ಬೈಂದೂರು: ವಿವಿಧ ನಾಮಾಂಕಿತಗಳಿಂದ ಗುರುತಿಸಿಕೊಂಡಿರುವ ರಾಮಕ್ಷತ್ರಿಯ ಸಮುದಾಯದವರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ, ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಪ್ರಗತಿಗೆ ಶ್ರಮಿಸುವ ಉದ್ದೇಶದಿಂದ ಅಖಿಲ ಕರ್ನಾಟಕ ಕೋಟೆಗಾರ ಸಂಘದ ಪ್ರಾಯೋಜಕತ್ವದಲ್ಲಿ ಉಡುಪಿ ಜಿಲ್ಲಾ ರಾಮಕ್ಷತ್ರಿಯ ಒಕ್ಕೂಟವನ್ನು ಬೈಂದೂರಿನ ಯಡ್ತರೆಯ ಜೆಎನ್ಆರ್ ಕಲಾಮಂದಿರದಲ್ಲಿ ಸ್ಥಾಪಿಸಲಾಯಿತು.

ಮಾಜಿ ಸಚಿವ ಜೆ. ಕೃಷ್ಣ ಪಾಲೆಮಾರ್ ಒಕ್ಕೂಟವನ್ನು ಉದ್ಘಾಟಿಸಿ ಮಾತನಾಡಿ, ಕೋಟೆಗಾರ, ರಾಮಕ್ಷತ್ರಿಯ, ಹಿಂದೂ ಕ್ಷತ್ರಿಯ, ಶೇರುಗಾರ್ ಹಾಗೂ ಶೇರಿಗಾರ್ ಸೇರಿದಂತೆ ವಿವಿಧ ನಾಮಾಂಕಿತಗಳಿಂದ ಗುರುತಿಸಿಕೊಂಡಿರುವ ಸಮುದಾಯದವರು ಒಗ್ಗಟ್ಟಿನಿಂದ ಸಂಘಟಿತರಾಗಬೇಕು. ಸಮುದಾಯಕ್ಕೆ ಸರ್ಕಾರಿ ಮಾನ್ಯತೆ, ಮೀಸಲಾತಿ ಹಾಗೂ ವಿವಿಧ ಕಲ್ಯಾಣ ಸೌಲಭ್ಯಗಳನ್ನು ಪಡೆಯಲು ಸಂಘಟಿತ ಪ್ರಯತ್ನ ಅಗತ್ಯವಿದೆ ಎಂದರು.

ಒಕ್ಕೂಟದ ನೂತನ ಅಧ್ಯಕ್ಷ ಕೊತ್ವಾಲ್ ಪದ್ಮನಾಭ ಶೇರುಗಾರ್ ಗಂಗೊಳ್ಳಿ ಮಾತನಾಡಿ, ಕಳೆದ 38 ವರ್ಷಗಳಿಂದ ವಿವಿಧ ಸಂಘಟನೆಗಳ ಸ್ಥಾಪನೆ ಮತ್ತು ಬೆಳವಣಿಗೆಗೆ ಶ್ರಮಿಸಿರುವ ಅನುಭವವನ್ನು ಹಂಚಿಕೊಂಡರು. ಅಧ್ಯಕ್ಷರಾಗಿ ದೊರೆತಿರುವ ಎರಡು ವರ್ಷಗಳ ಅವಧಿಯಲ್ಲಿ ಸಮಾಜದ ಏಳಿಗೆಗಾಗಿ ಪ್ರಾಮಾಣಿಕವಾಗಿ ದುಡಿಯುವುದಾಗಿ ಭರವಸೆ ನೀಡಿದರು. ಸಮುದಾಯದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಮತ್ತು ಅಗತ್ಯ ಸೌಲಭ್ಯಗಳನ್ನು ಒದಗಿಸುವುದರ ಜತೆಗೆ, ಸರ್ಕಾರಿ ಇಲಾಖೆಗಳ ಉನ್ನತ ಹುದ್ದೆಗಳಲ್ಲಿ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾನ ಪಡೆಯಲು ಹಾಗೂ ಅರ್ಹರಿಗೆ ಉದ್ಯೋಗ ಮತ್ತು ಬಡ್ತಿ ದೊರೆಯಲು ಸಂಘಟಿತ ಪ್ರಯತ್ನ ನಡೆಸಲಾಗುವುದು ಎಂದರು.
ರಾಮಕ್ಷತ್ರಿಯ ಸಮುದಾಯವನ್ನು ಒಂದು ತೋಟಕ್ಕೆ ಹೋಲಿಸಿದ ಅವರು, ಕೋಟೆಗಾರ, ಶೇರುಗಾರ್ ಸೇರಿದಂತೆ ವಿವಿಧ ನಾಮಾಂಕಿತಗಳು ಆ ತೋಟದ ವಿಭಿನ್ನ ಗಿಡಗಳಿದ್ದಂತೆ. ಹೆಸರುಗಳು ಬೇರೆಬೇರೆಯಾಗಿದ್ದರೂ ಎಲ್ಲರೂ ಒಂದೇ ಸಮುದಾಯದ ಭಾಗವಾಗಿದ್ದು, ಪರಸ್ಪರ ಒಗ್ಗಟ್ಟಿನಿಂದ ಮುನ್ನಡೆಯಬೇಕು ಎಂದು ಕರೆ ನೀಡಿದರು.

ಒಕ್ಕೂಟದ ಸ್ಥಾಪನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಾಡೋಜ ಡಾ. ಕೂಡ್ಲು ಕೃಷ್ಣಪ್ರಸಾದ್ ಮಾತನಾಡಿ, ಕೋಟೆಗಾರ ರಾಮಕ್ಷತ್ರಿಯ ಒಕ್ಕೂಟದ ಸ್ಥಾಪನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಾಡೋಜ ಡಾ. ಕೂಡ್ಲು ಕೃಷ್ಣಪ್ರಸಾದ್ ಅವರು, ಕೋಟೆಗಾರ, ರಾಮಕ್ಷತ್ರಿಯ, ಹಿಂದೂ ಕ್ಷತ್ರಿಯ, ಶೇರುಗಾರ, ಶೇರಿಗಾರ್ ಸೇರಿದಂತೆ ವಿವಿಧ ಹೆಸರುಗಳಿಂದ ಗುರುತಿಸಿಕೊಂಡಿರುವ ಸಮುದಾಯದವರು ಒಗ್ಗಟ್ಟಿನಿಂದ ಸಂಘಟಿತರಾಗಬೇಕು ಎಂದು ಕರೆ ನೀಡಿದರು. ಸಮುದಾಯಕ್ಕೆ ಸೂಕ್ತ ಸರ್ಕಾರಿ ಮಾನ್ಯತೆ, ಮೀಸಲಾತಿ ಹಾಗೂ ಆರ್ಥಿಕ ಸೌಲಭ್ಯಗಳನ್ನು ಪಡೆಯಲು ಸಂಘಟಿತ ಪ್ರಯತ್ನ ಅಗತ್ಯವಿದೆ. ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಯುವಜನರಿಗೆ ಹೆಚ್ಚಿನ ಅವಕಾಶ ಕಲ್ಪಿಸಬೇಕು. ಸಮುದಾಯದ ಜನಾಂಗೀಯ ಅಧ್ಯಯನ ವರದಿ ಹಾಗೂ ಸರ್ಕಾರಿ ಮಾನ್ಯತೆಗಾಗಿ ದೆಹಲಿಗೆ ಮೂರು ಬಾರಿ ಭೇಟಿ ನೀಡಿ ಹಿರಿಯ ವಕೀಲರೊಂದಿಗೆ ಚರ್ಚಿಸಿರುವುದಾಗಿ ತಿಳಿಸಿದ ಅವರು, ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ಕೋಟೆಗಾರ ನಿಗಮ ಸ್ಥಾಪನೆಯ ಅಗತ್ಯವನ್ನೂ ಪ್ರತಿಪಾದಿಸಿದರು.

ಕಾರ್ಯಾಧ್ಯಕ್ಷ ಶ್ರೀನಿವಾಸ್ ಶೇರೇಗಾರ್ ಹೆಬ್ರಿ ಸ್ವಾಗತಿಸಿದರು. ಡಾ. ರಾಜೇಂದ್ರ ಕೆ. ಅವರು ಕೋಟೆಗಾರ ರಾಮಕ್ಷತ್ರಿಯ ಸಮುದಾಯದ ಇತಿಹಾಸ ಮತ್ತು ಪರಂಪರೆಯ ಕುರಿತು ಮಾತನಾಡಿದರು.
ಸಮಾರಂಭದಲ್ಲಿ ಗೋಡಂಬಿ ಅಭಿವೃದ್ಧಿ ಮಂಡಳಿಯ ಡಿಎಫ್ಒ ಪಿ. ಶ್ರೀಧರ್, ಮಂಗಳೂರಿನ ಎಸಿಪಿ ಕೆ. ಶ್ರೀಕಾಂತ್, ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ಸತೀಶ್ ಬಟವಾಡಿ ಹಾಗೂ ಮಂಜುಳಾ ಜೈಕರ್ ಅವರನ್ನು ಸನ್ಮಾನಿಸಲಾಯಿತು. ಎಸ್ಎಸ್ಎಲ್ಸಿ, ಪಿಯುಸಿ ಮತ್ತು ವೃತ್ತಿಪರ ಕೋರ್ಸ್ಗಳಲ್ಲಿ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿವೇತನ ವಿತರಿಸಲಾಯಿತು.

ಸುರೇಶ ಬಟ್ವಾಡಿ, ಸದಾಶಿವ ಡಿ., ಗಣಪತಿ ಹೋಬಳಿದಾರ, ಮಂಜುನಾಥ್ ಎನ್. ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸಮಾಜಬಾಂಧವರು ಉಪಸ್ಥಿತರಿದ್ದರು. ಡಾ. ಬಾಲಕೃಷ್ಣ ಎಸ್. ಮದ್ದೋಡಿ ವಂದನಾರ್ಪಣೆ ಮಾಡಿದರು. ಬಳಿಕ ಉಡುಪಿ ಜಿಲ್ಲೆಯ ಕೋಟೆಗಾರ ಕಲಾವಿದರಿಂದ ಸಂಗೀತ ಮತ್ತು ನೃತ್ಯ ಕಾರ್ಯಕ್ರಮ ನಡೆಯಿತು.
ಪ್ರಮುಖರಾದ ಜಯಾನಂದ ಹೋಬಳಿದಾರ್, ಗೋಪಾಲ ಕೃಷ್ಣ ಕಲಮಕ್ಕಿ, ಮಂಜುನಾಥ್ ಎನ್, ಗಣಪತಿ ಶೇರೆಗಾರ್ ಸಹಿತ ಮತ್ತಿತರರು ಉಪಸ್ಥಿತರಿದ್ದರು

