
ಕುಂಬಳೆ: ಭೂಮಿಯ ಹಕ್ಕುಪತ್ರ ಲಭಿಸಿ, ತೆರಿಗೆ ಪಾವತಿಸಿದ್ದರೂ ಮಂಜೂರಾದ ಜಾಗವನ್ನು ತೋರಿಸಿಕೊಡದೆ ಕಂದಾಯ ಅಧಿಕಾರಿಗಳು ಅಲೆದಾಡಿಸುತ್ತಿರುವ ಕುರಿತು ನಮ್ಮ ವೀಡಿಯಾ 24×7 ಸುದ್ದಿ ತಾಣ ಪ್ರಕಟಿಸಿದ ವರದಿಗೆ ಭಾರಿ ಫಲಶ್ರುತಿ ಲಭಿಸಿದೆ.

ವರದಿಯ ಹಿನ್ನೆಲೆಯಲ್ಲಿ ತಕ್ಷಣ ಮಧ್ಯಪ್ರವೇಶಿಸಿದ ಎಡಿಎಂ, ಜಾಗ ಪತ್ತೆಹಚ್ಚಿ ಅಳತೆ ಮಾಡಿ ನೀಡುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.ಎಡಿಎಂ ಸೂಚನೆಯ ಬೆನ್ನಲ್ಲೇ ತಹಶೀಲ್ದಾರ್ ಮಾರ್ಗದರ್ಶನದಲ್ಲಿ ಕೊಯಿಪ್ಪಾಡಿ ಗ್ರಾಮ ಕಚೇರಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಜಮೀನು ಅಳತೆ ಮಾಡಿ ಇರ್ಷಾದ್ ಚಾಕೋ ಅವರಿಗೆ ಹಸ್ತಾಂತರಿಸಿದ್ದಾರೆ.

ಕೊಯಿಪ್ಪಾಡಿಯ ಕಾನ್ಸಾ ಕಾಲೇಜು ಸಮೀಪ ಇರ್ಷಾದ್ರಿಗೆ ಭೂಮಿ ಮಂಜೂರಾಗಿದ್ದರೂ, ಕಚೇರಿಗಳಿಗೆ ಅಲೆದರೂ ಅಧಿಕಾರಿಗಳು ಸ್ಪಂದಿಸಿರಲಿಲ್ಲ. ಮೂರು ದಿನಗಳಲ್ಲಿ ಜಾಗ ತೋರಿಸದಿದ್ದರೆ ಚಳವಳಿ ನಡೆಸುವುದಾಗಿ ಇರ್ಷಾದ್ ಎಚ್ಚರಿಸಿದ್ದರು.

ಈ ಸಮಸ್ಯೆಯನ್ನು ಪ್ರಮುಖವಾಗಿ ಬೆಳಕಿಗೆ ತಂದ ನಮ್ಮ ಮೀಡಿಯಾ 24×7 ವರದಿಯಿಂದಾಗಿ ಇದೀಗ ಅಧಿಕಾರಿಗಳು ಎಚ್ಚೆತ್ತುಕೊಂಡು ತುರ್ತು ಕ್ರಮ ಕೈಗೊಂಡಿದ್ದಾರೆ.

