ಜುಬೈಲ್: ದಾರುಲ್ ಹಸನಿಯಾ ಅಕಾಡೆಮಿ ಎಜು-ಪಾರ್ಕ್, ಪುತ್ತೂರು ಇದರ ಸೌದಿ ಅರೇಬಿಯಾದ ಜುಬೈಲ್ ಘಟಕ ಮತ್ತು ಎಸ್.ಐ.ಸಿ.ಜುಬೈಲ್ ಘಟಕದ ವತಿಯಿಂದ ಜಂಟಿಯಾಗಿ ದಾರುಲ್ ಹಸನಿಯಾ ಸಂಸ್ಥೆಯ ನೂತನ ಅಧ್ಯಕ್ಷರಾದ ಸಯ್ಯಿದ್ ಅಲಿ ತಂಙಳ್ ಕುಂಬೋಳ್, ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಖಾಝಿ ಉಸ್ಮಾನುಲ್ ಫೈಝಿ ಉಸ್ತಾದ್ ತೋಡಾರ್ ಹಾಗೂ ಮುಫತ್ತಿಷ್ ಉಮರ್ ದಾರಿಮಿ ಅವರಿಗೆ ಅಭಿನಂದನಾ ಸಮಾರಂಭ ಜುಬೈಲ್ನ ಕೋಸ್ಟಲ್ ಡೈನ್ ರೆಸ್ಟೋರೆಂಟ್ನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಗಣ್ಯರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಯ್ಯಿದ್ ಅಲಿ ತಂಙಳ್ ಕುಂಬೋಳ್, ದಾರುಲ್ ಹಸನಿಯಾ ವಿದ್ಯಾಸಂಸ್ಥೆಯು ಎಸ್.ಎನ್.ಇ.ಸಿ. ಪಠ್ಯಕ್ರಮವನ್ನು ಅಳವಡಿಸಿಕೊಂಡು ಅಲ್ಪಾವಧಿಯಲ್ಲಿಯೇ ಗಮನಾರ್ಹ ಸಾಧನೆಯತ್ತ ಮುನ್ನಡೆಯುತ್ತಿರುವುದು ಶ್ಲಾಘನೀಯವಾಗಿದೆ ಎಂದ ಅವರು, ಸಂಸ್ಥೆಯ ಶೈಕ್ಷಣಿಕ ಮತ್ತು ಸಾಂಸ್ಥಿಕ ಬೆಳವಣಿಗೆಯಲ್ಲಿ ಎಲ್ಲರೂ ಕೈಜೋಡಿಸುವಂತೆ ಅವರು ಕರೆ ನೀಡಿದರು.
ಪ್ರಾರ್ಥನೆಗೆ ನೇತೃತ್ವ ನೀಡಿ ಮಾತನಾಡಿದ ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಖಾಝಿ ಉಸ್ಮಾನುಲ್ ಫೈಝಿ ತೋಡಾರ್, ಶಿಕ್ಷಣ ಕ್ಷೇತ್ರಕ್ಕೆ ನೀಡುವ ನೆರವು ಭವಿಷ್ಯದ ಪೀಳಿಗೆಗೆ ಬೆಳಕು ನೀಡಿದಂತೆ. ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಇಂತಹ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಸಮಾಜದ ಎಲ್ಲ ವರ್ಗದವರ ಸಹಕಾರ ಅತ್ಯಗತ್ಯ ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಎಸ್.ಐ.ಸಿ. ಸೌದಿ ಅರೇಬಿಯಾ ನ್ಯಾಷನಲ್ ಸಮಿತಿಯ ಮುಖಂಡರಾದ ಸುಲೈಮಾನ್ ಖಾಸಿಮಿ, ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣದ ಸಮನ್ವಯದ ಮೂಲಕ ಮೌಲ್ಯಾಧಾರಿತ ಸಮಾಜ ನಿರ್ಮಾಣದ ಗುರಿಯೊಂದಿಗೆ ಮುನ್ನಡೆಯುತ್ತಿರುವ ದಾರುಲ್ ಹಸನಿಯಾ ಅಕಾಡೆಮಿಯ ಕಾರ್ಯವೈಖರಿ ಪ್ರಶಂಸನೀಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಪ್ರಾಸ್ತಾವಿಕವಾಗಿ ಮಾತನಾಡಿದ ದಾರುಲ್ ಹಸನಿಯಾ ಗಲ್ಫ್ ಸಮಿತಿಯ ನಿರ್ದೇಶಕ ಹಾಗೂ ಉದ್ಯಮಿ ಫಾರೂಕ್ ಹಾಜಿ ಪೋರ್ಟ್ ವೆ, ಸಂಸ್ಥೆಯು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸುವುದರ ಜೊತೆಗೆ ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪೋಷಿಸುವ ಮತ್ತು ನೈತಿಕ ಮೌಲ್ಯಗಳನ್ನು ಬೆಳೆಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ ಎಂದರು. ಸಂಸ್ಥೆಯ ನೂತನ ಅಧ್ಯಕ್ಷರಾದ ಸಯ್ಯಿದ್ ಅಲಿ ತಂಙಳ್ ಅವರ ನೇತೃತ್ವದಲ್ಲಿ ಸಂಸ್ಥೆಯು ಇನ್ನಷ್ಟು ಅಭಿವೃದ್ಧಿ ಹೊಂದುವ ವಿಶ್ವಾಸ ವ್ಯಕ್ತಪಡಿಸಿದರು. ಸಂಸ್ಥೆಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದ ಯಶಸ್ಸಿಗೆ ಸಹಕರಿಸಿದ ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಉಸ್ಮಾನುಲ್ ಫೈಝಿ ತೋಡಾರ್ ಸೇರಿದಂತೆ ಸಂಸ್ಥೆಯ ಅಭಿವೃದ್ಧಿಯ ಪಯಣದಲ್ಲಿ ನೆರವು ನೀಡುತ್ತಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಸಮಾರಂಭದಲ್ಲಿ ದಾರುಲ್ ಹಸನಿಯಾ ಗಲ್ಫ್ ಪ್ರತಿನಿಧಿ ಅಬ್ದುಲ್ ಕರೀಂ ದಾರಿಮಿ ಹಾಗೂ ಮುಫತ್ತಿಷ್ ಉಮರ್ ದಾರಿಮಿ ಅವರು ಸಂಸ್ಥೆಯ ಶೈಕ್ಷಣಿಕ ಕಾರ್ಯಚಟುವಟಿಕೆಗಳು ಮತ್ತು ಅಭಿವೃದ್ಧಿಯ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ದಾರುಲ್ ಹಸನಿಯಾ ಅಕಾಡೆಮಿಯ ಕೋಶಾಧಿಕಾರಿ ಆಸಿಫ್ ಹಾಜಿ ದರ್ಬೆ, ದಾರುಲ್ ಹಸನಿಯಾ ಸೌದಿ ಅರೇಬಿಯಾ ಸಮಿತಿ ಅಧ್ಯಕ್ಷ ಫೈರೋಝ್ ಹಾಜಿ ಪರ್ಲಡ್ಕ, ಪ್ರಧಾನ ಕಾರ್ಯದರ್ಶಿ ನಿಸಾರ್ ಪರ್ಲಡ್ಕ, ಉಪಾಧ್ಯಕ್ಷ ತೌಸೀರ್ ದರ್ಬೆ, ಎಸ್.ಐ.ಸಿ. ಜುಬೈಲ್ ಸಮಿತಿಯ ಅಧ್ಯಕ್ಷ ಅಬ್ದುಲ್ ರಝಾಕ್ ಫೈಝಿ, ಇಸ್ಮಾಯಿಲ್ ಹುದವಿ, ಉಸ್ಮಾನ್ ಶಾಫಿ, ಇಬ್ರಾಹಿಂ ದಾರಿಮಿ, ಅಬ್ದುಲ್ ಮಜೀದ್ ಕರ್ನಿರೆ, ತಾಹಿರ್ ಸಾಲ್ಮರ, ಅಬ್ದುಲ್ ಲತೀಫ್ ಮರಕ್ಕಿಣಿ, ಸುಹೈಲ್ ಕೋಡಿಂಬಾಡಿ,ಇಕ್ಬಾಲ್ ಕುಂತೂರು,ಆಸಿಫ್ ಬಪ್ಪಳಿಗೆ, ಅಬ್ದುಲ್ ರಹಿಮಾನ್ ಕೆ.ಎಸ್.ಕೆ. ಜಸೀಂ ,ಶಫೀಕ್, ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಎಸ್.ಐ.ಸಿ. ಜುಬೈಲ್ ಸಮಿತಿಯ ಮುಖಂಡ ಸಯ್ಯಿದ್ ಅಹ್ಮದ್ ತಂಙಳ್ ಸ್ವಾಗತಿಸಿದರು. ಆಶಿಕ್ ಬಾಖವಿ ಕಿರಾಅತ್ ಪಠಿಸಿದರು. ಸಲಾಹುದ್ದೀನ್ ಜೋಕಟ್ಟೆ ವಂದಿಸಿದರು.ನವಾಝ್ ಮುಕ್ವೆ ಕಾರ್ಯಕ್ರಮ ನಿರೂಪಿಸಿದರು

