ನ.1ರಿಂದ 30ರವರೆಗೆ ಬಿಜೆಪಿಯಿಂದ ‘ಲೋಕತಂತ್ರ ಬಚಾವೋ’ ಅಭಿಯಾನ: ಸಿ.ಟಿ. ರವಿ

ಮಂಗಳೂರು: ಪ್ರಜಾಪ್ರಭುತ್ವದ ರಕ್ಷಣೆ, ಅರಾಜಕತೆಯ ನಿವಾರಣೆ ಹಾಗೂ ಸಂವಿಧಾನದ ಮಹತ್ವದ ಕುರಿತು ಜನಜಾಗೃತಿ ಮೂಡಿಸುವ ಉದ್ದೇಶದಿಂದ ಭಾರತೀಯ ಜನತಾ ಪಕ್ಷದ ವತಿಯಿಂದ ನವೆಂಬರ್ 1ರಿಂದ 30ರವರೆಗೆ ದೇಶಾದ್ಯಂತ ‘ಲೋಕತಂತ್ರ ಬಚಾವೋ’ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ತಿಳಿಸಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿಯಾನದ ಅಂಗವಾಗಿ ರ್ಯಾಲಿ, ಪಾದಯಾತ್ರೆ, ವಿದ್ಯಾರ್ಥಿಗಳೊಂದಿಗೆ ಸಂವಾದ, ಪ್ರಬುದ್ಧರ ಗೋಷ್ಠಿ ಸೇರಿದಂತೆ ವಿವಿಧ ಜನಸಂಪರ್ಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಸಂವಿಧಾನಿಕ ಸಂಸ್ಥೆಗಳ ವಿರುದ್ಧ ನಡೆಯುತ್ತಿದೆ ಎನ್ನಲಾದ ಅಪಪ್ರಚಾರಕ್ಕೆ ತಿರುಗೇಟು ನೀಡುವುದು, ಸುಳ್ಳುಗಳ ಹಿಂದಿರುವ ಸತ್ಯವನ್ನು ಜನರಿಗೆ ತಿಳಿಸುವುದು ಹಾಗೂ ಪ್ರಜಾಪ್ರಭುತ್ವದ ಮೇಲೆ ಜನರ ವಿಶ್ವಾಸವನ್ನು ಬಲಪಡಿಸುವುದು ಅಭಿಯಾನದ ಉದ್ದೇಶವಾಗಿದೆ ಎಂದರು.

ನೇಪಾಳ, ಬಾಂಗ್ಲಾದೇಶ ಮತ್ತು ಶ್ರೀಲಂಕಾದಲ್ಲಿ ಅರಾಜಕತೆಯ ಮೂಲಕ ಚುನಾಯಿತ ಸರ್ಕಾರಗಳನ್ನು ಬದಲಾಯಿಸಿದ ಮಾದರಿಯ ಪ್ರಯತ್ನಗಳನ್ನು ಭಾರತದಲ್ಲಿಯೂ ನಡೆಸಲಾಗುತ್ತಿದೆ ಎಂದು ಆರೋಪಿಸಿದ ಅವರು, ಈ ಹಿಂದೆ ಅಸಹಿಷ್ಣುತೆ, ಪ್ರಶಸ್ತಿ ವಾಪಸಾತಿ, ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರೈತರ ಪ್ರತಿಭಟನೆಗಳ ವಿಚಾರದಲ್ಲಿ ಜನರಲ್ಲಿ ಭೀತಿ ಮೂಡಿಸುವ ಪ್ರಯತ್ನಗಳು ನಡೆದಿವೆ ಎಂದು ದೂರಿದರು. ರೈತರ ಹಿತದೃಷ್ಟಿಯಿಂದ ಜಾರಿಗೆ ತಂದಿದ್ದ ಕಾಯ್ದೆಗಳನ್ನು ರೈತವಿರೋಧಿ ಎಂದು ಬಿಂಬಿಸಲಾಯಿತು. ಕೆಂಪುಕೋಟೆಯಲ್ಲಿ ನಡೆದ ಘಟನೆ ಹಾಗೂ ಸಂಸತ್ತಿಗೆ ಮುತ್ತಿಗೆ ಹಾಕುವ ಪ್ರಯತ್ನಗಳು ಅರಾಜಕತೆ ಸೃಷ್ಟಿಸುವ ತಂತ್ರದ ಭಾಗವಾಗಿದ್ದವು ಎಂದು ಅವರು ಆರೋಪಿಸಿದರು.

ಚುನಾವಣೆಯಲ್ಲಿ ಸೋಲನುಭವಿಸಿದ ಬಳಿಕ ವಿದ್ಯುನ್ಮಾನ ಮತಯಂತ್ರಗಳ ಮೇಲೆ ಆರೋಪ ಮಾಡಲಾಯಿತು. ಈಗ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ವಿಚಾರದಲ್ಲಿಯೂ ಅಪಪ್ರಚಾರ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ವಾಸ್ತವಾಂಶಗಳನ್ನು ಜನರ ಮುಂದಿಡುವುದು ಹಾಗೂ ಸಂವಿಧಾನ ಮತ್ತು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಹೊಂದಿರುವವರನ್ನು ಜಾಗೃತಗೊಳಿಸುವುದು ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.

ಎಸ್‌ಐಆರ್‌ ಸಂವಿಧಾನಬದ್ಧ ಪ್ರಕ್ರಿಯೆ

ಎಸ್‌ಐಆರ್‌ ಪ್ರಕ್ರಿಯೆಯು ಇದೇ ಮೊದಲ ಬಾರಿಗೆ ನಡೆಯುತ್ತಿರುವುದಲ್ಲ. ದೇಶದಲ್ಲಿ ಈ ಹಿಂದೆ ಎಂಟು ಬಾರಿ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ ನಡೆದಿದ್ದು, ಈಗ ಒಂಬತ್ತನೇ ಬಾರಿ ನಡೆಯುತ್ತಿದೆ. ಸಂವಿಧಾನದ 324ನೇ ವಿಧಿ ಹಾಗೂ ಜನಪ್ರತಿನಿಧಿತ್ವ ಕಾಯ್ದೆ-1950ರ ಸೆಕ್ಷನ್‌ 21(3)ರ ಅಡಿಯಲ್ಲಿ ಈ ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ. ಜವಾಹರಲಾಲ್‌ ನೆಹರು ಅವರ ಕಾಲದಿಂದ ಆರಂಭಗೊಂಡ ಈ ಪ್ರಕ್ರಿಯೆ ಇಂದಿರಾ ಗಾಂಧಿ, ರಾಜೀವ್‌ ಗಾಂಧಿ ಹಾಗೂ ಅಟಲ್‌ ಬಿಹಾರಿ ವಾಜಪೇಯಿ ಅವರ ಆಡಳಿತಾವಧಿಯಲ್ಲಿಯೂ ನಡೆದಿತ್ತು ಎಂದು ಸಿ.ಟಿ. ರವಿ ವಿವರಿಸಿದರು.

ಮತದಾರರ ಪಟ್ಟಿಯಲ್ಲಿರುವ ಮೃತಪಟ್ಟವರು, ಸ್ಥಳಾಂತರಗೊಂಡವರು ಹಾಗೂ ಒಂದಕ್ಕಿಂತ ಹೆಚ್ಚು ಕಡೆ ಹೆಸರು ಹೊಂದಿರುವವರನ್ನು ಗುರುತಿಸಿ ಪಟ್ಟಿಯನ್ನು ಶುದ್ಧೀಕರಿಸುವುದು ಎಸ್‌ಐಆರ್‌ನ ಉದ್ದೇಶವಾಗಿದೆ. ಆದರೆ, ಈ ಪ್ರಕ್ರಿಯೆಯಲ್ಲಿ 13 ಕೋಟಿ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಕಾಂಗ್ರೆಸ್‌ ಸೇರಿದಂತೆ ಕೆಲವು ರಾಜಕೀಯ ಪಕ್ಷಗಳು ಆರೋಪಿಸುತ್ತಿವೆ. ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹಿಸುತ್ತಿವೆ. ಈ ಆರೋಪಗಳ ಹಿಂದಿರುವ ಸತ್ಯಾಸತ್ಯತೆ ಜನರಿಗೆ ತಿಳಿಯಬೇಕು ಎಂದು ಹೇಳಿದರು.

11 ಲಕ್ಷ ಬಿಎಲ್‌ಒಗಳ ಮೂಲಕ ವಿಕೇಂದ್ರೀಕೃತ ಕಾರ್ಯ

ಎಸ್‌ಐಆರ್‌ ಪ್ರಕ್ರಿಯೆ ಕೇಂದ್ರೀಕೃತವಾಗಿರದೆ ವಿಕೇಂದ್ರೀಕೃತವಾಗಿ ನಡೆಯುತ್ತದೆ. ದೇಶದಾದ್ಯಂತ ಸುಮಾರು 11 ಲಕ್ಷ ಬೂತ್‌ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆ ನೆರವಾಗಲು ವಿವಿಧ ರಾಜಕೀಯ ಪಕ್ಷಗಳ ಬೂತ್‌ ಮಟ್ಟದ ಏಜೆಂಟ್‌ಗಳಾದ ಬಿಎಲ್‌ಎ-2ಗಳಿಗೂ ಅವಕಾಶ ಕಲ್ಪಿಸಲಾಗಿದೆ. ಬಿಜೆಪಿ, ಕಾಂಗ್ರೆಸ್‌ ಸೇರಿದಂತೆ ವಿವಿಧ ಪಕ್ಷಗಳ ಸುಮಾರು 30 ಲಕ್ಷಕ್ಕೂ ಅಧಿಕ ಬಿಎಲ್‌ಎ-2ಗಳು ಈ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ ಎಂದು ತಿಳಿಸಿದರು.

ಬಿಎಲ್‌ಒಗಳ ಮೇಲ್ವಿಚಾರಣೆಗೆ ಎಇಆರ್‌ಒ, ಇಆರ್‌ಒ, ಡಿಇಆರ್‌ಒ ಹಾಗೂ ರಾಜ್ಯಮಟ್ಟದಲ್ಲಿ ಮುಖ್ಯ ಚುನಾವಣಾಧಿಕಾರಿಗಳ ವ್ಯವಸ್ಥೆಯಿದೆ. ಹೀಗಿರುವಾಗ ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸುವವರು, ಈ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಅಧಿಕಾರಿಗಳು ಹಾಗೂ ವ್ಯವಸ್ಥೆಯ ಹೊಣೆಗಾರಿಕೆಯ ಕುರಿತು ಸ್ಪಷ್ಟನೆ ನೀಡಬೇಕು. ಮುಖ್ಯ ಚುನಾವಣಾ ಆಯುಕ್ತರು ಮಾತ್ರವೇ ಈ ಸಂಪೂರ್ಣ ಪ್ರಕ್ರಿಯೆಯನ್ನು ನಿರ್ವಹಿಸುವುದಿಲ್ಲ ಎಂದು ಅವರು ಹೇಳಿದರು.

ಕರ್ನಾಟಕದಲ್ಲಿ 1.07 ಕೋಟಿ ಹೆಸರುಗಳು ಎಎಸ್‌ಡಿಡಿ ವರ್ಗಕ್ಕೆ

ಕರ್ನಾಟಕದ ಅಂಕಿಅಂಶಗಳನ್ನು ಉಲ್ಲೇಖಿಸಿದ ಸಿ.ಟಿ. ರವಿ, ಎಸ್‌ಐಆರ್‌ಗೂ ಮುನ್ನ ರಾಜ್ಯದಲ್ಲಿ 5,54,32,314 ಮತದಾರರಿದ್ದರು ಎಂದು ತಿಳಿಸಿದರು. ಪರಿಷ್ಕರಣೆ ಸಂದರ್ಭದಲ್ಲಿ ಒಟ್ಟು 1,07,96,339 ಮತದಾರರನ್ನು ಎಎಸ್‌ಡಿಡಿ ವರ್ಗಕ್ಕೆ ಗುರುತಿಸಲಾಗಿದೆ ಎಂದು ಹೇಳಿದರು.

ಇದರಲ್ಲಿ ಮೂರು ಬಾರಿ ಭೇಟಿ ನೀಡಿದರೂ ಪತ್ತೆಯಾಗದ 15,17,042 ಮತದಾರರನ್ನು ‘ಗೈರುಹಾಜರಿ’ (Absent) ಎಂದು, ಸ್ಥಳಾಂತರಗೊಂಡ 65,45,849 ಮಂದಿಯನ್ನು ‘ಸ್ಥಳಾಂತರ’ (Shifted) ಎಂದು, ಮೃತಪಟ್ಟಿರುವ 16,39,864 ಮಂದಿಯನ್ನು ‘ಮೃತ’ (Dead) ಎಂದು ಹಾಗೂ 3,83,884 ಮಂದಿಯನ್ನು ‘ನಕಲಿ ಅಥವಾ ಪುನರಾವರ್ತಿತ ಹೆಸರುಗಳು’ (Duplicate) ಎಂದು ಗುರುತಿಸಲಾಗಿದೆ ಎಂದು ವಿವರಿಸಿದರು.

ಮತದಾರರಿಗೆ ಗಣತಿ ನಮೂನೆಗಳನ್ನು ನೀಡಿ ಮಾಹಿತಿ ಸಂಗ್ರಹಿಸುವುದು, ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸುವುದು ಹಾಗೂ ಆಕ್ಷೇಪಣೆಗಳನ್ನು ಸ್ವೀಕರಿಸುವುದು ಸೇರಿದಂತೆ ನಿಗದಿತ ಹಂತಗಳಲ್ಲಿ ಪ್ರಕ್ರಿಯೆ ನಡೆಯುತ್ತದೆ. ಈ ಎಲ್ಲ ಹಂತಗಳನ್ನು ಪರಿಗಣಿಸದೆ ಮತದಾರರನ್ನು ಅನ್ಯಾಯವಾಗಿ ಕೈಬಿಡಲಾಗಿದೆ ಎಂದು ಆರೋಪಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

ಕಾಂಗ್ರೆಸ್‌ ಸರ್ಕಾರ ತನ್ನ ಅಧಿಕಾರಿಗಳನ್ನೇ ಪ್ರಶ್ನಿಸುತ್ತಿದೆಯೇ?

ರಾಜ್ಯದಲ್ಲಿ ಬಿಎಲ್‌ಒಗಳಾಗಿ ಮುಖ್ಯವಾಗಿ ಶಿಕ್ಷಕರು ಹಾಗೂ ಮೇಲ್ವಿಚಾರಣಾ ಹಂತಗಳಲ್ಲಿ ಕಂದಾಯ ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಇವರೆಲ್ಲರೂ ರಾಜ್ಯ ಸರ್ಕಾರದ ಆಡಳಿತ ವ್ಯವಸ್ಥೆಯ ಭಾಗವಾಗಿದ್ದಾರೆ. ಹೀಗಾಗಿ, ಕರ್ನಾಟಕದಲ್ಲಿ 1.07 ಕೋಟಿ ಮತದಾರರನ್ನು ತಪ್ಪಾಗಿ ಗುರುತಿಸಲಾಗಿದೆ ಎಂಬುದು ಕಾಂಗ್ರೆಸ್‌ನ ಆರೋಪವಾಗಿದ್ದರೆ, ತನ್ನದೇ ಸರ್ಕಾರದ ಅಧಿಕಾರಿಗಳ ಕಾರ್ಯವೈಖರಿಯನ್ನು ಪ್ರಶ್ನಿಸುತ್ತಿದೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಸಿ.ಟಿ. ರವಿ ಆಗ್ರಹಿಸಿದರು.

ರಾಜ್ಯದಲ್ಲಿ ಸುಮಾರು 59 ಸಾವಿರ ಮತಗಟ್ಟೆಗಳಿದ್ದು, ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ತೊಡಗಿರುವ ಅಧಿಕಾರಿಗಳ ಜವಾಬ್ದಾರಿಯ ಬಗ್ಗೆಯೂ ಕಾಂಗ್ರೆಸ್‌ ಸ್ಪಷ್ಟನೆ ನೀಡಬೇಕು. ಎಸ್‌ಐಆರ್‌ ಪ್ರಕ್ರಿಯೆಯನ್ನು ರಾಜಕೀಯ ವಿವಾದವನ್ನಾಗಿಸುವ ಬದಲು ಅದರ ವಾಸ್ತವಾಂಶಗಳನ್ನು ಪರಿಶೀಲಿಸಬೇಕು. ಸಂವಿಧಾನಿಕ ವ್ಯವಸ್ಥೆಗಳ ಮೇಲಿನ ಜನರ ವಿಶ್ವಾಸವನ್ನು ಕುಗ್ಗಿಸುವ ಪ್ರಯತ್ನಗಳಿಗೆ ಅವಕಾಶ ನೀಡಬಾರದು ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ, ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರ್‌ ನವೀನ್‌ ಶೆಟ್ಟಿ, ದಕ್ಷಿಣ ಕನ್ನಡ ಸಂಸದ ಹಾಗೂ ಬಿಜೆಪಿ ರಾಜ್ಯ ಕಾರ್ಯದರ್ಶಿ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಹಾಗೂ ‘ಲೋಕತಂತ್ರ ಬಚಾವೋ’ ಅಭಿಯಾನದ ರಾಜ್ಯ ತಂಡದ ಪ್ರಮುಖ ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್‌, ವಿಧಾನ ಪರಿಷತ್‌ ಸದಸ್ಯ ಕಿಶೋರ್‌ ಕುಮಾರ್‌ ಬೊಟ್ಯಾಡಿ, ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಬಿಜೆಪಿ ವಿಭಾಗ ಪ್ರಮುಖ ಭಾರತೀಶ್‌, ಸಹಪ್ರಭಾರಿ ಜಯಂತ್‌ ಕೋಟ್ಯಾನ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್‌ ಆರ್‌., ಜಿಲ್ಲಾ ಕೋಶಾಧ್ಯಕ್ಷ ಸಂಜಯ್‌ ಪ್ರಭು ಹಾಗೂ ಮಾಧ್ಯಮ ಪ್ರಮುಖ ಮನೋಜ್‌ ಶೆಟ್ಟಿ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!