ಚಿ ನೀರು ಸಂಗ್ರಹಿಸಿದಾಗ ಹಿನ್ನೀರು ಎರಡು ತೋಡುಗಳ ಮೂಲಕ ಹರಿದು ಜಕ್ರಿಬೆಟ್ಟು, ಮಣಿಹಳ್ಳ ಹಾಗೂ ಪಣೆಕಲ ಭಾಗದ ಅಡಿಕೆ ತೋಟಗಳಿಗೆ ನುಗ್ಗಿತ್ತು. ಇದರಿಂದ ಕೃಷಿಕರು ತೊಂದರೆ ಅನುಭವಿಸಿದ್ದರು. ಈ ಸಮಸ್ಯೆಯನ್ನು ಶಾಸಕ ರಾಜೇಶ್ ನಾಯ್ಕ್ ಅವರು ಕೆಡಿಪಿ ಸಭೆಯಲ್ಲಿ ಪ್ರಸ್ತಾಪಿಸಿ, ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಪರಿಹಾರ ಕಂಡುಕೊಳ್ಳುವಂತೆ ಪ್ರಯತ್ನಿಸಿದ್ದರು.
ತೋಟಗಳಿಗೆ ಹಿನ್ನೀರು ನುಗ್ಗದಂತೆ ಮಣ್ಣಿನ ತಡೆ ನಿರ್ಮಿಸುವುದು ಹಾಗೂ ಮುಂದಿನ ಹಂತದಲ್ಲಿ ನಿಯಂತ್ರಣ ಗೇಟ್‌ಗಳ ವ್ಯವಸ್ಥೆ ಕಲ್ಪಿಸುವ ಪ್ರಸ್ತಾವ ರೂಪಿಸಲಾಗಿತ್ತು. ಆದರೆ, ಈ ಕಾಮಗಾರಿಗಳು ಇನ್ನೂ ಅನುಷ್ಠಾನಗೊಂಡಿಲ್ಲ. ಹೀಗಾಗಿ, ಈ ಬಾರಿ ಮಳೆ ಕೊರತೆಯ ನಡುವೆಯೇ ನೀರಿನ ಸಂಗ್ರಹ ಹೆಚ್ಚಿಸುವುದರ ಜತೆಗೆ ಕೃಷಿ ತೋಟಗಳಿಗೆ ಹಾನಿಯಾಗದಂತೆ ಕ್ರಮ ಕೈಗೊಳ್ಳುವುದು ಸಣ್ಣ ನೀರಾವರಿ ಇಲಾಖೆಗೆ ಪ್ರಮುಖ ಸವಾಲಾಗಿದೆ.

