
ಮಂಜೇಶ್ವರ: ಕನಿಲ ಶ್ರೀ ಭಗವತಿ ಕ್ಷೇತ್ರದಲ್ಲಿ ತುಲಾ ಪತ್ತ್ ಆಚರಣೆಯು ಶ್ರದ್ಧಾಭಕ್ತಿ ಹಾಗೂ ಧಾರ್ಮಿಕ ಸಂಭ್ರಮದೊಂದಿಗೆ ಸಂಪನ್ನಗೊಂಡಿತು.

ಅನಾದಿ ಕಾಲದಿಂದಲೂ ಮೂಲ ಮಂಜು ವಂಶದ ಬಂಗೇರ ಕುಟುಂಬಸ್ಥರು ನಡೆಸಿಕೊಂಡು ಬರುತ್ತಿರುವ ಸಾಂಪ್ರದಾಯಿಕ ಆಚರಣೆಯು ಕ್ಷೇತ್ರದಲ್ಲಿ ಭಕ್ತಿಪೂರ್ಣ ವಾತಾವರಣದಲ್ಲಿ ನಡೆಯಿತು.

ಶ್ರೀ ಕ್ಷೇತ್ರದಲ್ಲಿ ಕೊಪ್ಪರಿಗೆ ಮುಹೂರ್ತದ ಬಳಿಕ ಬೆಳಗ್ಗೆ 7.30ಕ್ಕೆ ಭಂಡಾರ ಮನೆಯಿಂದ ಭಂಡಾರವನ್ನು ಕನಿಲ ಕ್ಷೇತ್ರಕ್ಕೆ ತರಲಾಯಿತು. ಬಳಿಕ ಸಂಜೆ 4 ಗಂಟೆಗೆ ಉತ್ಸವದ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡವು. ಬಿಂಬ ದರ್ಶನ ಹಾಗೂ ಭಕ್ತಾದಿಗಳ ಹರಕೆ ಸೇವೆಗಳು ನೆರವೇರಿದವು.

ಈ ಸಂದರ್ಭದಲ್ಲಿ ಭಕ್ತಾದಿಗಳಿಗೆ ಅಕ್ಕಿ, ಬಾಳೆಹಣ್ಣು ಹಾಗೂ ನೈವೇದ್ಯವನ್ನು ಪ್ರಸಾದ ರೂಪದಲ್ಲಿ ವಿತರಿಸಲಾಯಿತು. ರಾತ್ರಿ 8 ಗಂಟೆಗೆ ಭಂಡಾರವನ್ನು ಮರಳಿ ಭಂಡಾರ ಮನೆಗೆ ಕೊಂಡೊಯ್ಯಲಾಯಿತು.

ಉತ್ಸವದ ಅಂಗವಾಗಿ ಭಕ್ತಾದಿಗಳಿಗೆ ಹೊಸ ಅಕ್ಕಿಯ ಅನ್ನಸಂತರ್ಪಣೆಯನ್ನೂ ಏರ್ಪಡಿಸಲಾಗಿತ್ತು. ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ದೇವಿಯ ದರ್ಶನ ಪಡೆದು ಹರಕೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಕ್ಷೇತ್ರದ ಸೇವಾ ಸಮಿತಿ, ಜೀರ್ಣೋದ್ಧಾರ ಸಮಿತಿ ಹಾಗೂ ಮಹಿಳಾ ಸಮಿತಿಯ ಸದಸ್ಯರು, ಕೋಟಗಂ ತರವಾಡು ಸೇವಾ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು, ಮಹಿಳಾ ಸಮಿತಿಯ ಸದಸ್ಯರು ಸೇರಿದಂತೆ ಅನೇಕ ಭಕ್ತಾದಿಗಳು ಉಪಸ್ಥಿತರಿದ್ದರು.
ಸಾಂಪ್ರದಾಯಿಕ ಧಾರ್ಮಿಕ ವಿಧಿವಿಧಾನಗಳು ಹಾಗೂ ಭಕ್ತರ ಪಾಲ್ಗೊಳ್ಳುವಿಕೆಯೊಂದಿಗೆ ಕನಿಲ ಶ್ರೀ ಭಗವತಿ ಕ್ಷೇತ್ರದ ತುಲಾ ಪತ್ತ್ ಆಚರಣೆಯು ಶ್ರದ್ಧಾಭಕ್ತಿಯಿಂದ ಸಂಪನ್ನಗೊಂಡಿತು.


