ಮಂಗಳೂರಿನಲ್ಲಿ ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮ್ಮೇಳನ

12 ದಿನ, 12 ಗಂಟೆ, 12 ನಿಮಿಷಗಳ ಸಮೂಹ ಗಾಯನದ ಮೂಲಕ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸುವ ಗುರಿ

ಮಂಗಳೂರು: ಕೊಂಕಣಿ ಭಾಷೆ, ಸಂಸ್ಕೃತಿ ಮತ್ತು ಸಂಗೀತದ ಶ್ರೀಮಂತ ಪರಂಪರೆಯನ್ನು ವಿಶ್ವಮಟ್ಟದಲ್ಲಿ ಪರಿಚಯಿಸುವ ಉದ್ದೇಶದಿಂದ ಮಂಗಳೂರಿನಲ್ಲಿ ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮ್ಮೇಳನ ಆಯೋಜಿಸಲಾಗಿದೆ ಎಂದು ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಜೆ. ಪಿಂಟೊ ತಿಳಿಸಿದರು.

ಅವರು ಖಾಸಗಿ ಹೋಟೆಲ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,ಕೊಂಕಣಿಯ ಪ್ರಮುಖ ಸಾಂಸ್ಕೃತಿಕ ಸಂಘಟನೆಯಾದ ಮಾಂಡ್ ಸೊಭಾಣ್ ತನ್ನ 40ನೇ ವರ್ಷದ ಸಂಭ್ರಮವಾದ ಮಾಣಿಕ್ಯೋತ್ಸವದ ಅಂಗವಾಗಿ ಈ ಮಹಾ ಸಮ್ಮೇಳನವನ್ನು ನವೆಂಬರ್ 3ರಿಂದ 15ರವರೆಗೆ ನಗರದ ಪುರಭವನದಲ್ಲಿ ಆಯೋಜಿಸಲಿದೆ.

ಕೊಂಕಣಿ ಸಂಗೀತಕ್ಕೆ ಅಪಾರ ಕೊಡುಗೆ ನೀಡಿದ ಮಾಂಡ್ ಸೊಭಾಣ್‌ನ ಗುರಿಕಾರ ದಿವಂಗತ ಎರಿಕ್ ಒಝೇರಿಯೊ ಅವರ ಗೌರವಾರ್ಥ ಈ ಸಮ್ಮೇಳನ ನಡೆಯಲಿದೆ.

ಗಿನ್ನೆಸ್ ವಿಶ್ವ ದಾಖಲೆಗೆ ಮಹತ್ವದ ಪ್ರಯತ್ನ

ಸಮ್ಮೇಳನದ ಪ್ರಮುಖ ಆಕರ್ಷಣೆಯಾಗಿ ‘ಕೊಂಕಣಿ ನಿರಂತರಿ – ಸಂಸಾರ್ ಸರಾಸರಿ’ ಎಂಬ ಹೆಸರಿನಲ್ಲಿ ಸತತ ಸಮೂಹ ಗಾಯನದ ಮೂಲಕ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಲು ಉದ್ದೇಶಿಸಲಾಗಿದೆ.

ನವೆಂಬರ್ 3ರಂದು ಬೆಳಿಗ್ಗೆ 6 ಗಂಟೆಗೆ ಆರಂಭವಾಗುವ ಗಾಯನವು 12 ದಿನ, 12 ಗಂಟೆ ಮತ್ತು 12 ನಿಮಿಷಗಳ ಕಾಲ ಮುಂದುವರಿಯಲಿದೆ. ಭಾರತ, ಆಸ್ಟ್ರೇಲಿಯಾ, ಕುವೈತ್, ಓಮನ್ ಮತ್ತು ಖತಾರ್ ಸೇರಿದಂತೆ ವಿವಿಧ ದೇಶಗಳ ಕೊಂಕಣಿ ಸಮುದಾಯದ ಗಾಯಕರು ಇದರಲ್ಲಿ ಭಾಗವಹಿಸಲಿದ್ದಾರೆ.

ಕ್ರೈಸ್ತ, ಹಿಂದೂ, ಮುಸ್ಲಿಂ ಸೇರಿದಂತೆ ವಿವಿಧ ಧರ್ಮಗಳು ಹಾಗೂ ಸಮುದಾಯಗಳ ಜನರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವುದು ಈ ಕಾರ್ಯಕ್ರಮದ ವಿಶೇಷತೆಯಾಗಿದೆ. ಒಟ್ಟು 300 ತಂಡಗಳ 6,789ಕ್ಕೂ ಹೆಚ್ಚು ಗಾಯಕರು, 250ಕ್ಕೂ ಅಧಿಕ ಸಂಗೀತ ಸಂಯೋಜಕರು ರಚಿಸಿರುವ 4,500ಕ್ಕೂ ಹೆಚ್ಚು ಕೊಂಕಣಿ ಹಾಡುಗಳನ್ನು ಪ್ರಸ್ತುತಪಡಿಸಲಿದ್ದಾರೆ. ಪ್ರತಿಯೊಬ್ಬ ಗಾಯಕನೂ ವಿಭಿನ್ನವಾಗಿ ಭಾಗವಹಿಸುವಂತೆ ಯೋಜನೆ ರೂಪಿಸಲಾಗಿದೆ. ಸಂಗೀತ ಗುರು ಜೊಯೆಲ್ ಪಿರೇರಾ ಪ್ರಧಾನ ಸಂಗೀತ ನಿರ್ದೇಶಕರಾಗಿದ್ದಾರೆ. ಗಿನ್ನೆಸ್ ದಾಖಲೆಗೆ ಸಂಬಂಧಿಸಿದ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಅಧಿಕೃತ ತೀರ್ಪುಗಾರರು ಭಾಗವಹಿಸಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.

12 ವಿಚಾರ ಸಂಕಿರಣಗಳು

ಸಂಗೀತ ಕ್ಷೇತ್ರದ ಶೈಕ್ಷಣಿಕ ಮತ್ತು ಸಂಶೋಧನಾ ಆಯಾಮಗಳಿಗೆ ಒತ್ತು ನೀಡುವ ನಿಟ್ಟಿನಲ್ಲಿ 12 ವಿಚಾರ ಸಂಕಿರಣಗಳನ್ನು ಆಯೋಜಿಸಲಾಗಿದೆ. ಕೊಂಕಣಿ ಭಕ್ತಿ ಸಂಗೀತ, ಜನಪದ ಸಂಗೀತ, ಬಾಯ್ಲಾ ಸಂಗೀತ, ರಂಗಭೂಮಿ ಮತ್ತು ಸಿನಿಮಾ ಸಂಗೀತ, ಸಂಗೀತದ ಆರೋಗ್ಯ ಸಂಬಂಧಿತ ಪ್ರಯೋಜನಗಳು, ಬೌದ್ಧಿಕ ಆಸ್ತಿ ಹಕ್ಕುಗಳು ಹಾಗೂ ಕೃತಕ ಬುದ್ಧಿಮತ್ತೆ ಮತ್ತು ಸಂಗೀತ ಸೇರಿದಂತೆ ವಿವಿಧ ವಿಷಯಗಳ ಕುರಿತು ತಜ್ಞರು ಪ್ರಬಂಧ ಮಂಡಿಸಲಿದ್ದಾರೆ.

12 ಹಿರಿಯ ಸಂಗೀತ ಸಾಧಕರಿಗೆ ಗೌರವ

ಕೊಂಕಣಿ ಸಂಗೀತ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ 12 ಹಿರಿಯ ಸಂಗೀತಗಾರರಿಗೆ ‘ವಿಶ್ವ ಕೊಂಕಣಿ ಸಂಗೀತ ಸಾಧನಾ ಪುರಸ್ಕಾರ’ ನೀಡಿ ಗೌರವಿಸಲಾಗುವುದು. ಇವರಲ್ಲಿ ಐವರಿಗೆ ಮರಣೋತ್ತರವಾಗಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಗೋವಾ, ಮಂಗಳೂರು, ಮುಂಬೈ, ಭಟ್ಕಳ, ದಕ್ಷಿಣ ಕನ್ನಡದ ವಿವಿಧ ಪ್ರದೇಶಗಳು ಸೇರಿದಂತೆ ಹಲವು ಭಾಗಗಳ ಸಂಗೀತ ಸಾಧಕರನ್ನು ಸನ್ಮಾನಿಸಲು ನಿರ್ಧರಿಸಲಾಗಿದೆ.

ಮಕ್ಕಳಿಗಾಗಿ ‘ಫುಲ್ ಫುಲೊತಾ’

10ರಿಂದ 16 ವರ್ಷದ ಮಕ್ಕಳನ್ನು ಕೊಂಕಣಿ ಸಂಗೀತದತ್ತ ಆಕರ್ಷಿಸುವ ಉದ್ದೇಶದಿಂದ ನವೆಂಬರ್ 13ರಂದು ‘ಫುಲ್ ಫುಲೊತಾ’ ಎಂಬ ವಿಶೇಷ ಸಂಗೀತ ಕಾರ್ಯಕ್ರಮ ನಡೆಯಲಿದೆ. ಪುರಭವನದ ಎದುರಿನ ರಾಜಾಜಿ ಪಾರ್ಕ್‌ನ ಬಯಲು ರಂಗಮಂದಿರದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ.

ಇದರೊಂದಿಗೆ ಕೊಂಕಣಿ ಸಂಗೀತದ ಇತಿಹಾಸ ಮತ್ತು ಸಾಧಕರ ಪರಿಚಯ ನೀಡುವ ವಸ್ತುಪ್ರದರ್ಶನ, ಹಿರಿಯ ಹಾಗೂ ಕಿರಿಯ ಸಂಗೀತಗಾರರ ಮಾಹಿತಿ ಒಳಗೊಂಡ ಕೀರ್ತಿ ಮಂದಿರ ಮತ್ತು ವಿವಿಧ ಕೊಂಕಣಿ ಸಮುದಾಯಗಳ ಸಾಂಪ್ರದಾಯಿಕ ಖಾದ್ಯಗಳ ಮಾರಾಟ ಮಳಿಗೆಗಳೂ ಸಮ್ಮೇಳನದ ಭಾಗವಾಗಿರಲಿವೆ.

ನವೆಂಬರ್ 15ರಂದು ಸಮಾರೋಪ

ನವೆಂಬರ್ 15ರಂದು ಸಂಜೆ 6.12ಕ್ಕೆ ಗಿನ್ನೆಸ್ ದಾಖಲೆಯ ಗಾಯನ ಮುಕ್ತಾಯಗೊಳ್ಳಲಿದ್ದು, ಬಳಿಕ ಸಮಾರೋಪ ಸಮಾರಂಭ ನಡೆಯಲಿದೆ. ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಮಾರೋಪದಲ್ಲಿ ಭಾಗವಹಿಸಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.

ಈ ಬೃಹತ್ ಕಾರ್ಯಕ್ರಮಕ್ಕೆ ಅಂದಾಜು ಮೂರು ಕೋಟಿ ರೂಪಾಯಿ ವೆಚ್ಚವಾಗಲಿದೆ. ಸಾವಿರಾರು ಹಾಡುಗಳ ಸಂಗ್ರಹ ಮತ್ತು ದಾಖಲೀಕರಣ, 300 ತಂಡಗಳ ರಚನೆ, ಸಂಗೀತಾಭ್ಯಾಸ, ಸಹಾಯಕ ಸಂಗೀತ ನಿರ್ದೇಶಕರ ನೇಮಕ, ತಂಡಗಳ ವಸತಿ, ಪ್ರಯಾಣ, ಊಟೋಪಚಾರ ಹಾಗೂ ಸ್ವಯಂಸೇವಕರ ತರಬೇತಿ ಸೇರಿದಂತೆ ವಿವಿಧ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.

ಮಾಧ್ಯಮಗಳು ಹಾಗೂ ಸಾರ್ವಜನಿಕರು ಸಹಕರಿಸಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಮಹಾ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕು ಎಂದು ಮಾಂಡ್ ಸೊಭಾಣ್ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಆರ್ಥಿಕ ಸಮಿತಿ ಅಧ್ಯಕ್ಷ ರೊಯ್ ಕ್ಯಾಸ್ತೆಲಿನೊ, ಪ್ರಧಾನ ಸಂಗೀತ ನಿರ್ದೇಶಕ ಜೊಯೆಲ್ ಪಿರೇರಾ, ಸಂಘಟಕ ಜೋಕಿಂ ಸ್ಟ್ಯಾನಿ ಆಲ್ವಾರಿಸ್, ಕಾರ್ಯದರ್ಶಿ ರೊನಾಲ್ಡ್ ಕ್ರಾಸ್ತಾ ಹಾಗೂ ಗೋವಾ ಸಂಯೋಜಕ ಮೈಕಲ್ ಜೂಡ್ ಗ್ರೇಶಿಯಸ್ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!