ಮಂಗಳೂರು: ಭಾರತದ ಏಕತೆ, ಅಖಂಡತೆ, ಭಾಷಾ ವೈವಿಧ್ಯತೆ, ಸಾಂಸ್ಕೃತಿಕ ಸಾಮರಸ್ಯ ಹಾಗೂ ಶಾಂತಿಯ ಸಂದೇಶವನ್ನು ವಿಶ್ವಕ್ಕೆ ಸಾರುವ ಉದ್ದೇಶದಿಂದ 28 ರಾಜ್ಯಗಳು, 28 ಭಾಷೆಗಳು ಹಾಗೂ 28 ಗಂಟೆಗಳ ನಿರಂತರ ಏಕವ್ಯಕ್ತಿ ಗಾಯನದ ‘ಒಂದೇ ಭಾರತ ಮಾತರಂ’ ವಿಶ್ವದಾಖಲೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಗಾಯಕ ಹಾಗೂ ಕಾರ್ಯಕ್ರಮದ ರೂವಾರಿ ವಿದ್ವಾನ್ ಯಶವಂತ್ ಎಂ.ಜಿ. ತಿಳಿಸಿದರು.

ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ಟೋಬರ್ 28 ಮತ್ತು 29ರಂದು ಬೆಂಗಳೂರಿನ ಮಹಾಲಕ್ಷ್ಮೀಪುರಂನ ಗೆಳೆಯರ ಬಳಗದ ರಾಜಕುಮಾರ ಕಲಾಭವನದಲ್ಲಿ ಕಾರ್ಯಕ್ರಮ ನಡೆಯಲಿದೆ. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಏಕೀಕರಣದ ಪರಿಕಲ್ಪನೆಗೆ ಗೌರವ ಸಲ್ಲಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಪ್ರತಿಯೊಂದು ರಾಜ್ಯಕ್ಕೂ ಒಂದೊಂದು ಗಂಟೆ ಮೀಸಲಿಟ್ಟು, ಆಯಾ ರಾಜ್ಯದ ಭಾಷೆಯಲ್ಲಿ ಗಾಯನ ನಡೆಸುವ ಮೂಲಕ ರಾಷ್ಟ್ರೀಯ ಏಕತೆಯ ಸಂದೇಶ ಸಾರಲಾಗುವುದು ಎಂದರು.

ಅ.28ರಂದು ಬೆಳಗ್ಗೆ 10 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಮಧ್ಯಾಹ್ನ 12.55ಕ್ಕೆ ಹಿಮಾಚಲ ಪ್ರದೇಶದ ಬಾವುಟದ ಪ್ರವೇಶದೊಂದಿಗೆ ಗಾಯನ ಆರಂಭವಾಗಲಿದೆ. ಡಾ. ರಾಜ್‌ಕುಮಾರ್ ಅವರ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಗೀತೆಯೊಂದಿಗೆ ಗಾಯನಕ್ಕೆ ಚಾಲನೆ ನೀಡಲಾಗುತ್ತದೆ. ಅ.29ರಂದು ಇದೇ ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ. ಕೊನೆಯ ನಾಲ್ಕರಿಂದ ಐದು ಗಂಟೆಗಳ ಅವಧಿಯಲ್ಲಿ ಕನ್ನಡ ಗೀತೆಗಳ ಜೊತೆಗೆ ತುಳು ಹಾಗೂ ಕೊಡವ ಭಾಷೆಯ ಗೀತೆಗಳಿಗೂ ಅವಕಾಶ ಕಲ್ಪಿಸಲಾಗಿದೆ ಎಂದು ವಿವರಿಸಿದರು.

ಹಿಂದೆ ಕನ್ನಡದಲ್ಲಿ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಗೀತೆಗಳನ್ನು 14 ದಿನಗಳ ಕಾಲ ನಿರಂತರವಾಗಿ ಹಾಡಿ ವಿಶ್ವದಾಖಲೆ ನಿರ್ಮಿಸಿದ್ದಾಗಿ ತಿಳಿಸಿದ ಅವರು, ಆ ಪ್ರಯತ್ನಕ್ಕೆ ಮಾಧ್ಯಮಗಳು ನೀಡಿದ ಪ್ರೋತ್ಸಾಹಕ್ಕೆ ಕೃತಜ್ಞತೆ ಸಲ್ಲಿಸಿದರು. ಜಾತಿ, ಧರ್ಮ ಹಾಗೂ ಭಾಷೆಗಳ ಭೇದ ಮರೆತು ನಾವೆಲ್ಲರೂ ಭಾರತೀಯರು ಎಂಬ ಏಕತೆಯ ಭಾವನೆಯನ್ನು ಸಂಗೀತದ ಮೂಲಕ ಜನರಿಗೆ ತಲುಪಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಕಾರ್ಯಕ್ರಮಕ್ಕೆ ಎಲ್ಲರೂ ಸಹಕಾರ ನೀಡಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಸುರಸಾರವ ಪ್ರೈವೇಟ್ ಲಿಮಿಟೆಡ್‌ನ ಪ್ರಮುಖರಾದ ಶುಶಾಂತ್ ಭಂಡಾರಿ, ಮಾಧವ ಸುವರ್ಣ, ಉಮಾಕಾಂತ್, ನವೀನ್ ಹಾಗೂ ಮಲ್ಲಿಕಾ ಉಪಸ್ಥಿತರಿದ್ದರು.

