ತಿಷ್ಠಿತ ಪ್ರಿನ್ಸೆಸ್ ಆಫ್ ಅಸ್ಟೂರಿಯಾಸ್ ಪ್ರಶಸ್ತಿ ಸ್ವೀಕರಿಸಿದ ಲಿಯೋನೆಲ್ ಮೆಸ್ಸಿ; ಈ ಗೌರವ ಪಡೆದ ಮೊದಲ ಫುಟ್ಬಾಲ್ ಆಟಗಾರ ಎಂಬ ಹೆಗ್ಗಳಿಕೆ

ಒವಿಯೆಡೊ (ಸ್ಪೇನ್): ಅರ್ಜೆಂಟೀನಾದ ದಿಗ್ಗಜ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಅವರು ಸ್ಪೇನ್‌ನ ಪ್ರತಿಷ್ಠಿತ ‘ಪ್ರಿನ್ಸೆಸ್ ಆಫ್ ಅಸ್ಟೂರಿಯಾಸ್’ ಪ್ರಶಸ್ತಿಯನ್ನು ವೈಯಕ್ತಿಕವಾಗಿ ಪಡೆದ ಮೊದಲ ಫುಟ್ಬಾಲ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಉತ್ತರ ಸ್ಪೇನ್‌ನ ಒವಿಯೆಡೊ ನಗರದಲ್ಲಿ ಶುಕ್ರವಾರ ನಡೆದ ಅದ್ಧೂರಿ ಸಮಾರಂಭದಲ್ಲಿ ಮೆಸ್ಸಿ 2026ನೇ ಸಾಲಿನ ಪ್ರಶಸ್ತಿಯನ್ನು ಸ್ವೀಕರಿಸಿದರು. ಕ್ಯಾಂಪೊಅಮೊರ್ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ರಾಜಕುಮಾರಿ ಲಿಯೋನರ್ ಅವರು ಮೆಸ್ಸಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಸ್ಪೇನ್‌ನ ರಾಜ ಆರನೇ ಫೆಲಿಪೆ ಹಾಗೂ ರಾಣಿ ಲೆಟಿಸಿಯಾ ಕೂಡ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಫುಟ್ಬಾಲ್ ಕ್ಷೇತ್ರದಲ್ಲಿ ಮೆಸ್ಸಿ ಸಾಧಿಸಿರುವ ಅಸಾಧಾರಣ ಸಾಧನೆಗಳ ಜೊತೆಗೆ, ಅವರ ಸಮಾಜಮುಖಿ ಹಾಗೂ ದತ್ತಿ ಕಾರ್ಯಗಳನ್ನು ಪರಿಗಣಿಸಿ ಈ ಪ್ರತಿಷ್ಠಿತ ಗೌರವವನ್ನು ನೀಡಲಾಗಿದೆ.ಜೂನ್ 3ರಂದು ಪ್ರಶಸ್ತಿಯನ್ನು ಘೋಷಿಸಲಾಗಿತ್ತು. ಮೆಸ್ಸಿ ಅವರ ವಿನಯಶೀಲತೆ, ತಂಡದೊಂದಿಗೆ ಸಹಕಾರದಿಂದ ಆಡುವ ಮನೋಭಾವ, ಕ್ರೀಡಾಸ್ಫೂರ್ತಿ ಹಾಗೂ ನ್ಯಾಯಯುತ ಆಟದ ತತ್ವಗಳಿಗೆ ನೀಡಿರುವ ಮಹತ್ವವನ್ನು ಪ್ರಶಸ್ತಿ ಆಯ್ಕೆ ಸಮಿತಿ ವಿಶೇಷವಾಗಿ ಪರಿಗಣಿಸಿತ್ತು.

ವೈಯಕ್ತಿಕವಾಗಿ ಈ ಪ್ರಶಸ್ತಿಗೆ ಭಾಜನರಾದ ಮೊದಲ ಫುಟ್ಬಾಲ್ ಆಟಗಾರ ಮೆಸ್ಸಿಯಾಗಿದ್ದರೂ, ಈ ಹಿಂದೆ ಫುಟ್ಬಾಲ್ ಕ್ಷೇತ್ರದ ಹಲವು ಸಾಧಕರು ಈ ಗೌರವವನ್ನು ಪಡೆದಿದ್ದಾರೆ. ಮೆಸ್ಸಿ ಅವರ ಮಾಜಿ ಬಾರ್ಸಿಲೋನಾ ತಂಡದ ಸಹ ಆಟಗಾರ ಕ್ಸಾವಿ ಹೆರ್ನಾಂಡೆಸ್ ಹಾಗೂ ಸ್ಪೇನ್‌ನ ಖ್ಯಾತ ಗೋಲ್‌ಕೀಪರ್ ಇಕರ್ ಕ್ಯಾಸಿಲಾಸ್ ಅವರು 2012ರಲ್ಲಿ ಈ ಗೌರವಕ್ಕೆ ಪಾತ್ರರಾಗಿದ್ದರು.ಅದೇ ರೀತಿ, 2002ರಲ್ಲಿ ಐದನೇ ಬಾರಿಗೆ ಫಿಫಾ ವಿಶ್ವಕಪ್ ಗೆದ್ದ ಬ್ರೆಜಿಲ್ ರಾಷ್ಟ್ರೀಯ ಫುಟ್ಬಾಲ್ ತಂಡಕ್ಕೂ ಪ್ರಿನ್ಸೆಸ್ ಆಫ್ ಅಸ್ಟೂರಿಯಾಸ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.

ವಿಶ್ವ ಫುಟ್ಬಾಲ್‌ನಲ್ಲಿ ತಮ್ಮ ಅದ್ಭುತ ಪ್ರದರ್ಶನ ಮತ್ತು ಸಾಧನೆಗಳಿಂದ ಕೋಟ್ಯಂತರ ಅಭಿಮಾನಿಗಳ ಮನಗೆದ್ದಿರುವ ಮೆಸ್ಸಿ ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಮತ್ತೊಂದು ಮಹತ್ವದ ಗೌರವವಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!