ಬೆಂಗಳೂರು: ಜಾಗೃತಿ ಟ್ರಸ್ಟ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಆಯೋಜಿಸಲಾಗಿದ್ದ ನಗೆ ಹಬ್ಬ 2026 ಕಾರ್ಯಕ್ರಮವು ಅಭೂತಪೂರ್ವ ಯಶಸ್ಸು ಕಂಡಿತು. ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಹಾಸ್ಯಬ್ರಹ್ಮ ಎಂ.ಎಸ್. ನರಸಿಂಹಮೂರ್ತಿ ಅವರ 77ನೇ ಜನ್ಮದಿನಾಚರಣೆ, ಅವರು ವಿರಚಿಸಿದ ಬೇಂದ್ರೆ ಮತ್ತು ಹಾಸ್ಯ ಕೃತಿಯ ಲೋಕಾರ್ಪಣೆ, ಆದರ್ಶ ದಂಪತಿಗಳಿಗೆ ಪುರಸ್ಕಾರ ಹಾಗೂ ಸಾಧಕರಿಗೆ ಕೆಂಪಮ್ಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಪ್ರಮುಖ ಆಕರ್ಷಣೆಗಳಾಗಿದ್ದವು.

ವ್ಯಕ್ತಿಗಳ ಷಷ್ಠ್ಯಬ್ದಿ ಆಚರಣೆಯನ್ನು ಸಾಮಾನ್ಯವಾಗಿ ನೋಡುತ್ತೇವೆ. ಆದರೆ, ಬೇಂದ್ರೆಯವರ ನಾಕುತಂತಿ ಕೃತಿಯ ಷಷ್ಠ್ಯಬ್ದಿ ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಬೇಂದ್ರೆಯವರ ಕಾವ್ಯದಲ್ಲಿನ ಹಾಸ್ಯಪ್ರಜ್ಞೆ ಮತ್ತು ಜೀವನಮೌಲ್ಯಗಳ ಕುರಿತು ಎಂ.ಎಸ್. ನರಸಿಂಹಮೂರ್ತಿ ಅವರು ಸವಿಸ್ತಾರವಾಗಿ ಮಾತನಾಡಿದರು. ಬೇಂದ್ರೆ ಮತ್ತು ಹಾಸ್ಯ ಕೃತಿಯ ಪರಿಚಯವನ್ನು ಖ್ಯಾತ ವಾಗ್ಮಿ ವೈ.ವಿ. ಗುಂಡೂರಾವ್ ಮಾಡಿಕೊಟ್ಟರು. ಬೇಂದ್ರೆಯವರ ಸಾಹಿತ್ಯದಲ್ಲಿನ ನವಿರಾದ ಹಾಸ್ಯದ ಕುರಿತು ಹಾಸ್ಯ ವಾಗ್ಮಿಗಳು ತಮ್ಮದೇ ಆದ ಶೈಲಿಯಲ್ಲಿ ಮಾತನಾಡಿ ಸಭಿಕರನ್ನು ರಂಜಿಸಿದರು.

ವೇದಿಕೆ ಕಾರ್ಯಕ್ರಮದ ಉದ್ಘಾಟನೆಯನ್ನು ಗೌಶುಭಂ ಫೌಂಡೇಶನ್ನಿನ ನರೇಂದ್ರ ಅವರು ನೆರವೇರಿಸಿ, ಗೋಸಂರಕ್ಷಣೆಯ ಕುರಿತು ವಿಷಯಗಳನ್ನು ಹಂಚಿಕೊಂಡರು, ಕೃತಿ ಲೋಕಾರ್ಪಣೆಯನ್ನು ಸತ್ವ ಗ್ರೂಪಿನ ಶಂಕರಪ್ಪನವರು ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜುನಾಥ ಅವರು ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಉದ್ಯಮಿ ವೆಂಕಟೇಶ ವೃಷಭಾದ್ರಿ ಮತ್ತು ಬೆಳಕು ಸಂಸ್ಥೆಯ ಸಂಸ್ಥಾಪಕರಾದ ಅಣ್ಣಪ್ಪ ಮೇಟಿಗೌಡ, ತಿಮ್ಮಯ್ಯ, ಗುರುಗಂಗಾಧರ್ ಲಯನ್ಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಾಸ್ತಾವಿಕ ನುಡಿಯನ್ನು ಜಾಗೃತಿ ಟ್ರಸ್ಟ್ ನ ಅಧ್ಯಕ್ಷರಾದ ಬಿ.ನಾಗೇಶರವರು, ಮಂಜುನಾಥ, ತಿಮ್ಮಯ್ಯನವರು, ಗಣ್ಯರ ನುಡಿಗಳನ್ನು ಹಂಚಿಕೊಂಡರು.

ಶ್ರೀಯುತ ವೈ.ವಿ.ಗುಂಡೂರಾವ್, ಶ್ರೀಮತಿ ಇಂದು ಸಾಲಿಮಠ, ಶ್ರೀ ಉಮೇಶಗೌಡ ಇವರೊಂದಿಗೆ ನಗೆಹಬ್ಬದ ಸಾರಥ್ಯವನ್ನು ವಹಿಸಿಕೊಂಡಿದ್ದ ಎಂ.ಎಸ್.ಎನ್. ಅವರು ಸಭಾಂಗಣದಲ್ಲಿ ಸೇರಿದವರಿಗೆಲ್ಲ ನಗೆಯ ಡೋಸ್ ಕೊಟ್ಟು, ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು.

ಜನ್ಮದಿನಾಚರಣೆ, ಪುಸ್ತಕ ಬಿಡುಗಡೆ, ಗಣ್ಯರ ನುಡಿಗಳು, ನಗೆಹಬ್ಬ, ಜಾನಪದ ಗೀತೆಗಳ ಗಾಯನ, ನೃತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ಸಭಿಕರನ್ನು ರಂಜಿಸಿದವು. ಕಾರ್ಯಕ್ರಮದ ನಿರೂಪಣೆಯನ್ನು ಸಾಹಿತಿ ಶ್ರೀಮತಿ ಪುಷ್ಪಲತಾ ಹೆಗಡೆಯವರು ಹಾಗು ವಂದನಾರ್ಪಣೆಯನ್ನು ಎ.ಪಿ.ಮಂಜುಳರವರು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ರಂಜಿಸಿದ ಸರ್ವರಿಗೂ ಜಾಗೃತಿ ಟ್ರಸ್ಟ್ ಪರವಾಗಿ ಅಭಿನಂದಿಸಿ ಗೌರವ ಸ್ಮರಣಿಕೆಗಳನ್ನು ನೀಡಿ ಬೀಳ್ಕೊಡಲಾಯಿತು. ಹಾಸ್ಯದ ಹೊನಲಿನೊಂದಿಗೆ ಲಘು ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು. ಈಗಾಗಲೇ ಅನೇಕ ಸಾಹಿತ್ಯಕ, ಸಾಂಸ್ಕೃತಿಕ ಮತ್ತು ಸಮಾಜಮುಖಿ ಕಾರ್ಯಕ್ರಮಗಳನ್ನು ದಶಕಗಳಿಂದ ರಾಜ್ಯ ಮತ್ತು ಹೊರರಾಜ್ಯಗಳಲ್ಲಿ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ಜಾಗೃತಿ ಟ್ರಸ್ಟಿನ ಕಾರ್ಯವೈಖರಿ ಕುರಿತು ಗಣ್ಯರು ಮೆಚ್ಚುಗೆಯನ್ನು ಸೂಚಿಸಿದರು. ಇಂತಹ ನೂರಾರು ಕಾರ್ಯಕ್ರಮಗಳನ್ನು ಭವಿಷ್ಯದಲ್ಲಿ ಆಯೋಜಿಸಿ, ನಾಡು ನುಡಿಯನ್ನು ಉಳಿಸಿ ಬೆಳೆಸಲಿಯೆಂದು ಹಾರೈಸಿದರು.

