
ಮಂಗಳೂರು: ಭಾರತ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಆಶ್ರಯದಲ್ಲಿ ಮೈ ಭಾರತ್–ದಕ್ಷಿಣ ಕನ್ನಡ ಸಂಸ್ಥೆಯು ಮಂಗಳೂರು ವಿಶ್ವವಿದ್ಯಾನಿಲಯ, ಬೆಸೆಂಟ್ ಮಹಿಳಾ ಕಾಲೇಜು ಹಾಗೂ ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ಸಹಯೋಗದಲ್ಲಿ ಜಿಲ್ಲಾ ಮಟ್ಟದ ‘ವಿಕಸಿತ ಭಾರತ ಯುವ ಸಂಸತ್ 2027’ ಕಾರ್ಯಕ್ರಮವನ್ನು ನವೆಂಬರ್ 7ರಂದು ಮಂಗಳೂರಿನ ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ಆಯೋಜಿಸಲಿದೆ.

ಯುವಜನರಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಳೆಸುವುದು ಹಾಗೂ ರಾಷ್ಟ್ರೀಯ ಮಹತ್ವದ ವಿಷಯಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ವೇದಿಕೆ ಕಲ್ಪಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಸ್ಪರ್ಧೆಯ ವಿಷಯವಾಗಿ ‘ಒಂದು ದೇಶ, ಒಂದು ಚುನಾವಣೆ’ ಆಯ್ಕೆ ಮಾಡಲಾಗಿದ್ದು, ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಮಾತನಾಡಲು ಅವಕಾಶವಿದೆ.

ಸ್ಪರ್ಧೆಯಲ್ಲಿ ಭಾಗವಹಿಸಲು 2026ರ ಆಗಸ್ಟ್ 17ರ ವೇಳೆಗೆ 18ರಿಂದ 25 ವರ್ಷದೊಳಗಿನ ಯುವಕ-ಯುವತಿಯರು ಅರ್ಹರಾಗಿರುತ್ತಾರೆ. ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಅತ್ಯುತ್ತಮ ವಾಗ್ಮಿಗಳಾಗಿ ಆಯ್ಕೆಯಾಗುವವರಿಗೆ ನವದೆಹಲಿಯ ಸಂಸತ್ ಭವನದಲ್ಲಿ ನಡೆಯುವ ರಾಷ್ಟ್ರಮಟ್ಟದ ಯುವ ಸಂಸತ್ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ದೊರೆಯಲಿದೆ.

ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಆಸಕ್ತ ದಕ್ಷಿಣ ಕನ್ನಡ ಜಿಲ್ಲೆಯ ಯುವಜನರು ಪೋಸ್ಟರ್ನಲ್ಲಿರುವ ಅಧಿಕೃತ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಅಥವಾ ಮೈ ಭಾರತ್ (MY Bharat) ಪೋರ್ಟಲ್ನಲ್ಲಿ ಆನ್ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಕಾರ್ಯಕ್ರಮವು ನವೆಂಬರ್ 7ರಂದು ಬೆಳಗ್ಗೆ 9.30ಕ್ಕೆ ಆರಂಭವಾಗಲಿದೆ.
ಹೆಚ್ಚಿನ ಮಾಹಿತಿಗಾಗಿ 9961332968 ಅಥವಾ 0824-2422264 ಸಂಪರ್ಕಿಸುವಂತೆ ಆಯೋಜಕರು ತಿಳಿಸಿದ್ದಾರೆ

