ಅ. 24ರಂದು ಮಂಜೇಶ್ವರದಲ್ಲಿ ಡಾ. ವೆಂಕಟರಾಜ ಪುಣಿಂಚತ್ತಾಯ ಸಂಸ್ಮರಣೆ, ಪುವೆಂಪು ಪ್ರಶಸ್ತಿ ಪ್ರದಾನ

ಮಂಗಳೂರು: ಬಹುಭಾಷಾ ಪಂಡಿತ, ಸಂಶೋಧಕ ಹಾಗೂ ತುಳುರತ್ನ ಡಾ. ಪಿ. ವೆಂಕಟರಾಜ ಪುಣಿಂಚತ್ತಾಯ ಅವರ ಸಂಸ್ಮರಣೆ, ಪ್ರಶಸ್ತಿ ಪ್ರದಾನ ಹಾಗೂ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ ಅ. 24ರಂದು ಮಂಜೇಶ್ವರದ ಗಿಳಿವಿಂಡುವಿನಲ್ಲಿ ನಡೆಯಲಿದೆ. ಕರ್ನಾಟಕ ಸರ್ಕಾರದ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕಾಸರಗೋಡಿನ ಪುವೆಂಪು ಪ್ರತಿಷ್ಠಾನ ಹಾಗೂ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಟ್ರಸ್ಟ್‌ನ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪುವೆಂಪು ಪ್ರತಿಷ್ಠಾನದ ಅಧ್ಯಕ್ಷ ಕುಂಟಾರು ರವೀಶ ತಂತ್ರಿ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10 ಗಂಟೆಗೆ ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಸಲೀಂ ಅಹಮ್ಮದ್ ಕಾರ್ಯಕ್ರಮ ಉದ್ಘಾಟಿಸುವರು. ಹಿರಿಯ ಸಾಹಿತಿ, ಚಿಂತಕ ಡಾ. ಬರಗೂರು ರಾಮಚಂದ್ರಪ್ಪ ಅವರಿಗೆ 2026ನೇ ಸಾಲಿನ ಪುವೆಂಪು ಪ್ರಶಸ್ತಿ ಘೋಷಿಸಲಾಗಿದ್ದು, ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಸಚಿವ ಕೆ.ಎಚ್. ಮುನಿಯಪ್ಪ ಪ್ರಶಸ್ತಿ ಪ್ರದಾನ ಮಾಡುವರು ಎಂದರು.

ಎಂ. ಶಾಫಿ ಬಂಡಸಾಲ ಅವರ ಕವನ ಸಂಕಲನ ಹೃದಯಗೀತೆ ಕೃತಿಯನ್ನು ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಟ್ರಸ್ಟ್‌ನ ಅಧ್ಯಕ್ಷ ಡಾ. ಎಂ. ವೀರಪ್ಪ ಮೊಯ್ಲಿ ಬಿಡುಗಡೆಗೊಳಿಸುವರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸುವರು.

ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯೆ ಇರ್ಫಾನ ಇಕ್ಯಾಲ್, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ, ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಒಕ್ಕೂಟದ ಸಂಸ್ಥಾಪಕ ಅಶೋಕ ಚಂದರಗಿ, ಹಿರಿಯ ಸಾಹಿತಿ ಕೆ. ರಮಾನಂದ ಬನಾರಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಕನ್ನಡ ಸಾಹಿತ್ಯ ಪರಿಷತ್ತಿನ ಕೇರಳ ಗಡಿನಾಡು ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ್ ತೊಟ್ಟೆತ್ತೋಡಿ, ಗಡಿನಾಡು ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ಅಧ್ಯಕ್ಷ ಎನ್. ಚನಿಯಪ್ಪ ನಾಯ್ಕ, ಕರ್ನಾಟಕ ಜಾನಪದ ಪರಿಷತ್ತಿನ ಕೇರಳ ಘಟಕದ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ನಾಸಿ, ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಸಂಕಬೈಲು ಸತೀಶ್ ಅಡಪ ಹಾಗೂ ಐಎನ್‌ಸಿ ಮಂಜೇಶ್ವರ ಮಂಡಲ ಅಧ್ಯಕ್ಷ ಹನೀಫ್ ಪಡಿಬಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ಕನ್ನಡ ಸಾಹಿತ್ಯ, ಸಂಸ್ಕೃತಿಗೆ ಬರಗೂರು ಕೊಡುಗೆ

ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಚಿಂತನೆ, ಸಂಘಟನೆ ಹಾಗೂ ಬೋಧನೆಯ ಮೂಲಕ ಮಹತ್ವದ ಕೊಡುಗೆ ನೀಡಿರುವ ಪ್ರೊ. ಬರಗೂರು ರಾಮಚಂದ್ರಪ್ಪ ಅವರು 1970ರ ದಶಕದ ಮಧ್ಯಭಾಗದಿಂದಲೇ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿರುವ ಅವರು, ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಕನ್ನಡ ವಿಭಾಗದ ಪ್ರಾಧ್ಯಾಪಕರಾಗಿ ನಿವೃತ್ತರಾಗಿದ್ದಾರೆ.

ಬಂಡಾಯ ಸಾಹಿತ್ಯ ಸಂಘಟನೆಯ ರಾಜ್ಯ ಸಂಚಾಲಕರಾಗಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗೆ ಶ್ರಮಿಸಿದ್ದಾರೆ. ಪಂಪ ಪ್ರಶಸ್ತಿ, ನೃಪತುಂಗ ಪ್ರಶಸ್ತಿ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ಪಾತ್ರರಾಗಿದ್ದಾರೆ. ಚಲನಚಿತ್ರ ಕ್ಷೇತ್ರದಲ್ಲಿಯೂ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಡಾ. ವೆಂಕಟರಾಜ ಪುಣಿಂಚತ್ತಾಯ ಅವರ ಹೆಸರಿನಲ್ಲಿ ನೀಡಲಾಗುವ ಪ್ರತಿಷ್ಠಿತ ಪುವೆಂಪು ಪ್ರಶಸ್ತಿಗೆ ಬರಗೂರು ರಾಮಚಂದ್ರಪ್ಪ ಆಯ್ಕೆಯಾಗಿರುವುದು ಅವರ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಸಾಧನೆಗೆ ಸಂದ ಗೌರವವಾಗಿದೆ ಎಂದು ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷ, ಸಾಹಿತಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಗಡಿನಾಡು ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ಸಂಸ್ಥಾಪಕ ಎಸ್. ಪ್ರದೀಪ ಕುಮಾರ ಕಲ್ಕೂರ, ಪ್ರಮುಖರಾದ ರಾಧಾಕೃಷ್ಣ ಉಳಿಯತ್ತಡ್ಕ , ಕೆ. ತೇಜೋಮಯ, ಸಯ್ಯದ್ ಯು.ಕೆ. ಸೈಫುಲ್ಲ ತಂಗಳ್ ಉದ್ಯಾವರ, ರವಿ ನಾಯ್ಕಾಪು, ಅರಿಬೈಲು ಗೋಪಾಲ ಶೆಟ್ಟಿ, ವಿಜಯರಾಜ ಪುಣಿಂಚತ್ತಾಯ ,ಎ ಆರ್ ಸುಬ್ಬಯ್ಯ ಕಟ್ಟೆ , ಅಖಿಲೇಶ್ ನಗುಮುಗಂ ಮತ್ತಿತರರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!