ಮಂಗಳೂರು: 150 ಕಿ.ವ್ಯಾ.ವರೆಗಿನ ಕಡಿಮೆ ಒತ್ತಡದ (ಎಲ್‌ಟಿ) ವಿದ್ಯುತ್ ಸಂಪರ್ಕಗಳಿಗೆ ಗ್ರಾಹಕರೇ ಸ್ವಯಂ ಪ್ರಮಾಣೀಕರಣ ಮಾಡಿಕೊಳ್ಳಲು ಅವಕಾಶ ಕಲ್ಪಿಸುವ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ (ಕೆಇಆರ್‌ಸಿ) ಕರಡು ನಿಯಮಾವಳಿಯನ್ನು ಕೈಬಿಡುವಂತೆ ವಿದ್ಯುತ್ ಗುತ್ತಿಗೆದಾರರ ಸಂಘಟನೆಗಳು ಒತ್ತಾಯಿಸಿವೆ.

ಬಿಜೈಯ ಮೆಸ್ಕಾಂ ಕಚೇರಿಯಲ್ಲಿ ಆಯೋಗದ ಅಧ್ಯಕ್ಷ ಪಿ. ರವಿಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಾರ್ವಜನಿಕ ವಿಚಾರಣೆಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ವಿದ್ಯುತ್ ಗುತ್ತಿಗೆದಾರರ ಪ್ರತಿನಿಧಿಗಳು ಭಾಗವಹಿಸಿ ಆಕ್ಷೇಪ ವ್ಯಕ್ತಪಡಿಸಿದರು.
ಪರವಾನಗಿ ಪಡೆದ ಗುತ್ತಿಗೆದಾರರು ಸಲ್ಲಿಸುವ ವಿದ್ಯುತ್ ಸಮಾಪನ ವರದಿಯನ್ನು ರದ್ದುಗೊಳಿಸುವುದರಿಂದ ವಿದ್ಯುತ್ ಸುರಕ್ಷತೆಗೆ ಧಕ್ಕೆಯಾಗುವುದಲ್ಲದೆ, ರಾಜ್ಯದ ಸುಮಾರು 30 ಸಾವಿರ ನೋಂದಾಯಿತ ಗುತ್ತಿಗೆದಾರರು ಹಾಗೂ ಅವರನ್ನವಲಂಬಿಸಿರುವ ಸಾವಿರಾರು ಕಾರ್ಮಿಕರ ಉದ್ಯೋಗಕ್ಕೆ ಅಪಾಯ ಎದುರಾಗಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಸಂಘದ ಅಧ್ಯಕ್ಷ ಕುಶಾಲ ಪೂಜಾರಿ ಆತಂಕ ವ್ಯಕ್ತಪಡಿಸಿದರು.

ವಿದ್ಯುತ್ ಅಳವಡಿಕೆಯಲ್ಲಿ ಸಣ್ಣ ತಪ್ಪು ಕೂಡ ದೊಡ್ಡ ಅನಾಹುತಕ್ಕೆ ಕಾರಣವಾಗಬಹುದು. ಹೀಗಾಗಿ ಅನುಭವಿ ಗುತ್ತಿಗೆದಾರರ ತಾಂತ್ರಿಕ ಪರಿಶೀಲನೆ ಕಡ್ಡಾಯವಾಗಿರಬೇಕು ಎಂದು ಪ್ರತಿನಿಧಿಗಳು ಆಗ್ರಹಿಸಿದರು.
ಇದೇ ವೇಳೆ, ಸಣ್ಣ ಕೈಗಾರಿಕೆಗಳಿಗೆ ಹೆಚ್ಚುವರಿ ಆರ್ಥಿಕ ಹೊರೆ ತಪ್ಪಿಸುವುದು, ಇವಿ ಚಾರ್ಜಿಂಗ್ ವ್ಯವಸ್ಥೆಯ ಕಡ್ಡಾಯ ನಿಯಮದಿಂದ ವಿನಾಯಿತಿ ನೀಡುವುದು ಹಾಗೂ ರೈತರ ನೀರಾವರಿ ಪಂಪ್‌ಸೆಟ್‌ಗಳಿಗೆ ಅನಗತ್ಯ ನಿರಾಕ್ಷೇಪಣಾ ಪತ್ರದ (ಎನ್‌ಒಸಿ) ಬೇಡಿಕೆ ಕೈಬಿಡುವಂತೆ ವಿವಿಧ ಪ್ರತಿನಿಧಿಗಳು ಸಲಹೆ ನೀಡಿದರು. ಆಯೋಗದ ಸದಸ್ಯರಾದ ಎಚ್.ಕೆ. ಜಗದೀಶ್ ಮತ್ತು ಜಾವೇದ್ ಅಖರ್ ಉಪಸ್ಥಿತರಿದ್ದರು.

