ಉಚಿತ ಥೆರಪಿ ಸೇವೆಗೆ ಮತ್ತೊಂದು ಗೌರವ: ಪ್ರಭಾಕರ್ ಸಾಲಿಯಾನ್‌ಗೆ ಬಾಹುಬಲಿ ಪ್ರಶಸ್ತಿ

ಪುತ್ತೂರು: ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರಗಳ ಮೂಲಕ ಸಾವಿರಾರು ಜನರಿಗೆ ಆರೋಗ್ಯ ಸೇವೆ ಒದಗಿಸುತ್ತಿರುವ ಪುತ್ತೂರಿನ ಕಂಪಾನಿಯೋ ನೆಮ್ಮದಿ ವೆಲ್ಲೆಸ್ ಸೆಂಟರ್‌ನ ಮುಖ್ಯಸ್ಥ ಕೆ. ಪ್ರಭಾಕರ್ ಸಾಲಿಯಾನ್ ಅವರು ಸತತ ಮೂರನೇ ಬಾರಿಗೆ ಪ್ರತಿಷ್ಠಿತ ‘ಬಾಹುಬಲಿ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ.

ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಆರು ರಾಜ್ಯಗಳ ವ್ಯಾಪ್ತಿಯಲ್ಲಿ ಕಂಪಾನಿಯೋ ಸಂಸ್ಥೆಯ ವತಿಯಿಂದ ನೀಡಲಾಗುವ ಈ ಪ್ರಶಸ್ತಿಯನ್ನು ಕುಂದಾಪುರದ ಟಿಂಟನ್ ರೆಸಾರ್ಟ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಯಿತು. ಸಂಸ್ಥೆಯ ಪ್ರಮುಖ ಪ್ರವರ್ತಕರಾದ ರತ್ನಾಕರ ಶೆಟ್ಟಿ, ಸೀತಾರಾಮ್ ಶೆಟ್ಟಿ, ಲತಾ ಹಾಗೂ ತಮಿಳುನಾಡಿನ ಗೌತಮ್ ಅವರು ಪ್ರಶಸ್ತಿ ನೀಡಿ ಗೌರವಿಸಿದರು.

ಕೆ. ಪ್ರಭಾಕರ್ ಸಾಲಿಯಾನ್ ಅವರು ಕಳೆದ ಮೂರು ವರ್ಷಗಳಲ್ಲಿ ಪುತ್ತೂರು, ಸುಳ್ಯ, ಬಂಟ್ವಾಳ, ಬೆಳ್ತಂಗಡಿ, ಕಡಬ ತಾಲೂಕುಗಳು ಹಾಗೂ ಕಾಸರಗೋಡಿನ ಕೆಲವು ಪ್ರದೇಶಗಳಲ್ಲಿ ಒಟ್ಟು 144 ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರಗಳನ್ನು ಆಯೋಜಿಸಿದ್ದಾರೆ. ಈ ಶಿಬಿರಗಳ ಮೂಲಕ ಸುಮಾರು 52 ಸಾವಿರ ಜನರಿಗೆ ಸೇವೆ ಒದಗಿಸಿದ್ದು, ಒಟ್ಟು 2.60 ಲಕ್ಷ ಉಚಿತ ಥೆರಪಿ ಸೇವೆಗಳನ್ನು ನೀಡಿದ್ದಾರೆ. ಪ್ರಸ್ತುತ ಕಾಸರಗೋಡಿನ ಉಪ್ಪಳದಲ್ಲಿ ಉಚಿತ ಥೆರಪಿ ಶಿಬಿರ ನಡೆಯುತ್ತಿದೆ.

ಪುತ್ತೂರಿನ ಬೊಳುವಾರು ಧ್ರುವ ಸಂಕೀರ್ಣದಲ್ಲಿ ‘ಕಂಪಾನಿಯೋ ನೆಮ್ಮದಿ ವೆಲ್ಲೆಸ್ ಸೆಂಟರ್’ ಹೆಸರಿನ ಸ್ವಂತ ಸಂಸ್ಥೆಯನ್ನು ನಡೆಸುತ್ತಿರುವ ಪ್ರಭಾಕರ್ ಸಾಲಿಯಾನ್ ಅವರು ಹಲವು ವರ್ಷಗಳಿಂದ ಆರೋಗ್ಯ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಸಾಮಾಜಿಕ ಹಾಗೂ ಸಂಘಟನಾ ಕ್ಷೇತ್ರದಲ್ಲಿಯೂ ಸಕ್ರಿಯರಾಗಿರುವ ಅವರು ಪುತ್ತೂರು ಬಿಲ್ಲವ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಯುವವಾಹಿನಿ ಪುತ್ತೂರು ಘಟಕದ ಅಧ್ಯಕ್ಷರಾಗಿ ಹಾಗೂ ನರಿಮೊಗರು ಗ್ರಾಮ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇತ್ತೀಚೆಗೆ ಯುವವಾಹಿನಿ ಮಂಗಳೂರು ಕೇಂದ್ರದ ವ್ಯಾಪ್ತಿಯ ವಿವಿಧ ಘಟಕಗಳ ನಡುವೆ ನಡೆದ ಅಂತರ್ ಘಟಕ ಜಾನಪದ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ ಡೆನ್ನನ’ ಕಾರ್ಯಕ್ರಮವು ಅವರ ಸಂಚಾಲಕತ್ವದಲ್ಲಿ ಯಶಸ್ವಿಯಾಗಿ ನಡೆದಿತ್ತು.

ನರಿಮೊಗರು ಮೂಲದ ಕೆ. ಪ್ರಭಾಕರ್ ಸಾಲಿಯಾನ್ ಅವರು ಕಳೆದ 18 ವರ್ಷಗಳಿಂದ ಕೋಡಿಂಬಾಡಿಯಲ್ಲಿ ಪತ್ನಿ ಹಾಗೂ ಪುತ್ರ, ಪುತ್ರಿಯೊಂದಿಗೆ ವಾಸವಾಗಿದ್ದಾರೆ.

ಉಚಿತ ಥೆರಪಿ ಶಿಬಿರಗಳ ಮೂಲಕ ನಿರಂತರವಾಗಿ ಜನಸೇವೆ ಸಲ್ಲಿಸುತ್ತಿರುವ ಅವರಿಗೆ ಸತತ ಮೂರನೇ ಬಾರಿ ಬಾಹುಬಲಿ ಪ್ರಶಸ್ತಿ ಲಭಿಸಿರುವುದು ಅವರ ಸೇವಾ ಕಾರ್ಯಕ್ಕೆ ಮತ್ತೊಂದು ಗೌರವವಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!