ಗಂಗಾರತಿ, ಜಲಸ್ಥಂಭನದೊಂದಿಗೆ ಉಡುಪಿ- ಉಚ್ಚಿಲ ದಸರಾ ವೈಭವಕ್ಕೆ ತೆರೆ


ಉಡುಪಿ: ಗಂಗಾರತಿ, ಪುಷ್ಪವೃಷ್ಟಿ ಹಾಗೂ ಜಲಸ್ಥಂಭನದೊಂದಿಗೆ ಉಚ್ಚಿಲ ದಸರಾ ಮಹೋತ್ಸವ ಸಂಭ್ರಮದಿಂದ ಸಂಪನ್ನಗೊಂಡಿತು.
ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಹತ್ತು ದಿನಗಳ ಕಾಲ ನವದುರ್ಗೆಯರನ್ನು ಆರಾಧಿಸಿದ ಬಳಿಕ, ಹನ್ನೊಂದನೇ ದಿನ ಶಾರದಾ ಮಾತೆ ಸಹಿತ ನವದುರ್ಗೆಯರ ವಿಗ್ರಹಗಳನ್ನು ದೇವಾಲಯದ ಮುಖ್ಯದ್ವಾರದ ಮೂಲಕ ಹೊರತರಲಾಯಿತು. ಈ ಸಂದರ್ಭದಲ್ಲಿ ದಸರಾ ರೂವಾರಿ ನಾಡೋಜ ಡಾ. ಜಿ. ಶಂಕರ್ ಸೇರಿದಂತೆ ಗಣ್ಯರು ನವದುರ್ಗೆಯರಿಗೆ ಪುಷ್ಪನಮನ ಸಲ್ಲಿಸಿದರು. ಡ್ರೋನ್ ಮೂಲಕ ಪುಷ್ಪವೃಷ್ಟಿ ಸುರಿಸುವ ಮೂಲಕ ಭಕ್ತರ ಸಂಭ್ರಮವನ್ನು ಇಮ್ಮಡಿಗೊಳಿಸಲಾಯಿತು.


ಬಳಿಕ ನವದುರ್ಗೆಯರ ವಿಗ್ರಹಗಳನ್ನು ಭವ್ಯ ಶೋಭಾಯಾತ್ರೆಯ ಮೂಲಕ ಕಾಪು ಕಡಲತೀರಕ್ಕೆ ಕೊಂಡೊಯ್ಯಲಾಯಿತು. ಶೋಭಾಯಾತ್ರೆಯಲ್ಲಿ ಶಾರದೆಯ ವೇಷಧರಿಸಿದ ಮಕ್ಕಳು ಹಾಗೂ ಯುವತಿಯರು ಗಮನ ಸೆಳೆದರು. ವಿವಿಧ ಕಲಾತಂಡಗಳು ಮತ್ತು ವೈವಿಧ್ಯಮಯ ಸ್ತಬ್ಧಚಿತ್ರಗಳು ಮೆರವಣಿಗೆಗೆ ಮೆರುಗು ನೀಡಿದವು. ಡಿಜೆ ಸಂಗೀತದ ಅಬ್ಬರಕ್ಕೆ ಮಹಿಳೆಯರು ಹಾಗೂ ಯುವತಿಯರು ಹೆಜ್ಜೆ ಹಾಕಿ ಸಂಭ್ರಮಿಸಿದರು.


ಕಾಪು ಕಡಲತೀರದಲ್ಲಿ ನಿರ್ಮಿಸಲಾಗಿದ್ದ ಬೃಹತ್ ವೇದಿಕೆಯಲ್ಲಿ ನವದುರ್ಗೆಯರ ವಿಗ್ರಹಗಳನ್ನು ಪ್ರತಿಷ್ಠಾಪಿಸಿ, ಕಾಶಿಯ ಪಂಡಿತರು ವಿಧಿವಿಧಾನಗಳೊಂದಿಗೆ ಗಂಗಾರತಿ ನೆರವೇರಿಸಿದರು. ಬಳಿಕ ಕಡಲತೀರದಲ್ಲಿ ನವದುರ್ಗೆಯರಿಗೆ ಪುಷ್ಪವೃಷ್ಟಿ ಸಲ್ಲಿಸಿ, ಸಮುದ್ರದ ಬೃಹತ್ ಅಲೆಗಳ ನಡುವೆ ಏಕಕಾಲದಲ್ಲಿ ಜಲಸ್ಥಂಭನ ಪ್ರಕ್ರಿಯೆ ನಡೆಯಿತು.
ಈ ಅಪೂರ್ವ ಧಾರ್ಮಿಕ ಕ್ಷಣಕ್ಕೆ ಸಾಕ್ಷಿಯಾದ ಭಕ್ತರು ಭಕ್ತಿಭಾವದಿಂದ ದೇವಿಯರಿಗೆ ವಿದಾಯ ಕೋರಿದರು. ಸಮುದ್ರದ ನಡುವೆ ಬೋಟುಗಳ ಮೂಲಕ ಪ್ರದರ್ಶಿಸಲಾದ ವಿದ್ಯುತ್ ದೀಪಗಳ ಬೆಳಕಿನ ಚಿತ್ತಾರ ಹಾಗೂ ಆಕರ್ಷಕ ಸುಡುಮದ್ದು ಪ್ರದರ್ಶನ ಉತ್ಸವದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿತು. ಧಾರ್ಮಿಕ ವಿಧಿವಿಧಾನ, ಭವ್ಯ ಶೋಭಾಯಾತ್ರೆ ಹಾಗೂ ಮನಮೋಹಕ ಬೆಳಕಿನ ಪ್ರದರ್ಶನದೊಂದಿಗೆ ಉಚ್ಚಿಲ ದಸರಾ ಮಹೋತ್ಸವಕ್ಕೆ ತೆರೆ ಬಿತ್ತು.

SHARE
Loading spinner

Leave a Reply

Your email address will not be published. Required fields are marked *

error: Content is protected !!