ಅ. 29ರಂದು ದಿವಂಗತ ಡಾ. ಸುರೇಶ್ ಸುರತ್ಕಲ್ ಸಂಸ್ಮರಣಾ ದಿನಾಚರಣೆ

ಮಂಗಳೂರು: ಕುಟುಂಬ ವೈದ್ಯರ ಸಂಘದ ವತಿಯಿಂದ ದಿವಂಗತ ಡಾ. ಸುರೇಶ್ ಸುರತ್ಕಲ್ ಅವರ ಸಂಸ್ಮರಣಾ ದಿನಾಚರಣೆಯನ್ನು ಅ. 29ರಂದು ಸಂಜೆ 7 ಗಂಟೆಗೆ ನಗರದ ಓಷನ್ ಪರ್ಲ್ ಸಭಾಂಗಣದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಯೋಜಿಸಲಾಗಿದೆ ಎಂದು ಸಂಘದ ಖಜಾಂಚಿ ಡಾ. ಅಣ್ಣಯ್ಯ ಕುಲಾಲ್ ಉಳ್ತೂರು ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಿವಂಗತ ಡಾ. ಸುರೇಶ್ ಸುರತ್ಕಲ್ ಅವರು ತಮ್ಮ ವೈದ್ಯಕೀಯ ಸೇವೆಯ ಮೂಲಕ ಬಡವರು, ದೀನದಲಿತರು ಹಾಗೂ ಸಂಕಷ್ಟದಲ್ಲಿದ್ದ ಕುಟುಂಬಗಳಿಗೆ ನೆರವಾಗುವ ಮೂಲಕ ಸಮಾಜದಲ್ಲಿ ಉತ್ತಮ ವೈದ್ಯರೆಂದು ಗುರುತಿಸಿಕೊಂಡಿದ್ದರು. ತಮ್ಮ ಜೀವಿತಾವಧಿಯಲ್ಲಿ ಸಮಾಜಕ್ಕೆ ಅಮೂಲ್ಯ ಕೊಡುಗೆ ನೀಡಿದ ಅವರ ಸೇವೆಯನ್ನು ಸ್ಮರಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

ಮಂಗಳೂರಿನ ಒಮೇಗಾ ಆಸ್ಪತ್ರೆಯ ಆಡಳಿತ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದ ಡಾ. ಸುರೇಶ್ ಸುರತ್ಕಲ್ ಅವರು ಕೊನೆಯ ದಿನದವರೆಗೂ ಆಸ್ಪತ್ರೆ ಹಾಗೂ ಸಾರ್ವಜನಿಕರಿಗೆ ನಿರಂತರ ಸೇವೆ ಸಲ್ಲಿಸಿದ್ದರು. ಅವರ ವೈದ್ಯಕೀಯ ಸೇವೆ, ಸಾಮಾಜಿಕ ಕಳಕಳಿ ಮತ್ತು ರೋಗಿಗಳೊಂದಿಗಿನ ಆತ್ಮೀಯ ಒಡನಾಟದ ಕುರಿತು ಕಾರ್ಯಕ್ರಮದಲ್ಲಿ ವಿವರವಾಗಿ ಸ್ಮರಿಸಲಾಗುವುದು ಎಂದು ಡಾ. ಮುಕುಂದ್ ತಿಳಿಸಿದರು.

ಕಾರ್ಯಕ್ರಮದಲ್ಲಿ ನಿಟ್ಟೆ ವಿಶ್ವವಿದ್ಯಾಲಯದ ಪ್ರೊ-ಚಾನ್ಸಲರ್ ಹಾಗೂ ತೇಜಸ್ವಿನಿ ಆಸ್ಪತ್ರೆಯ ಅಧ್ಯಕ್ಷರೂ ಆಗಿರುವ ಹಿರಿಯ ಕೀಲು ತಜ್ಞ ಡಾ. ಶಾಂತರಾಮ್ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಸಂಸ್ಮರಣಾ ಕಾರ್ಯಕ್ರಮದ ಅಂಗವಾಗಿ ಎರಡು ಬಾರಿ ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ರಮೇಶ್ ಚಂದ್ರ ಅವರಿಂದ ಸುಗಮ ಸಂಗೀತ ಮತ್ತು ಗೀತಗಾಯನ ನಡೆಯಲಿದೆ. ಸುರತ್ಕಲ್‌ನ ಶಿವಾನಿ ಮತ್ತು ತಂಡದವರಿಂದ ಭರತನಾಟ್ಯ ಪ್ರದರ್ಶನ ಆಯೋಜಿಸಲಾಗಿದೆ. ಸಂಜೆ 7 ಗಂಟೆಗೆ ಆರಂಭವಾಗುವ ಸಾಂಸ್ಕೃತಿಕ ಕಾರ್ಯಕ್ರಮಗಳು ರಾತ್ರಿ 8.30ರವರೆಗೆ ನಡೆಯಲಿದ್ದು, ಬಳಿಕ ದಿವಂಗತ ಡಾ. ಸುರೇಶ್ ಸುರತ್ಕಲ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನ ಸಲ್ಲಿಸಲಾಗುವುದು ಎಂದು ಅವರ ಪುತ್ರ ತುಷಾರ್ ಸುರೇಶ್ ಸುರತ್ಕಲ್ ತಿಳಿಸಿದರು.

ತಮ್ಮ ತಂದೆಯ ವೈದ್ಯಕೀಯ ಸೇವೆಯನ್ನು ಸ್ಮರಿಸಿದ ತುಷಾರ್, ಸುಮಾರು 47 ವರ್ಷಗಳ ಕಾಲ ವೈದ್ಯರಾಗಿ ಸೇವೆ ಸಲ್ಲಿಸಿದ ಅವರು ರೋಗಿಗಳ ಚಿಕಿತ್ಸೆಯಲ್ಲಿ ಅಪಾರ ಕಾಳಜಿ ವಹಿಸುತ್ತಿದ್ದರು. ದಿನದ 24 ಗಂಟೆಯೂ ರೋಗಿಗಳಿಗೆ ದೂರವಾಣಿ ಮೂಲಕ ಲಭ್ಯರಿದ್ದು, ಅಗತ್ಯ ಸಂದರ್ಭದಲ್ಲಿ ಮಾರ್ಗದರ್ಶನ ನೀಡುತ್ತಿದ್ದರು. ಕೋವಿಡ್ ಅವಧಿಯಲ್ಲಿಯೂ ಸೋಂಕಿತರಿಗೆ ಚಿಕಿತ್ಸೆ ನೀಡುವ ಮೂಲಕ ಧೈರ್ಯ ತುಂಬಿದ್ದರು. ಅಪಾಯದ ನಡುವೆಯೂ ಅನೇಕ ರೋಗಿಗಳಿಗೆ ಆತ್ಮವಿಶ್ವಾಸ ಮೂಡಿಸಿ ಚಿಕಿತ್ಸೆ ನೀಡಿದ ಅವರ ಸೇವೆಯನ್ನು ಹತ್ತಿರದಿಂದ ಕಂಡಿದ್ದೇನೆ ಎಂದು ಹೇಳಿದರು.

ಕುಟುಂಬ ವೈದ್ಯರ ಸಂಘವು ಇನ್ನಷ್ಟು ಬೆಳವಣಿಗೆ ಹೊಂದಬೇಕು ಹಾಗೂ ಬಡ ಕುಟುಂಬಗಳಿಗೆ ಹೆಚ್ಚಿನ ನೆರವು ದೊರೆಯಬೇಕು ಎಂಬ ಆಶಯದಿಂದ ಈ ಸಂಸ್ಮರಣಾ ಕಾರ್ಯಕ್ರಮಕ್ಕೆ ಸಹಕಾರ ನೀಡುತ್ತಿರುವುದಾಗಿ ತಿಳಿಸಿದ ಅವರು, ತಮ್ಮ ತಂದೆಯ ಸೇವೆ ಮತ್ತು ವ್ಯಕ್ತಿತ್ವದ ಕುರಿತು ಕಾರ್ಯಕ್ರಮದಲ್ಲಿ ಇನ್ನಷ್ಟು ವಿಚಾರಗಳನ್ನು ಹಂಚಿಕೊಳ್ಳುವುದಾಗಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಪ್ರಮುಖರಾದ ಡಾ. ಜಿ.ಕೆ. ಭಟ್, ಡಾ. ಮುಕುಂದ್, ತುಷಾರ್ ಸುರೇಶ್ ಸುರತ್ಕಲ್, ಭಾರದ್ವಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!