
ಕಾಸರಗೋಡು: ಬಂದಡ್ಕದ ಕಡವಂದಲ್ಲಿ ಅಂಗಡಿಯೊಂದರ ಮೇಲಿನ ಕೋಣೆಯಲ್ಲಿ ಯುವಕನೊಬ್ಬನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ಕೋಣೆಯು ಹೊರಗಿನಿಂದ ಬೀಗ ಹಾಕಲ್ಪಟ್ಟಿತ್ತು. ಮೃತನ ಕೊರಳಲ್ಲಿ ಸಣ್ಣ ವಸ್ತ್ರ ಬಿಗಿದ ಸ್ಥಿತಿಯಲ್ಲಿದ್ದು, ಇದು ಕೊಲೆ ಇರಬಹುದೆಂಬ ಶಂಕೆ ಬಲವಾಗಿದೆ.ಅಕ್ಟೋಬರ್ 5 ರಂದು ಕರ್ನಾಟಕದ ದಾವಣಗೆರೆ ಮೂಲದ ನಾಲ್ವರ ತಂಡ ನಜೀಮ್ ಎಂಬಾತನ ಹೆಸರಿನಲ್ಲಿ ಈ ಕೋಣೆಯನ್ನು ಬಾಡಿಗೆಗೆ ಪಡೆದಿತ್ತು.ಸಿಸಿಟಿವಿ ಪರಿಶೀಲನೆ ನಡೆಸಿದಾಗ, ಜತೆಯಲ್ಲಿದ್ದ ಮೂವರು ಬ್ಯಾಗ್ಗಳೊಂದಿಗೆ ಜಾಗ ಖಾಲಿ ಮಾಡುತ್ತಿರುವುದು ಕಂಡುಬಂದಿದೆ.

ಮೃತನ ಗುರುತು ಇನ್ನೂ ಪತ್ತೆಯಾಗಿಲ್ಲ. ಸದ್ಯ ಫೊರೆನ್ಸಿಕ್ ತನಿಖೆ ಮುಗಿಸಿ ಮೃತದೇಹವನ್ನು ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.ಪರಾರಿಯಾಗಿರುವ ಮೂವರನ್ನು ಬಂಧಿಸಿದರೆ ಮಾತ್ರವೇ ಮೃತನ ಗುರುತು ಹಾಗೂ ಸಾವಿನ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.


