ಮಂಗಳೂರು: ಸಮಾಜಸೇವಕ ಹಾಗೂ ಉದ್ಯಮಿ ಜಾನ್ ವಿಲ್ಸನ್ ಲೋಬೊ ಅವರ ಲೋಬೊ ಪ್ರೊಡಕ್ಷನ್ಸ್ ಮತ್ತು ಸೋನುಲವಿ ಸಿನೆ ಕ್ರಿಯೇಷನ್ಸ್ ಸಹಯೋಗದಲ್ಲಿ ನಿರ್ಮಾಣವಾಗಲಿರುವ ನೂತನ ತುಳು ಸಿನಿಮಾದ ಶೀರ್ಷಿಕೆ ಅನಾವರಣ ಕಾರ್ಯಕ್ರಮ ಇಂದು (ಅ.26) ಸಂಜೆ ಮಂಗಳೂರಿನ ಬಲ್ಮಠದ ಡಾನ್ ಬಾಸ್ಕೋ ಹಾಲ್ನಲ್ಲಿ ನಡೆಯಲಿದೆ.

ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಚಿತ್ರದ ಶೀರ್ಷಿಕೆ ಅನಾವರಣಗೊಳಿಸಲಿದ್ದು, ಧರ್ಮಗುರು ರೆ. ಫಾ. ಆಂಡೋ ಲಿಯೊ ಡಿ’ಸೋಜಾ ಆಶೀರ್ವಚನ ನೀಡಲಿದ್ದಾರೆ. ಲೋಬೊ ಪ್ರೊಡಕ್ಷನ್ಸ್ ಮಾಲಕ ಜಾನ್ ವಿಲ್ಸನ್ ಲೋಬೊ ಅಧ್ಯಕ್ಷತೆ ವಹಿಸಲಿದ್ದು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಶೂಟಿಂಗ್ ಕ್ಲಾಪ್ ಹಸ್ತಾಂತರಿಸಲಿದ್ದಾರೆ. ಪತ್ರಕರ್ತ ವಾಲ್ಟರ್ ಡಿಸೋಜಾ ನಂದಳಿಕೆ ಕ್ಯಾಮರಾ ಚಾಲನೆ ನೀಡಲಿದ್ದಾರೆ.

ಜಾನ್ ವಿಲ್ಸನ್ ಲೋಬೊ ಅವರು ಈಗಾಗಲೇ ‘ವೇಳ್ ಡಿ’ ಎಂಬ ಕೊಂಕಣಿ ಸಿನಿಮಾವನ್ನು ನಿರ್ಮಿಸುತ್ತಿದ್ದು, ತಮ್ಮ ಬ್ಯಾನರ್ನಡಿ ಮೊದಲ ಬಾರಿಗೆ ತುಳು ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ. ತುಳುನಾಡಿನ ಕಲಾವಿದರು ಮತ್ತು ತಂತ್ರಜ್ಞರಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಸೀಮಿತ ಬಜೆಟ್ನಲ್ಲಿ ಸಿನಿಮಾ ನಿರ್ಮಿಸಲಾಗುತ್ತಿದ್ದು, 2027ರಲ್ಲಿ ತೆರೆಗೆ ಬರಲಿದೆ.
ಚಿತ್ರದ ನಿರ್ದೇಶಕ ದೇವಿಪ್ರಕಾಶ್ ಎಸ್. ಅವರ ಪ್ರಕಾರ, ಗ್ರಾಮೀಣ ಭಾಗದ ತುಳು ರಂಗಭೂಮಿಯ ಆಗುಹೋಗುಗಳನ್ನು ಆಧರಿಸಿ ಕಥೆ ರೂಪಿಸಲಾಗಿದೆ. ನವಿರಾದ ಹಾಸ್ಯದೊಂದಿಗೆ ಉತ್ತಮ ಸಂದೇಶ ನೀಡುವ ಈ ಚಿತ್ರ ಕುಟುಂಬ ಸಮೇತ ವೀಕ್ಷಿಸಬಹುದಾದ ರೀತಿಯಲ್ಲಿ ಮೂಡಿಬರಲಿದೆ ಎಂದು ಚಿತ್ರದ ನಿರ್ಮಾಣ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ಪತ್ರಕರ್ತ ನರೇಂದ್ರ ಕೆರೆಕಾಡು ತಿಳಿಸಿದ್ದಾರೆ.

