ಸುರತ್ಕಲ್ ನ ಬಾಳ ದಲ್ಲಿರುವ HPCL ಬಾಟ್ಲಿಂಗ್ ಘಟಕದಲ್ಲಿ ಹತ್ತು ವರ್ಷಗಳಿಗಿಂತೂ ದೀರ್ಘ ಅವಧಿಗೆ ಗುತ್ತಿಗೆ ಕಾರ್ಮಿಕರಾಗಿ ದುಡಿಯುತ್ತಿದ್ದ ಶರಣವ್ವ ಭಜಂತ್ರಿ, ಸೂರವ್ವ ಕೊಲ್ಲದ್, ಪಾರ್ವತಿ ಗಾಣಿಗೇರ, ಸುವರ್ಣ ಪಾಟೀಲ ಎಂಬ ಬಾಗಲಕೋಟೆ ಜಿಲ್ಲೆಯ ಮಹಿಳೆಯರನ್ನು ಕಂಪೆನಿಯ ಅಧಿಕಾರಿಗಳು ಯಾವುದೇ ಕಾರಣ ನೀಡದೆ ಕೆಲಸದಿಂದ ಕಿತ್ತು ಹಾಕಿರುವುದು ನಿಮಗೆಲ್ಲ ತಿಳಿದಿದೆ.
ತಮಗಾದ ಅನ್ಯಾಯವನ್ನು ವಿರೋಧಿಸಿ, ಉದ್ಯೋಗ ಮರಳಿ ಕೊಡಲು ಒತ್ತಾಯಿಸಿ, ಬದುಕುವ ಹಕ್ಕಿಗಾಗಿ ಅಂದಿನಿಂದ ಈ ಬಡ ಹೆಣ್ಣುಮಕ್ಕಳು ಕಂಪೆನಿಯ ಪ್ರಧಾನ ದ್ವಾರದ ಮುಂಭಾಗ ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ.

ಈ ನಡುವೆ ಎರಡು ಸಲ ಕೇಂದ್ರ ಕಾರ್ಮಿಕ ಇಲಾಖೆಯ ಉಪ ಆಯುಕ್ತರು ಕಂಪೆನಿಯ ಅಧಿಕಾರಿಗಳನ್ನು ಕರೆಸಿ ಕೆಲಸಕ್ಕೆ ಮರು ನೇಮಕಗೊಳಿಸುವಂತೆ ಸೂಚಿಸಿದರೂ ಕಂಪೆನಿಯ ಆಡಳಿತ ತನ್ನ ಹಠಮಾರಿತನ ಕೈ ಬಿಡುತ್ತಿಲ್ಲ.
ಈ ಬಡ ಮಹಿಳಾ ಕಾರ್ಮಿಕರ ಹೋರಾಟಕ್ಕೆ ನಾಗರಿಕ ಹೋರಾಟ ಸಮಿತಿ, ಸುರತ್ಕಲ್, ಹಾಗು ಕಾರ್ಮಿಕ ಸಂಘಟನೆ ಸಿಐಟಿಯು ಬೆಂಬಲವಾಗಿ ನಿಂತಿದೆ, ಬೇರೆ ಯಾವುದೇ ರಾಜಕಾರಣಿಗಳು, ಜನಪ್ರತಿನಿಧಿಗಳು ಈ ಬಡ ಹೆಣ್ಣು ಮಕ್ಕಳನ್ನು ಕಣ್ಣೆತ್ತಿಯೂ ನೋಡುತ್ತಿಲ್ಲ
ಇಂದು ಹೋರಾಟ (ನವಂಬರ್ 19) 80 ನೇ ದಿನಕ್ಕೆ ಕಾಲಿರಿಸಿದ್ದು, ಧರಣಿ ಸ್ಥಳದಲ್ಲಿ ಮಹಿಳಾ ಕಾರ್ಮಿಕರ ಜೊತೆ ಸಹಭೋಜನ ನಡೆಸಲಾಯಿತು. ಮಹಿಳಾ ಕಾರ್ಮಿಕರು ಮನೆಯಿಂದ ತಂದಿದ್ದ ಖಡಕ್ ರೊಟ್ಟಿ, ಶೇಂಗಾ ಚಟ್ನಿ, ವಿವಿಧ ಪಲ್ಯ, ಒಬ್ಬಟ್ಟಿನ ರುಚಿ ಸವಿಲಾಯಿತು. ಆ ಮೂಲಕ ಅವರಿಗೆ ಧೈರ್ಯ ತುಂಬಲಾಯಿತು.

ಇದೇ ಸಂದರ್ಭ ಸುರತ್ಕಲ್ ನ ಮಾಜಿ ಶಾಸಕ ಮೊಯ್ದಿನ್ ಬಾವ ಬೆಂಬಲವಾಗಿ ಧರಣಿ ಸ್ಥಳಕ್ಕೆ ಬಂದಿದ್ದು, ಮಾಜಿ ಶಾಸಕರು ಸಹ ಸಹ ಭೋಜನ ಸ್ವೀಕರಿಸಿದರು
ನಾಳೆ (ನವಂಬರ್ 20) ಕೇಂದ್ರ ಕಾರ್ಮಿಕ ಇಲಾಖೆಯ ALC ಈ ಕುರಿತು ಕಂಪೆನಿ ಅಧಿಕಾರಿಗಳನ್ನು ವಿಚಾರಣಗೆ ನೋಟೀಸು ನೀಡಿದ್ದು, ಅವರ ಸಮ್ಮುಖ ಸಭೆ ನಡೆಯಲಿದೆ. ಜಿಲ್ಲಾಧಿಕಾರಿಗಳೂ ಕಂಪೆನಿಯ ಅಧಿಕಾರಿಗಳಿಗೆ ನ್ಯಾಯ ಒದಗಿಸುವಂತೆ ಸೂಚಿಸಿದ್ದು, ಮಹಿಳಾ ಕಾರ್ಮಿಕರು ನ್ಯಾಯ ದೊರಕುವ ನಿರೀಕ್ಷೆಯಲ್ಲಿ ಇದ್ದಾರೆ.
*ಒಂದು ವೇಳೆ ನಾಳೆಯೂ ಕಂಪೆನಿ ವಿಷಯವನ್ನು ನ್ಯಾಯಯುತವಾಗಿ ಇತ್ಯರ್ಥ ಮಾಡದಿದ್ದದಲ್ಲಿ ಜಿಲ್ಲೆಯ ಜನಪರ ಸಂಘಟನೆಗಳು ಜೊತೆ ಸೇರಿ ಮಹಿಳಾ ಕಾರ್ಮಿಕರ ಹೋರಾಟವನ್ನು ಕೈಗೆತ್ತಿಕೊಳ್ಳಲಿದೆ. ಹೋರಾಟ ಹೊಸ ಸ್ವರೂಪ ತಾಳಲಿದೆ.

