ಅ.30ರಿಂದ ಕದ್ರಿ ಉದ್ಯಾನವನದಲ್ಲಿ ಸಿರಿ ಸಸ್ಯೋತ್ಸವ

ಮಂಗಳೂರು: ತೋಟಗಾರಿಕೆ ಇಲಾಖೆಯ ಅಂಗಸಂಸ್ಥೆ ಸಿರಿ ತೋಟಗಾರಿಕಾ ಸಂಘದ ವತಿಯಿಂದ ಅಕ್ಟೋಬರ್ 30ರಿಂದ ನವೆಂಬರ್ 1ರವರೆಗೆ ನಗರದ ಕದ್ರಿ ಉದ್ಯಾನವನದಲ್ಲಿ ‘ಸಿರಿ ಸಸ್ಯೋತ್ಸವ–2026’ ಆಯೋಜಿಸಲಾಗಿದೆ ಎಂದು ತೋಟಗಾರಿಕೆ ಉಪನಿರ್ದೇಶಕರು ಹಾಗೂ ಸಂಘದ ಪದನಿಮಿತ್ತ ಕಾರ್ಯದರ್ಶಿ ಕೆ. ಪ್ರವೀಣ್ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಸ್ಯ ವೈವಿಧ್ಯ ಪರಿಚಯಿಸುವ ಉದ್ದೇಶದಿಂದ ಅಲಂಕಾರಿಕ, ಔಷಧೀಯ, ಅರಣ್ಯ ಹಾಗೂ ಅಪರೂಪದ ಸಸ್ಯಗಳು, ಬೋನ್ಸಾಯಿ ಮತ್ತು ಪುಷ್ಪ ವಿನ್ಯಾಸಗಳ ಪ್ರದರ್ಶನ ಏರ್ಪಡಿಸಲಾಗಿದೆ. 150ಕ್ಕೂ ಹೆಚ್ಚು ಔಷಧೀಯ ಸಸ್ಯಗಳು, 40ಕ್ಕೂ ಹೆಚ್ಚು ತರಕಾರಿ ಬೀಜಗಳ ವಿಧಗಳು ಹಾಗೂ 25 ವಿಧದ ಅರಣ್ಯ ಸಸ್ಯಗಳ ಬೀಜಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಸುಮಾರು 70 ಮಳಿಗೆಗಳು ಇರಲಿದ್ದು, ₹5ರಂತೆ ತರಕಾರಿ ಗಿಡಗಳನ್ನು ಮಾರಾಟ ಮಾಡಲು 20 ಸಾವಿರ ಗಿಡಗಳನ್ನು ಸಿದ್ಧಪಡಿಸಲಾಗಿದೆ ಎಂದರು.

ಅಕ್ಟೋಬರ್ 30ರಂದು ಬೆಳಗ್ಗೆ 11ಕ್ಕೆ ಕಾರ್ಯಕ್ರಮ ಉದ್ಘಾಟನೆಯಾಗಲಿದ್ದು, ಅಂದು ಮಧ್ಯಾಹ್ನ ಮಹಿಳೆಯರಿಗೆ ಇಕೆಬಾನ ಮತ್ತು ಪುಷ್ಪ ರಂಗೋಲಿ ಸ್ಪರ್ಧೆ ನಡೆಯಲಿದೆ. ಅಕ್ಟೋಬರ್ 31ರಂದು ತಾರಸಿ ಕೈತೋಟ ಮತ್ತು ಜೇನು ಕೃಷಿ ತರಬೇತಿ, ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಹಾಗೂ ನವೆಂಬರ್ 1ರಂದು ಕಸಿ ಕಟ್ಟುವ ತರಬೇತಿ ಆಯೋಜಿಸಲಾಗಿದೆ. ಬೆಳಗ್ಗೆ 9ರಿಂದ ರಾತ್ರಿ 8.30ರವರೆಗೆ ನಡೆಯುವ ಸಸ್ಯೋತ್ಸವಕ್ಕೆ ಉಚಿತ ಪ್ರವೇಶವಿದೆ.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಪ್ರಮುಖರಾದ ಹರಿಶ್ಚಂದ್ರ ಅಡ್ಕ, ಜಿ.ಕೆ. ಭಟ್, ಅಕ್ಷಯ್ ಸ್ವೀಕ್ವೆರಾ ಮತ್ತಿತರರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!