ನಮ್ಮ ಅಕ್ಕನಿಗೆ ವೈದ್ಯರ ಸೂಚನೆಯಂತೆ ಇಕೋ ಕಾರ್ಡಿಯೋಗ್ರಾಫಿ (Echocardiography) ಮಾಡಿಸಲು ಕಾಸರಗೋಡಿನ ಖ್ಯಾತ ವೈದ್ಯರ ಭೇಟಿಗಾಗಿ ಹೋದ ಸಂದರ್ಭ ಅದು. ಆಸ್ಪತ್ರೆಯ ಒಳಗಿನ ಮುಚ್ಚಿದ ಕೋಣೆಯಲ್ಲಿ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳು ಮನುಷ್ಯನ ಹೃದಯದ ಬಡಿತವನ್ನು ಯಾಂತ್ರಿಕವಾಗಿ ಅಳೆಯುತ್ತಿದ್ದರೆ, ಹೊರಗಿನ ಸುದೀರ್ಘ ಕಾರಿಡಾರ್ನಲ್ಲಿ ಮಾತ್ರ ಇಡೀ ಬದುಕಿನ ನಾಡಿಮಿಡಿತವೇ ನಲ್ಲಿ ತೆರೆದುಕೊಂಡಿತ್ತು. ಈ ಕಾಂಕ್ರೀಟ್ ಕಾರಿಡಾರ್ ಕೇವಲ ಕಾಯುವಿಕೆಗಾಗಿ ಇರುವ ಶೂನ್ಯ ಜಾಗವಲ್ಲ; ಅದು ಮನುಷ್ಯನ ಕಣ್ಣೀರ ಅಸಹಾಯಕತೆ, ಪ್ರಾರ್ಥನೆಯ ಭರವಸೆ, ನಿಶ್ಶಬ್ದ ಪ್ರೀತಿ ಮತ್ತು ಕಡು ನಿರಾಸೆಗಳು ಒಂದೇ ಕ್ಷಣದಲ್ಲಿ ಪರಸ್ಪರ ಮುಖಾಮುಖಿಯಾಗುವ ಬದುಕಿನ ಮಹಾ ರಂಗಭೂಮಿ. ಆಸ್ಪತ್ರೆಯ ಆ ಮೌನ ಕಾರಿಡಾರ್ನಲ್ಲಿ ನಿಂತು ಜಗತ್ತನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಮನುಷ್ಯ ಸಹಜ ಗುಣಗಳ ಮತ್ತು ಕಟು ಸತ್ಯಗಳ ಸುಂದರ ದರ್ಶನ ನಮಗಾಗುತ್ತದೆ.
ಇಲ್ಲಿನ ವಾತಾವರಣದಲ್ಲಿ ಒಂದು ರೀತಿಯ ಭಾರವಿದೆ. ಕಾರಿಡಾರ್ನ ಮೂಲೆಗಳಲ್ಲಿ ಕುಳಿತು ಕಣ್ಣೀರು ಒರೆಸಿಕೊಳ್ಳುವ ಕೈಗಳು, ಶೂನ್ಯ ದೃಷ್ಟಿಯಿಂದ ಗೋಡೆಯನ್ನೇ ನೋಡುತ್ತಾ ಕುಳಿತಿರುವ ಕಣ್ಣುಗಳು ನಮಗೆ ಕಾಣಿಸುತ್ತವೆ. ಎಷ್ಟೇ ಧನ-ಕನಕ, ಆಸ್ತಿ, ಅಧಿಕಾರವಿದ್ದರೂ ಪ್ರಕೃತಿಯ ಜೀವವೈಜ್ಞಾನಿಕ ನಿಯಮದ ಮುಂದೆ, ಅನಾರೋಗ್ಯದ ಮುಂದೆ ಮನುಷ್ಯ ಎಷ್ಟು ಅಸಹಾಯಕ ಎಂಬುದನ್ನು ಈ ಜಾಗ ಅತ್ಯಂತ ಸ್ಪಷ್ಟವಾಗಿ ನೆನಪಿಸುತ್ತದೆ. ಇಲ್ಲಿ ಪ್ರತಿಯೊಬ್ಬರೂ ತಮ್ಮ ಅಹಂಕಾರವನ್ನು ಕಳಚಿಟ್ಟು ಕೇವಲ ಜೀವ ಭಿಕ್ಷೆಗಾಗಿ ಪ್ರಾರ್ಥಿಸುವ ಸಾಧಾರಣ ಮನುಷ್ಯರಾಗಿರುತ್ತಾರೆ.

ಜಗತ್ತಿನ ಬೇರೆಡೆ ಧರ್ಮ, ಜಾತಿ, ರಾಜಕೀಯದ ಹೆಸರಿನಲ್ಲಿ ಜನ ವೈಷಮ್ಯ ಸಾಧಿಸಬಹುದು. ಆದರೆ ಆಸ್ಪತ್ರೆಯ ಈ ವಾತಾವರಣದಲ್ಲಿ ಇವೆಲ್ಲವೂ ಅರ್ಥಹೀನ ಎನಿಸುತ್ತವೆ. ಪಕ್ಕದ ಆಸನದಲ್ಲಿ ಕುಳಿತ ಅಪರಿಚಿತ ರೋಗಿಯ ಸ್ಥಿತಿ ಸುಧಾರಿಸಿದೆ ಎಂದು ಕೇಳಿದಾಗ ಮೂಡುವ ನಿಟ್ಟುಸಿರು, ತಮಗೇ ತಿಳಿಯದಂತೆ ಒಬ್ಬರನ್ನೊಬ್ಬರು ಸಮಾಧಾನಪಡಿಸುವ ಪರಿ—ಇಲ್ಲಿ ಮಾನವೀಯತೆಯೇ ಏಕೈಕ ಧರ್ಮ. ರಕ್ತದ ಗುಂಪು (Blood Group) ಹೊಂದಾಣಿಕೆಯಾದರೆ ಸಾಕು, ಇಲ್ಲಿ ಯಾರು ಯಾರಿಗೆ ಬೇಕಾದರೂ ಜೀವ ನೀಡಲು ಸಿದ್ಧರಿರುತ್ತಾರೆ. ಇಂದಿನ ತಾಂತ್ರಿಕ ಜಗತ್ತಿನಲ್ಲಿ ಮನುಷ್ಯ ಯಾಂತ್ರಿಕವಾಗಿದ್ದಾನೆ, ಮೊಬೈಲ್ ಪರದೆಯಲ್ಲೇ ಮುಳುಗಿರುತ್ತಾನೆ ಎಂಬ ಮಾತಿದೆ. ಆದರೆ ಇಲ್ಲಿನ ಕಾಯುವಿಕೆಯಲ್ಲಿ ಆ ಯಾಂತ್ರಿಕತೆ ಕರಗುತ್ತದೆ. ಮಾನವ ಸಂಬಂಧಗಳ ನಿಜವಾದ ಆಳ ತಿಳಿಯುವುದೇ ಇಲ್ಲಿ. ಕಷ್ಟದ ಸಮಯದಲ್ಲಿ ಜೊತೆಗಿರುವ ಆಪ್ತರು ಯಾರು, ಕೇವಲ ಮಾತಿಗೆ ಸೀಮಿತವಾದವರು ಯಾರು ಎಂಬ ಸ್ವಯಂ ವಿಮರ್ಶೆ ಪ್ರತಿಯೊಬ್ಬರಲ್ಲೂ ಜಾಗೃತವಾಗುತ್ತದೆ. ಹಳೆಯ ಮರೆತುಹೋದ ಕೌಟುಂಬಿಕ ಪ್ರೀತಿ-ವಿಶ್ವಾಸಗಳು ಇಲ್ಲಿ ಮತ್ತೆ ಚಿಗುರೊಡೆಯುವುದನ್ನು ಕಾಣಬಹುದು.
ಕಾರಿಡಾರ್ನ ಒಂದು ಬದಿಯಲ್ಲಿ ದುಬಾರಿ ಚಿಕಿತ್ಸೆಯ ವೆಚ್ಚವನ್ನು ಭರಿಸಲಾಗದೆ ತಲೆಮೇಲೆ ಕೈಹೊತ್ತು ಕುಳಿತ ಬಡವನಿದ್ದರೆ, ತಂತ್ರಜ್ಞಾನ ಹಾಗೂ ಹಣದ ಬಲದಿಂದ ಏನನ್ನಾದರೂ ಸಾಧಿಸಬಹುದು ಎಂದು ನಂಬಿ ಸೋಲುವ ಶ್ರೀಮಂತನಿರುತ್ತಾನೆ. ಆದರೆ ಅಂತಿಮವಾಗಿ, ಸಾವು ಮತ್ತು ದೈಹಿಕ ನೋವು ಇಬ್ಬರನ್ನೂ ಒಂದೇ ತಕ್ಕಡಿಯಲ್ಲಿ ತೂಗುತ್ತದೆ. ಸಂಪತ್ತಿಗಿಂತ ದೈಹಿಕ ಮತ್ತು ಮಾನಸಿಕ ಆರೋಗ್ಯವೇ ಶ್ರೇಷ್ಠ ಎಂಬ ಸತ್ಯ ಇಲ್ಲಿ ಯಾರಿಗೂ ಹೇಳಿಕೊಡಬೇಕಾಗಿಲ್ಲ. ಇಷ್ಟೆಲ್ಲಾ ಕತ್ತಲೆಯ ನಡುವೆಯೂ ಆಸ್ಪತ್ರೆಯ ಅಂಗಳ ಸದಾ ನಿರಾಶೆಯ ತಾಣವಲ್ಲ. ವೈದ್ಯರು ಬಂದು “ಈಗ ರೋಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ, ಚೇತರಿಸಿಕೊಳ್ಳುತ್ತಿದ್ದಾರೆ” ಎಂದು ಹೇಳಿದಾಗ ಅಲ್ಲಿ ಹರಡುವ ಆ ನಿರಾಳತೆ, ಆ ಮುಖದ ನಗು ಜಗತ್ತಿನ ಯಾವುದೇ ಕೋಟಿ ರೂಪಾಯಿಗೂ ಸಮನಲ್ಲ. ಅದು ಮರುಜನ್ಮದ ಸಂಭ್ರಮ.

ಆಸ್ಪತ್ರೆಯ ಬಿಳಿ ಗೋಡೆಗಳ ಈ ಕಾರಿಡಾರ್ ಮನುಷ್ಯನಿಗೆ ಬದುಕಿನಚಗ ಅತ್ಯಂತ ಗಹನವಾದ ತತ್ತ್ವಶಾಸ್ತ್ರವನ್ನು ಉಪದೇಶಗಳಿಲ್ಲದೆ, ಮೌನವಾಗಿಯೇ ಬೋಧಿಸಿಬಿಡುತ್ತದೆ. ಹೊರಗಿನ ಭೌತಿಕ ಜಗತ್ತಿನಲ್ಲಿ ನಾವು ಪ್ರದರ್ಶಿಸುವ ಆಡಂಬರ, ಬೆಳೆಸಿಕೊಳ್ಳುವ ದ್ವೇಷದ ಗೋಡೆಗಳು ಮತ್ತು ನಾವೇ ಸೃಷ್ಟಿಸಿಕೊಳ್ಳುವ ಹಠ-ಅಹಂಕಾರಗಳ ಬಿಕ್ಕಟ್ಟುಗಳೆಲ್ಲವೂ ಈ ವಾತಾವರಣದಲ್ಲಿ ಎಷ್ಟು ಕ್ಷಣಿಕ ಮತ್ತು ನಿರರ್ಥಕ ಎನಿಸಿಬಿಡುತ್ತವೆ! ಅಂತಿಮವಾಗಿ ಇಡೀ ಆಯುಷ್ಯದ ಗಳಿಕೆಯಲ್ಲಿ ನಮಗೆ ಜೊತೆಯಾಗಿ ನಿಲ್ಲುವುದು ನಮ್ಮೊಳಗಿನ ಉತ್ತಮ ಆರೋಗ್ಯ ಮತ್ತು ನಾವು ಜೀವಿತಾವಧಿಯಲ್ಲಿ ಸಂಪಾದಿಸಿದ ನಾಲ್ಕು ಆಪ್ತ ಜೀವಗಳ ನಿಷ್ಕಲ್ಮಶ ಪ್ರೀತಿ ಮಾತ್ರ. ನಾವಿರುವಷ್ಟು ದಿನ ಯಾರ ಮನಸ್ಸಿಗೂ ನೋವು ನೀಡದೆ, ಅಹಂಭಾವಗಳನ್ನು ಬದಿಗಿಟ್ಟು ಪ್ರೀತಿ-ನೆಮ್ಮದಿಯನ್ನಷ್ಟೇ ಹಂಚುತ್ತಾ ಬದುಕೋಣ ಎನ್ನುವುದೇ ಈ ಆಸ್ಪತ್ರೆಯ ಕಾರಿಡಾರ್ ನಮ್ಮ ಹೃದಯಕ್ಕೆ ದಾಟಿಸುವ ಶಾಶ್ವತ ಸಂದೇಶ.
✍️: ದಯಾನಂದ ರೈ ಕಳ್ವಾಜೆ


