ಕುಂಬಳೆ : ನಾಡಿನಾದ್ಯಂತ ನೈರ್ಮಲ್ಯ ಜಾಗೃತಿ ಅಲೆ ಎದ್ದಿರುವ ಬೆನ್ನಲ್ಲೇ, ಕುಂಬಳೆಯಲ್ಲಿ ಸಾರ್ವಜನಿಕರ ಶ್ರಮಕ್ಕೆ ಕಸ ಚೆಲ್ಲುವ ಘಟನೆಯೊಂದು ವರದಿಯಾಗಿದೆ.

ಕುಂಬಳೆ-ಬದಿಯಡ್ಕ ರಸ್ತೆಯ ಭಾಸ್ಕರ ನಗರದ ಖಾಸಗಿ ಕಾಲೇಜಿನ ಸಮೀಪವಿರುವ ಮನೆ ಬಾಗಿಲಿನಲ್ಲೇ ಕಿಡಿಗೇಡಿಯೊಬ್ಬ ಗೋಣಿಚೀಲದಲ್ಲಿ ತಂದ ತ್ಯಾಜ್ಯವನ್ನು ಬಿಟ್ಟು ಪರಾರಿಯಾಗಿದ್ದಾನೆ.
ಇತ್ತೀಚೆಗಷ್ಟೇ ನವೋದಯ ಫ್ರೆಂಡ್ಸ್ ಕ್ಲಬ್ ಕಾರ್ಯಕರ್ತರು ಈ ಪರಿಸರವನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದ್ದರು. ಆದರೆ ಇಂದು ಬೆಳಿಗ್ಗೆ ಮನೆ ಬಾಗಿಲಲ್ಲಿದ್ದ ಕಸ ಕಂಡು ಸಿಸಿಟಿವಿ ಪರಿಶೀಲಿಸಿದಾಗ ವ್ಯಕ್ತಿಯೊಬ್ಬನ ನೀಚ ಕೃತ್ಯ ಬಯಲಾಗಿದೆ.

ಘಟನೆಯಿಂದ ಆಕ್ರೋಶಗೊಂಡಿರುವ ಕ್ಲಬ್ ಪದಾಧಿಕಾರಿಗಳು ಹಾಗೂ ಮನೆ ಮಾಲಕರು ಕುಂಬಳೆ ಪೋಲಿಸ್ ಠಾಣೆ ಮತ್ತು ಗ್ರಾಮ ಪಂಚಾಯತ್‌ಗೆ ದೂರು ನೀಡಿದ್ದು, ಪರಿಸರ ಮಾಲಿನ್ಯ ಉಂಟುಮಾಡಿದ ವ್ಯಕ್ತಿಯ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಲು ಒತ್ತಾಯಿಸಿದ್ದಾರೆ.

