ಕಾಸರಗೋಡು: ಕರ್ನಾಟಕ ಸಮಿತಿಯ ಆಶ್ರಯದಲ್ಲಿ ಕಾಸರಗೋಡಿನ ಬೀರಂತಬೈಲಿನ ಕನ್ನಡ ಅಧ್ಯಾಪಕ ಭವನದಲ್ಲಿ ಅಡ್ವಕೇಟ್ ಮುರಳೀಧರ ಬಳ್ಳಕ್ಕೂರಾಯರ ಅಧ್ಯಕ್ಷತೆಯಲ್ಲಿ ಕನ್ನಡಿಗರ ಸಭೆ ನಡೆಯಿತು.

ಸಭೆಯಲ್ಲಿ ಕಾಸರಗೋಡು ಜಿಲ್ಲೆಯ ಕನ್ನಡಿಗರು ಎದುರಿಸುತ್ತಿರುವ ಭಾಷಾ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಆಡಳಿತಾತ್ಮಕ ಸಮಸ್ಯೆಗಳ ಕುರಿತು ಸುದೀರ್ಘ ಚರ್ಚೆ ನಡೆಯಿತು. ಕನ್ನಡಿಗರ ಹಕ್ಕುಗಳ ರಕ್ಷಣೆ ಮತ್ತು ಕನ್ನಡ ಭಾಷೆಯ ಉಳಿವು ಹಾಗೂ ಬೆಳವಣಿಗೆಗಾಗಿ ಎಲ್ಲ ಕನ್ನಡಪರ ಸಂಘಟನೆಗಳು ಒಂದೇ ವೇದಿಕೆಯಲ್ಲಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕೆಂದು ಸಭೆ ಅಭಿಪ್ರಾಯಪಟ್ಟಿತು. ಕರ್ನಾಟಕ ಸಮಿತಿಯನ್ನು ತಳಮಟ್ಟದಿಂದ ಬಲಪಡಿಸಿ, ಸಂಘಟಿತ ಹೋರಾಟದ ಮೂಲಕ ಕನ್ನಡಿಗರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ನಿರ್ಧರಿಸಲಾಯಿತು.

ಕನ್ನಡಿಗರ ಸಮಸ್ಯೆಗಳ ಕುರಿತು ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ನವೆಂಬರ್ 1ರಂದು ಕಾಸರಗೋಡಿನ ಹೊಸ ಬಸ್ ನಿಲ್ದಾಣದ ಪರಿಸರದಲ್ಲಿ ಕನ್ನಡ ಜಾಗೃತಿ ಸಮಾವೇಶ ನಡೆಸಲು ಸಭೆ ತೀರ್ಮಾನಿಸಿತು. ಅಲ್ಲದೆ, ಇಡೀ ನವೆಂಬರ್ ತಿಂಗಳನ್ನು ಕನ್ನಡ ಜಾಗೃತಿ ತಿಂಗಳಾಗಿ ಆಚರಿಸುವುದರೊಂದಿಗೆ ಜಿಲ್ಲೆಯಾದ್ಯಂತ ಕನ್ನಡ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಯಿತು.
ಕಾಸರಗೋಡಿನ ಕನ್ನಡಿಗರ ಭಾಷಾ ಹಕ್ಕುಗಳು, ಕನ್ನಡ ಮಾಧ್ಯಮದ ಶೈಕ್ಷಣಿಕ ಹಿತಾಸಕ್ತಿಗಳು ಹಾಗೂ ಕನ್ನಡ ಭಾಷೆಯ ಬಳಕೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ನಿರಂತರವಾಗಿ ಹೋರಾಟ ನಡೆಸುವ ಅಗತ್ಯವನ್ನು ಸಭೆಯಲ್ಲಿ ಒತ್ತಿಹೇಳಲಾಯಿತು.

ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ, ಕೇರಳ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಕೇಂದ್ರ ಸಮಿತಿ ಅಧ್ಯಕ್ಷ ಸುಕೇಶ್, ಗಮಕ ಸಾಹಿತ್ಯ ಪರಿಷತ್ತಿನ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಶಂಕರನಾರಾಯಣ ಭಟ್, ಕನ್ನಡ ಹೋರಾಟ ಸಮಿತಿಯ ಸಂಚಾಲಕ ಭಾಸ್ಕರ, ಪತ್ರಕರ್ತರ ಕ್ಷೇಮಾಭಿವೃದ್ಧಿ ಸಮಿತಿಯ ಅಧ್ಯಕ್ಷ ರವಿ ನಾಯ್ಕಾಪ್, ವಿಶಾಲಾಕ್ಷ ಪುತ್ರಕಳ, ಪ್ರದೀಪ್ ಕುಮಾರ್ ಬೇಳ, ರಾಧಾಕೃಷ್ಣ ಉಳಿಯತ್ತಡ್ಕ, ಸತ್ಯನಾರಾಯಣ ತಂತ್ರಿ, ಗುರುಪ್ರಸಾದ್ ಕೋಟೆಕಣಿ, ಶ್ರೀಕಾಂತ್ ಕಾಸರಗೋಡು, ಜಗದೀಶ ಕೂಡ್ಲು, ಮಹೇಶ್ವರಿ, ದಿವ್ಯಶ್ರೀ ಡಿ., ವಿನೋದ್ ರಾಜ್, ಸುಂದರ ಬಾರಡ್ಕ, ಶಿವರಾಮ ಕಾಸರಗೋಡು ಸೇರಿದಂತೆ ಹಲವರು ಭಾಗವಹಿಸಿದರು.
ಕನ್ನಡಿಗರ ಹಕ್ಕುಗಳ ರಕ್ಷಣೆಗಾಗಿ ಸಂಘಟಿತ ಹೋರಾಟವನ್ನು ಬಲಪಡಿಸಿ, ಕನ್ನಡ ಜಾಗೃತಿ ಅಭಿಯಾನದ ಮೂಲಕ ಜನಾಂದೋಲನ ರೂಪಿಸುವ ಸಂಕಲ್ಪದೊಂದಿಗೆ ಸಭೆ ಮುಕ್ತಾಯಗೊಂಡಿತು.

