ಲಖನೌ: ಉತ್ತರ ಪ್ರದೇಶದ ಪೂರ್ವಾಂಚಲ್ ಎಕ್ಸ್ಪ್ರೆಸ್ವೇಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಬೆಂಗಾವಲು ಪಡೆಯ ವಾಹನಗಳು ಹಾಗೂ ಆಂಬ್ಯುಲೆನ್ಸ್ ನಡುವೆ ಸರಣಿ ಅಪಘಾತ ಸಂಭವಿಸಿದ್ದು, ಹಲವರು ಗಾಯಗೊಂಡಿದ್ದಾರೆ. ರಾಹುಲ್ ಗಾಂಧಿ ಅಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ.

ಸೋಮವಾರ ಬೆಳಗ್ಗೆ 10.15ರ ಸುಮಾರಿಗೆ ಎಕ್ಸ್ಪ್ರೆಸ್ವೇಯ 91ನೇ ಕಿ.ಮೀ. ಬಳಿ ಈ ಘಟನೆ ನಡೆದಿದೆ. ಬೆಂಗಾವಲು ಪಡೆಯ ಮುಂಭಾಗದಲ್ಲಿದ್ದ ಖಾಸಗಿ ವಾಹನ ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ ಹಿಂಬದಿಯ ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಾಯಾಳುಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಪದಾಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿ ಸೇರಿದ್ದಾರೆ.

2018ರಲ್ಲಿ ಬೆಂಗಳೂರಿನಲ್ಲಿ ಅಮಿತ್ ಶಾ ವಿರುದ್ಧ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದ ಮಾನನಷ್ಟ ಮೊಕದ್ದಮೆಯ ವಿಚಾರಣೆಗಾಗಿ ರಾಹುಲ್ ಗಾಂಧಿ ಸುಲ್ತಾನ್ಪುರ ನ್ಯಾಯಾಲಯಕ್ಕೆ ತೆರಳುತ್ತಿದ್ದರು. ಪ್ರಕರಣದ ತೀರ್ಪು ಅಕ್ಟೋಬರ್ 26ರಂದು ಪ್ರಕಟವಾಗುವ ನಿರೀಕ್ಷೆಯಿದೆ.

