ಮುಂಡಳ್ಳಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮನಸೂರೆಗೊಂಡ ಭಕ್ತಿಸಂಗೀತ

ಭಟ್ಕಳ: ಶರನ್ನವರಾತ್ರಿ ಉತ್ಸವದ ಮೊದಲ ದಿನವಾದ ರವಿವಾರ, ಅಕ್ಟೋಬರ್ 11ರಂದು ಸಂಜೆ 6ರಿಂದ 8 ಗಂಟೆಯವರೆಗೆ, ಮುಂಡಳ್ಳಿಯ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಉಮೇಶ ಮುಂಡಳ್ಳಿ ಅವರ ನೇತೃತ್ವದ ನಿನಾದ ಕಲ್ಚರಲ್ ಅಕಾಡೆಮಿ, ಭಟ್ಕಳ ವತಿಯಿಂದ ಭಕ್ತಿಸಂಗೀತ ಸೇವಾ ಕಾರ್ಯಕ್ರಮ ಭಕ್ತರ ಮನಸೂರೆಗೊಂಡಿತು.

ಕಾರ್ಯಕ್ರಮದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಗಾಯಕ ಉಮೇಶ ಮುಂಡಳ್ಳಿ ಅವರು ‘ಭಾಗ್ಯದ ಲಕ್ಷ್ಮೀ ಬಾರಮ್ಮ’, ‘ಜಗದಂಬೆ ದೇವಿ ಭವಾನಿ’ ಸೇರಿದಂತೆ ವಿವಿಧ ದೇವಿಗೀತೆಗಳನ್ನು ಸುಮಧುರವಾಗಿ ಹಾಡಿ ಭಕ್ತಿಭಾವದ ವಾತಾವರಣವನ್ನು ನಿರ್ಮಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಪ್ರಸ್ತುತಪಡಿಸಿದ ‘ಭೈರವಿ ತಂಬೂರಿ ಮೀಟಿದವ’ ಗೀತೆಯು ನೆರೆದಿದ್ದ ಭಕ್ತರನ್ನು ಭಕ್ತಿಯ ಅಲೆಯಲ್ಲಿ ತೇಲಿಸಿತು.

ಉಮೇಶ ಮುಂಡಳ್ಳಿ ಅವರ ಗಾಯನಕ್ಕೆ ನಿನಾದ ಉಮೇಶ ಅವರು ಸಾಥ್ ನೀಡಿದರು. ಉಡುಪಿಯ ಹಿರಿಯ ಕಲಾವಿದ ಉಮೇಶ ಮೇಸ್ತ ಶಿರೂರು ಅವರು ಹಾರ್ಮೋನಿಯಂನಲ್ಲಿ ಹಾಗೂ ಶ್ಯಾಮ್ ಮೇಸ್ತ ಶಿರೂರು ಅವರು ತಬಲಾದಲ್ಲಿ ಸಾಥ್ ನೀಡಿ ಗಾಯನಕ್ಕೆ ಮೆರುಗು ನೀಡಿದರು.

ಕಾರ್ಯಕ್ರಮದ ಅಂತ್ಯದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ನಾಗರಾಜ ಭಟ್ ಅವರು ಉಮೇಶ ಮುಂಡಳ್ಳಿ ಹಾಗೂ ಇತರ ಕಲಾವಿದರನ್ನು ಆಶೀರ್ವದಿಸಿ, ಪ್ರಸಾದ ನೀಡಿ ಶುಭ ಹಾರೈಸಿದರು.

ಶರನ್ನವರಾತ್ರಿ ಉತ್ಸವದ ಆರಂಭದಲ್ಲೇ ಭಕ್ತಿಗೀತೆಗಳ ಮೂಲಕ ದೇವಿಯ ಆರಾಧನೆಗೆ ಸಂಗೀತದ ಸೊಬಗು ತುಂಬಿದ ಈ ಕಾರ್ಯಕ್ರಮವು ಭಕ್ತರ ಮನದಲ್ಲಿ ಭಕ್ತಿಭಾವದ ಸುಂದರ ಅನುಭೂತಿಯನ್ನು ಮೂಡಿಸಿತು.

SHARE
Loading spinner

One thought on “ಮುಂಡಳ್ಳಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮನಸೂರೆಗೊಂಡ ಭಕ್ತಿಸಂಗೀತ”

Leave a Reply

Your email address will not be published. Required fields are marked *

error: Content is protected !!