ಕಾಸರಗೋಡು : ಬೇಕಲ ಸೇತುವೆಯ ಬಳಿ ಗೋವಾದಿಂದ ಕೊಚ್ಚಿಗೆ ತೆರಳುತ್ತಿದ್ದ ಖಾಸಗಿ ರಾತ್ರಿ ಕಾಲ ಸೇವಾ ಬಸ್ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಮಗುಚಿ ಬಿದ್ದಿದೆ. ಭಾನುವಾರ ಮುಂಜಾನೆ 2 ಗಂಟೆಯ ಸುಮಾರಿಗೆ ಈ ಅಪಘಾತ ಸಂಭವಿಸಿದ್ದು, ಬಸ್ಸಿನಲ್ಲಿದ್ದ ಒಟ್ಟು 36 ಪ್ರಯಾಣಿಕರಲ್ಲಿ 19 ಮಂದಿಯನ್ನು ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮತ್ತೊಂದು ವಾಹನವನ್ನು ಓವರ್ಟೇಕ್ ಮಾಡಿ ಎದುರಿಗೆ ಬಂದ ಕಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದಾಗ ಬಸ್ ಚಾಲಕನ ನಿಯಂತ್ರಣ ತಪ್ಪಿ ಈ ದುರ್ಘಟನೆ ಸಂಭವಿಸಿದೆ.
ಶಬ್ದ ಕೇಳಿ ಧಾವಿಸಿ ಬಂದ ಸ್ಥಳೀಯರು ತಕ್ಷಣ ರಕ್ಷಣಾ ಕಾರ್ಯ ನಡೆಸಿದರು. ನಂತರ ಕ್ರೇನ್ ಸಹಾಯದಿಂದ ಬಸ್ಸನ್ನು ಮೇಲಕ್ಕೆತ್ತಲಾಗಿದ್ದು, ಬೆಳಿಗ್ಗೆ 10 ಗಂಟೆಯ ವೇಳೆಗೆ ಮತ್ತೊಂದು ಬಸ್ ವ್ಯವಸ್ಥೆ ಮಾಡಿ ಇತರೆ ಪ್ರಯಾಣಿಕರನ್ನು ಎರ್ನಾಕುಳಂಗೆ ಕಳುಹಿಸಿಕೊಡಲಾಯಿತು.

