ಕಾಸರಗೋಡು: ಪೆರಿಯ ಮೂನಾಂಕಡವು ಇಳಿಜಾರಿನಲ್ಲಿ ಸೋಮವಾರ ತಡರಾತ್ರಿ ಗೊಬ್ಬರ ಸಾಗಿಸುತ್ತಿದ್ದ ಲಾರಿ ನಿಯಂತ್ರಣ ತಪ್ಪಿ ಮುಹಮ್ಮದ್ ಎಂಬವರ ಮನೆಯಂಗಳಕ್ಕೆ ಮಗುಚಿ ಬಿದ್ದಿದೆ.ಕಳೆದ ಆದಿತ್ಯವಾರವಷ್ಟೇ ಗೃಹಪ್ರವೇಶವಾಗಿದ್ದ ಈ ಮನೆಯ ಅಂಗಳಕ್ಕೆ ಬಿದ್ದ ಪರಿಣಾಮ ಲಾರಿ ಪೂರ್ಣ ಹಾನಿಗೊಂಡಿದ್ದು, ಕಣ್ಣೂರು ಪಿಣರಾಯಿ ಮೂಲದ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ.

ಸ್ಥಳೀಯರು ಚಾಲಕನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.ಇದೇ ಜಾಗದಲ್ಲಿ ಸೋಮವಾರ ಮುಂಜಾನೆಯಷ್ಟೇ ಸುಳ್ಯದಿಂದ ಕೋಳಿ ಸಾಗಿಸುತ್ತಿದ್ದ ಪಿಕಪ್ ವಾಹನವೊಂದು ನಿಯಂತ್ರಣ ತಪ್ಪಿ ಅಪಾಯದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿತ್ತು.

ಪದೇ ಪದೇ ಸಂಭವಿಸುವ ಈ ಭೀಕರ ಅಪಘಾತಗಳಿಗೆ ರಸ್ತೆಯ ಅವೈಜ್ಞಾನಿಕ ನಿರ್ಮಾಣವೇ ಕಾರಣ ಎಂದು ದೂರಲಾಗಿದೆ. ಅಧಿಕಾರಿಗಳು ನೀಡಿದ ಭರವಸೆಗಳು ಹುಸಿಯಾಗಿದ್ದು, ಈ ಮಾರಕ ತಿರುವನ್ನು ಸರಿಪಡಿಸಲು ಆಗ್ರಹಿಸಿ ಸ್ಥಳೀಯರು ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಸಜ್ಜಾಗುತ್ತಿದ್ದಾರೆ.

