ಜೋಡುಕಲ್ಲು ಚಪ್ಪರ ವಿವಾದ ಉಲ್ಬಣ – ಪ್ರತಿಭಟನೆ, ಅಖಂಡ ಭಜನೆ

ಕಾಸರಗೋಡು: ಉಪ್ಪಳ ಸಮೀಪದ ಜೋಡುಕಲ್ಲಿನಲ್ಲಿ ಚಪ್ಪರ ನಿರ್ಮಾಣಕ್ಕೆ ಸಂಬಂಧಿಸಿದ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದೆ. ಚಪ್ಪರ ತೆರವುಗೊಳಿಸುವಂತೆ ಹೈಕೋರ್ಟ್ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದು, ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ಕಳೆದ ಸುಮಾರು 50 ವರ್ಷಗಳಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಗಣೇಶೋತ್ಸವ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದ್ದ ಸ್ಥಳದಲ್ಲಿ ತಾತ್ಕಾಲಿಕ ಚಪ್ಪರ ನಿರ್ಮಿಸಿದ ಬಳಿಕ ವಿವಾದ ಆರಂಭವಾಗಿದೆ ಎನ್ನಲಾಗಿದೆ. ಈ ಸಂಬಂಧ ಮುಸ್ಲಿಂ ಲೀಗ್ ಹಾಗೂ ಕಾಂಗ್ರೆಸ್ ಮುಖಂಡರು ದೂರು ನೀಡಿದ್ದು, ಚಪ್ಪರ ತೆರವುಗೊಳಿಸುವಂತೆ ಹೈಕೋರ್ಟ್ ಆದೇಶ ನೀಡಿದೆ.

ನ್ಯಾಯಾಲಯದ ಆದೇಶದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ಕಾರ್ಯಕರ್ತರು ಹಾಗೂ ಸ್ಥಳೀಯರು ಪ್ರತಿಭಟನೆಗೆ ಇಳಿದಿದ್ದಾರೆ. ಪ್ರತಿಭಟನೆಯಲ್ಲಿ ಯುವಕರು ಮತ್ತು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ. ಮತ್ತೊಂದೆಡೆ, ಸ್ಥಳದಲ್ಲಿ ನಿರಂತರ ಅಖಂಡ ಭಜನೆ ನಡೆಸಲಾಗುತ್ತಿದೆ.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ಕೋಝಿಕ್ಕೋಡ್ ಮೇಘಲಾ ಅಧ್ಯಕ್ಷ ವಿಜಯ್ ರೈ, ಸರಕಾರಿ ಜಾಗದಲ್ಲಿರುವ ಅನಧಿಕೃತ ಕಟ್ಟಡಗಳನ್ನು ಮೊದಲು ತೆರವುಗೊಳಿಸಲಿ ಎಂದು ಆಗ್ರಹಿಸಿದರು.
“ತೆರವುಗೊಳಿಸುವುದಾದರೆ ಸರಕಾರಿ ಜಾಗದಲ್ಲಿರುವ ಅನಧಿಕೃತವಾಗಿ ಕಟ್ಟಿರುವ ಕಟ್ಟಡಗಳನ್ನು ಮೊದಲು ತೆರವುಗೊಳಿಸಲಿ. ಎಷ್ಟೇ ದೊಡ್ಡ ಪೊಲೀಸ್ ಪಡೆ ಬಂದರೂ ನಾವು ಇಲ್ಲಿಂದ ಕದಲುವುದಿಲ್ಲ. ಚಪ್ಪರ ಹಾಗೂ ಮಂದಿರವನ್ನು ತೆರವುಗೊಳಿಸಲು ಬಿಡುವುದಿಲ್ಲ,” ಎಂದು ವಿಜಯ್ ರೈ ಎಚ್ಚರಿಕೆ ನೀಡಿದ್ದಾರೆ.

ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮುಂದಿನ ಬೆಳವಣಿಗೆಗಳ ಬಗ್ಗೆ ಕುತೂಹಲ ಮೂಡಿದ್ದು, ಜೋಡುಕಲ್ಲಿನಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ. ಸ್ಥಳದಲ್ಲಿ ಪ್ರತಿಭಟನೆ ಮತ್ತು ಅಖಂಡ ಭಜನೆ ಮುಂದುವರಿದಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!