
ಮಂಗಳೂರು: ಅಖಿಲ ಭಾರತೀಯ ಸಾಹಿತ್ಯ ಪರಿಷದ್ (ನೋಂ), ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವತಿಯಿಂದ “ಆತ್ಮಬೋಧೆಯಿಂದ ವಿಶ್ವಬೋಧೆಯೆಡೆಗೆ” ಎಂಬ ಧ್ಯೇಯವಾಕ್ಯದೊಂದಿಗೆ ಜಿಲ್ಲಾ ಅಧಿವೇಶನವನ್ನು ಅಕ್ಟೋಬರ್ 25ರ ಭಾನುವಾರ ಮೂಲ್ಕಿ ಶಿಮಂತೂರು ಶ್ರೀ ಆದಿ ಜನಾರ್ಧನ ಸ್ವಾಮಿದೇವಾಲಯದ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಅಂದು ಬೆಳಿಗ್ಗೆ 9.30ರಿಂದ ಆರಂಭವಾಗುವ ಅಧಿವೇಶನದಲ್ಲಿ ಉದ್ಘಾಟನಾ ಸಮಾರಂಭ, ಸಾಹಿತ್ಯ ಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ, ಬಹುಭಾಷಾ ಕವಿಗೋಷ್ಠಿ ಹಾಗೂ ಸಮಾರೋಪ ಸಮಾರಂಭಗಳು ನಡೆಯಲಿವೆ.

ಲೇಖಕಿ ಮತ್ತು ವಿದ್ವಾಂಸರಾದ ಡಾ. ವೀಣಾ ಬನ್ನಂಜೆ ಅವರು ಅಧಿವೇಶನವನ್ನು ಉದ್ಘಾಟಿಸಲಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಶ್ರೀ ಗಣೇಶ ಅಡಿಗ ಅವರು ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ.
“ಸಾಹಿತ್ಯದಲ್ಲಿ ವಿಶ್ವಬೋಧೆ” ಎಂಬ ವಿಷಯದ ಕುರಿತು ಸಾಹಿತ್ಯ ಗೋಷ್ಠಿ ನಡೆಯಲಿದೆ. ಕೆನರಾ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಡಾ. ಮಧುಕೇಶ್ವರ ಶಾಸ್ತ್ರಿ ಅವರು ಸಂಸ್ಕೃತ ಸಾಹಿತ್ಯದಲ್ಲಿ ವಿಶ್ವಬೋಧೆ, ಲೇಖಕ ಮತ್ತು ಪ್ರಕಾಶಕರಾದ ಶ್ರೀ ರೋಹಿತ್ ಚಕ್ರತೀರ್ಥ ಅವರು ಕನ್ನಡ ಸಾಹಿತ್ಯದಲ್ಲಿ ವಿಶ್ವಬೋಧೆ ಹಾಗೂ ಅಧ್ಯಾಪಕ ಮತ್ತು ಯಕ್ಷಗಾನ ಗುರುಗಳಾದ ಶ್ರೀ ದೀವಿತ್ ಎಸ್. ಕೆ. ಪೆರಾಡಿ ಅವರು ತುಳು ಸಾಹಿತ್ಯದಲ್ಲಿ ವಿಶ್ವಬೋಧೆ ಎಂಬ ವಿಷಯಗಳ ಕುರಿತು ವಿಚಾರ ಮಂಡಿಸಲಿದ್ದಾರೆ.
ಮಧ್ಯಾಹ್ನ 1.15ರಿಂದ ಉರ್ವದ ನಾಟ್ಯರಾಧನಾ ಕಲಾ ಕೇಂದ್ರದ (ರಿ.) ಗುರು ವಿದುಷಿ ಸುಮಂಗಲಾ ರತ್ನಾಕರ್ ರಾವ್ ಅವರ ಶಿಷ್ಯವೃಂದದವರಿಂದ “ನೃತ್ಯ ವರ್ಣ” ಎಂಬ ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಗೊಳ್ಳಲಿದೆ.

28 ಭಾಷೆಗಳ 30 ಕವಿಗಳಿಂದ ಬಹುಭಾಷಾ ಕವಿಗೋಷ್ಠಿ
ಮಧ್ಯಾಹ್ನ 2 ಗಂಟೆಯಿಂದ ಬಹುಭಾಷಾ ಕವಿಗೋಷ್ಠಿ ನಡೆಯಲಿದ್ದು, ಕಿನ್ನಿಗೋಳಿಯ ಹಿರಿಯ ಕವಿ ಹಾಗೂ ಲೇಖಕರಾದ ಶ್ರೀ ಶ್ರೀಧರ್ ಡಿ.ಎಸ್. ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಸುಮಾರು 28 ಭಾರತೀಯ ಭಾಷೆಗಳ 30 ಕವಿಗಳು ತಮ್ಮ ಕವನಗಳ ಮೂಲಕ ಸಾಹಿತ್ಯದ ವೈವಿಧ್ಯ ಮತ್ತು ಭಾವಸಂವೇದನೆಗಳನ್ನು ಅಭಿವ್ಯಕ್ತಪಡಿಸಲಿದ್ದಾರೆ.
ಅಪರಾಹ್ನ 3.30ರಿಂದ ನಡೆಯುವ ಸಮಾರೋಪ ಸಮಾರಂಭದಲ್ಲಿ ಹಿರಿಯ ಲೇಖಕರು ಹಾಗೂ ಅಂಕಣಕಾರರಾದ ಪ್ರೊ. ಪ್ರೇಮಶೇಖರ್ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ. ಅಖಿಲ ಭಾರತೀಯ ಸಾಹಿತ್ಯ ಪರಿಷದ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ವೀಣಾ ಟಿ. ಶೆಟ್ಟಿ ಅವರು ಅಧ್ಯಕ್ಷತೆ ವಹಿಸಲಿದ್ದು, ಶಿಮಂತೂರು-ಮೂಲ್ಕಿಯ ಶ್ರೀ ಆದಿ ಜನಾರ್ಧನ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಉದಯ ಬಿ. ಶೆಟ್ಟಿ ಅವರು ಉಪಸ್ಥಿತರಿರಲಿದ್ದಾರೆ.

ಸಾಹಿತ್ಯವು ವ್ಯಕ್ತಿಯ ಆತ್ಮವಿಕಾಸಕ್ಕೆ ಪ್ರೇರಣೆ ನೀಡುವುದರ ಜೊತೆಗೆ ಸಮಾಜದಲ್ಲಿ ವಿಶಾಲ ದೃಷ್ಟಿಕೋನ, ಮಾನವೀಯ ಮೌಲ್ಯಗಳು ಹಾಗೂ ವಿಶ್ವಬಂಧುತ್ವದ ಭಾವನೆಯನ್ನು ಬೆಳೆಸುವ ಶಕ್ತಿಯನ್ನು ಹೊಂದಿದೆ. ಈ ಆಶಯವನ್ನು ಕೇಂದ್ರವಾಗಿಟ್ಟುಕೊಂಡು ಆಯೋಜಿಸಿರುವ ಜಿಲ್ಲಾ ಅಧಿವೇಶನವು ಸಂಸ್ಕೃತ, ಕನ್ನಡ ಮತ್ತು ತುಳು ಸಾಹಿತ್ಯಗಳ ನಡುವಿನ ಸಂವಾದಕ್ಕೆ ವೇದಿಕೆಯಾಗುವುದರೊಂದಿಗೆ ಬಹುಭಾಷಾ ಸಾಹಿತ್ಯದ ಶ್ರೀಮಂತಿಕೆಯನ್ನು ಪರಿಚಯಿಸಲಿದೆ. ಸಾಹಿತ್ಯಾಸಕ್ತರು, ಸಾಹಿತಿಗಳು, ಕವಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅಧಿವೇಶನವನ್ನು ಯಶಸ್ವಿಗೊಳಿಸಬೇಕೆಂದು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಮನವಿ ಮಾಡಿದೆ.

