
ಸಮಾಜ ಸೇವಕ ಹಾಗೂ ಉದ್ಯಮಿ ಜಾನ್ ವಿಲ್ಸನ್ ಲೋಬೊ ಅವರ ಲೋಬೊ ಪ್ರೊಡಕ್ಷನ್ಸ್ ಮತ್ತು ಸೋನುಲವಿ ಸಿನೆ ಕ್ರಿಯೇಷನ್ಸ್ ಸಹಯೋಗದಲ್ಲಿ ನಿರ್ಮಾಣವಾಗಲಿರುವ ನೂತನ ತುಳು ಸಿನಿಮಾದ ಶೀರ್ಷಿಕೆ ಅನಾವರಣ ಕಾರ್ಯಕ್ರಮ ಅ. 26ರಂದು ಸಂಜೆ ಮಂಗಳೂರಿನ ಬಲ್ಮಠದ ಡಾನ್ ಬಾಸ್ಕೋ ಹಾಲ್ನಲ್ಲಿ ನಡೆಯಲಿದೆ.

ಈ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಚಿತ್ರದ ನಿರ್ಮಾಣ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ಪತ್ರಕರ್ತ ನರೇಂದ್ರ ಕೆರೆಕಾಡು, ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಶೀರ್ಷಿಕೆ ಅನಾವರಣಗೊಳಿಸಲಿದ್ದು, ಧರ್ಮಗುರು ರೆ. ಫಾ. ಆಂಡೋ ಲಿಯೊ ಡಿ’ಸೋಜಾ ಆಶೀರ್ವಚನ ನೀಡಲಿದ್ದಾರೆ. ಲೋಬೊ ಪ್ರೊಡಕ್ಷನ್ಸ್ ಮಾಲಕ ಜಾನ್ ವಿಲ್ಸನ್ ಲೋಬೊ ಅಧ್ಯಕ್ಷತೆ ವಹಿಸಲಿದ್ದು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಶೂಟಿಂಗ್ ಕ್ಲಾಪ್ ಹಸ್ತಾಂತರಿಸಲಿದ್ದಾರೆ. ಪತ್ರಕರ್ತ ವಾಲ್ಟರ್ ಡಿಸೋಜಾ ನಂದಳಿಕೆ ಕ್ಯಾಮರಾ ಚಾಲನೆ ನೀಡಲಿದ್ದಾರೆ. ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಜಾನ್ ವಿಲ್ಸನ್ ಲೋಬೊ ಅವರು ಈಗಾಗಲೇ ‘ವೇಳ್ ಡಿ’ ಎಂಬ ಕೊಂಕಣಿ ಸಿನಿಮಾವನ್ನು ನಿರ್ಮಿಸುತ್ತಿದ್ದು, ಇದೀಗ ತಮ್ಮದೇ ಬ್ಯಾನರ್ನಲ್ಲಿ ಮೊದಲ ಬಾರಿಗೆ ತುಳು ಸಿನಿಮಾ ನಿರ್ಮಿಸಲು ಮುಂದಾಗಿದ್ದಾರೆ. ಈ ಮೂಲಕ ತುಳುನಾಡಿನ ಕಲಾವಿದರು ಹಾಗೂ ತಂತ್ರಜ್ಞರಿಗೆ ಅವಕಾಶ ಕಲ್ಪಿಸುವ ಉದ್ದೇಶ ಹೊಂದಿದ್ದಾರೆ. ಕಥೆಗೆ ಪೂರಕವಾಗಿ ಸೀಮಿತ ಬಜೆಟ್ನಲ್ಲಿ ಸಿನಿಮಾ ನಿರ್ಮಾಣಗೊಳ್ಳಲಿದ್ದು, 2027ರಲ್ಲಿ ತೆರೆಕಾಣಲಿದೆ ಎಂದು ಹೇಳಿದರು.

ಚಿತ್ರದ ನಿರ್ದೇಶಕ ದೇವಿಪ್ರಕಾಶ್ ಎಸ್. ಮಾತನಾಡಿ, ಗ್ರಾಮೀಣ ಭಾಗದ ತುಳು ರಂಗಭೂಮಿಯ ಆಗುಹೋಗುಗಳನ್ನು ಆಧರಿಸಿ ಕಥೆ ರೂಪಿಸಲಾಗಿದೆ. ನವಿರಾದ ಹಾಸ್ಯದೊಂದಿಗೆ ಉತ್ತಮ ಸಂದೇಶವನ್ನು ನೀಡುವ ಈ ಸಿನಿಮಾ ಕುಟುಂಬ ಸಮೇತ ವೀಕ್ಷಿಸಬಹುದಾದ ರೀತಿಯಲ್ಲಿ ಮೂಡಿಬರಲಿದೆ ಎಂದರು.
ಸಹನಿರ್ದೇಶಕ ರೋಶನ್ ನೆಲ್ಲಿಗುಡ್ಡೆ, ಕಲಾವಿದ ಸುನಿಲ್ ಡಿಸೋಜಾ ನೆಲ್ಲಿಗುಡ್ಡೆ ಹಾಗೂ ಪ್ರಚಾರ ಸಂಯೋಜಕ ಆರೀಫ್ ಯು.ಆರ್. ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

