ಮಂಜೇಶ್ವರ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಲಪಾಡಿ ವಲಯದ ವ್ಯಾಪ್ತಿಗೆ ಒಳಪಡುವ ಪಾವೂರು, ಬಡಾಜೆ, ಮಾಡ, ಕುಂಜತ್ತೂರು ಹಾಗೂ ಕಡಂಬಾರು ಒಕ್ಕೂಟಗಳ ಜಂಟಿ ಆಶ್ರಯದಲ್ಲಿ ಶ್ರೀ ಲಕ್ಷ್ಮೀ ಪೂಜೆ ಮತ್ತು ಒಕ್ಕೂಟಗಳ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿಂದ ನೆರವೇರಿತು.


ಉದ್ಯಾವರ ಮಾಡ ಅರಸು ಮಂಜೇಷ್ಣಾರ್ ಕ್ಷೇತ್ರದ ಅಣ್ಣ ದೈವದ ಪಾತ್ರಿ ರಾಜಬೆಳ್ಳಪ್ಪಾಡರು ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಅಧಿಕೃತವಾಗಿ ಉದ್ಘಾಟಿಸಿದರು. ತಲಪಾಡಿ ವಲಯ ಹಾಗೂ ಕೇಂದ್ರ ಒಕ್ಕೂಟದ ಅಧ್ಯಕ್ಷರರಾದ ಉದಯ ಕುಮಾರ್ ಆನೆಬಾಗಿಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ನಿರ್ದೇಶಕರಾದ ಬಾಬು ನಾಯ್ಕ ಎ. ಅವರು ಪದಗ್ರಹಣ ಕಾರ್ಯಕ್ರಮವನ್ನು ನೆರವೇರಿಸಿ, ಒಕ್ಕೂಟಗಳ ಕಾರ್ಯಚಟುವಟಿಕೆಗಳು, ಪದಗ್ರಹಣದ ಮಹತ್ವ ಹಾಗೂ ಮುಂದಿನ ಕಾರ್ಯಯೋಜನೆಗಳ ಕುರಿತು ಮಾಹಿತಿ ಮತ್ತು ಮಾರ್ಗದರ್ಶನ ನೀಡಿದರು.

ಕಾರ್ಯಕ್ರಮದ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಚಲನಚಿತ್ರ ನಿರ್ದೇಶಕ ಹಾಗೂ ನಟ ಜೆ.ಪಿ. ತೂಮಿನಾಡು ಮಾತನಾಡಿ, “ಯೋಜನೆಯ ಸಂಘಕ್ಕೆ ಸೇರಿ ಸಾಲ ಪಡೆದು 20 ರೂಪಾಯಿ ಕೊಡುಗೆ ನೀಡುವ ಮೂಲಕ ಆರಂಭವಾದ ಸಂಘಟನೆ ಇಂದು ಇಷ್ಟು ದೊಡ್ಡ ಶಕ್ತಿಯಾಗಿ ಬೆಳೆದು ನಿಂತಿರುವುದು ಕ್ಷೇತ್ರದ ಆಶೀರ್ವಾದದಿಂದ” ಎಂದು ಸಂತಸ ವ್ಯಕ್ತಪಡಿಸಿದರು. ಖ್ಯಾತ ಚಲನಚಿತ್ರ ನಟ ಹಾಗೂ ಹಾಸ್ಯ ಕಲಾವಿದರಾಗಿ ಗುರುತಿಸಿಕೊಂಡಿರುವ ತಮಗೆ ಈ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ದೊರೆತಿರುವುದು ಪುಣ್ಯದ ಕಾರ್ಯವಾಗಿದ್ದು, ತವರು ಮನೆಗೆ ಬಂದ ಅನುಭವವಾಗುತ್ತಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ರಾದ ಗೋಪಾಲ ಶೆಟ್ಟಿ ಅರಿಬೈಲು, ಕುಶಲಾಕ್ಷಿ ಎ ತುಳು ಸಾಹಿತಿ, ಜನಜಾಗೃತಿ ವೇದಿಕೆಯ ಸದಸ್ಯರಾದ ಹರೀಶ್ ಶೆಟ್ಟಿ ಮಾಡ, ಮಂಜೇಶ್ವರ ತಾಲ್ಲೂಕಿನ ಯೋಜನಾಧಿಕಾರಿಯವರಾದ ಶಶಿಕಲಾ ಸುವರ್ಣ , ಮತ್ತು ವೇದಿಕೆಯಲ್ಲಿ ನಿಕಟಪೂರ್ವ ಮತ್ತು ನೂತನ ಒಕ್ಕೂಟದ ಅಧ್ಯಕ್ಷರು ವೇದಿಕೆಯಲ್ಲಿ ಉಪಸ್ಥಿತರಿದ್ದರು





