ಕಾಸರಗೋಡು: ನಗರದಲ್ಲಿ ಹೆಚ್ಚುತ್ತಿದ್ದ ಬೈಕ್ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ನೀಲೇಶ್ವರ ಚೀಟ್ಟಪುರಂ ನಿವಾಸಿ ಪಿ.ಎ. ಸಮೀರ್ (39) ಎಂಬಾತನನ್ನು ಕಾಸರಗೋಡು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ.

ಈತ ಕಳೆದ 10 ದಿನಗಳಲ್ಲಿ ಕಾಸರಗೋಡು ರೈಲು ನಿಲ್ದಾಣ, ಕರಂದಕ್ಕಾಡು, ಹೊಸ ಬಸ್ ನಿಲ್ದಾಣ ಹಾಗೂ ಮಂಗಳೂರಿನ ಬಂದರು ಪ್ರದೇಶಗಳಿಂದ ಒಟ್ಟು ನಾಲ್ಕು ದ್ವಿಚಕ್ರ ವಾಹನಗಳನ್ನು ಕದ್ದಿರುವುದು ತಿಳಿದುಬಂದಿದೆ.

ಇನ್ಸ್ಪೆಕ್ಟರ್ ಮೆಲ್ವಿನ್ ಜೋಸ್ ಮತ್ತು ಎಸ್ಐ ಪಿ.ವಿ. ಮನು ನೇತೃತ್ವದ ವಿಶೇಷ ಪೊಲೀಸ್ ತಂಡ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಕಾರ್ಯಾಚರಣೆ ನಡೆಸಿ, ಹಳೇ ಬಸ್ ನಿಲ್ದಾಣ ಪರಿಸರದಲ್ಲಿ ಆರೋಪಿಯನ್ನು ಸೆರೆಹಿಡಿದಿದೆ.
ಈಗಾಗಲೇ ಕಳವಾದ ಎರಡು ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಬಾಕಿ ವಾಹನಗಳನ್ನು ಪತ್ತೆಹಚ್ಚಲು ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

