
ಮಂಗಳೂರು: ನಗರದ ವೆಲೆನ್ಸಿಯಾದ ಸೆಂಟ್ ವಿನ್ಸೆಂಟ್ ಫೆರರ್ ಚರ್ಚ್ನ ಫಾದರ್ ಸಿಪ್ರಿಯನ್ ಪಿಂಟೋ ವಿರುದ್ಧ ಅಪ್ರಾಪ್ತ ಬಾಲಕರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಈ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಚರ್ಚ್ಗೆ ಪ್ರಾರ್ಥನೆಗೆ ಬರುತ್ತಿದ್ದ ಬಾಲಕನಿಗೆ ಚಾಕೊಲೇಟ್ ನೀಡಿ ಆಮಿಷವೊಡ್ಡಿ, ಕೊಠಡಿಗೆ ಕರೆಸಿಕೊಂಡು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಬಾಲಕ ತನ್ನ ಸ್ನೇಹಿತರೊಂದಿಗೆ ವಿಷಯ ಹಂಚಿಕೊಂಡಾಗ, ಇತರ ಬಾಲಕರೂ ಇದೇ ರೀತಿಯ ಕಿರುಕುಳಕ್ಕೆ ಒಳಗಾಗಿರುವ ಮಾಹಿತಿ ಲಭಿಸಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಘಟನೆ ಕುರಿತು ಬಾಲಕ ಮನೆಯವರಿಗೆ ತಿಳಿಸಿದ ಬಳಿಕ ಪೋಷಕರು ಧರ್ಮಪ್ರಾಂತ್ಯದ ಬಿಷಪ್ ಅವರನ್ನು ಸಂಪರ್ಕಿಸಿದ್ದು, ಅವರ ಸೂಚನೆಯಂತೆ ಪೊಲೀಸರಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ. ಅಪ್ರಾಪ್ತರ ಗುರುತು ಬಹಿರಂಗವಾಗದಂತೆ ಗೌಪ್ಯತೆ ಕಾಪಾಡಲಾಗಿದ್ದು, ಪೋಕ್ಸೊ ಕಾಯ್ದೆಯಡಿ ಪ್ರಕರಣದ ತನಿಖೆ ನಡೆಯುತ್ತಿದೆ. ಆರೋಪಗಳ ಸತ್ಯಾಸತ್ಯತೆ ತನಿಖೆಯಿಂದ ತಿಳಿದುಬರಬೇಕಿದೆ.


