ಊರಿನ ಸುರಕ್ಷತೆಯ ಕಾಳಜಿಗೆ ಕಿರುಕುಳದ ಬಹುಮಾನ; ಪೊಲೀಸ್ ದೌರ್ಜನ್ಯಕ್ಕೆ ಬಲಿಯಾದ ಅಮಾಯಕ ಸೋಮನಾಥ್ ಸಾವಿಗೆ ಯಾರು ಹೊಣೆ?: ಮೃತರ ಮನೆಗೆ ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರು ಭೇಟಿ, ಸಾಂತ್ವನ; ತಪ್ಪಿತಸ್ಥ ಪೊಲೀಸರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

ಮಂಗಳೂರು: ತಡರಾತ್ರಿ ನಿರ್ಜನ ಬೀಚ್ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಜೋಡಿಯನ್ನು ಊರಿನ ಸುರಕ್ಷತೆ ಹಾಗೂ ಕಾಳಜಿಯಿಂದ ವಿಚಾರಿಸಿದ್ದನ್ನೇ ನೆಪವಾಗಿಟ್ಟುಕೊಂಡು, ಸುರತ್ಕಲ್ ಪೊಲೀಸರು ನೀಡಿದ ಅಮಾನವೀಯ ಕಿರುಕುಳಕ್ಕೆ ಬೇಸತ್ತು ಹೊಸಬೆಟ್ಟು ನಿವಾಸಿ ಸೋಮನಾಥ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಾಗರಿಕ ಸಮಾಜ ತಲೆತಗ್ಗಿಸುವಂತದ್ದು ಎಂದು ವಿಧಾನ ಪರಿಷತ್ ಸದಸ್ಯರಾದ ಶ್ರೀ ಕಿಶೋರ್ ಕುಮಾರ್ ಪುತ್ತೂರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ।

ಮೃತ ಸೋಮನಾಥ್ ಅವರ ಹೊಸಬೆಟ್ಟುವಿನ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಶಾಸಕರು, ಘಟನೆಯ ಸಂಪೂರ್ಣ ವಿವರಗಳನ್ನು ಪಡೆದುಕೊಂಡು ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವ ಭರವಸೆ ನೀಡಿದರು।

ಊರಿನ ಕಾಳಜಿಯೇ ಅಪರಾಧವಾಯಿತೇ?:

ಈ ಸಂದರ್ಭದಲ್ಲಿ ಮಾತನಾಡಿದ ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರು, “ನಮ್ಮ ಊರಿನಲ್ಲಿ, ನಮ್ಮ ಮನೆಯ ಸಮೀಪ ತಡರಾತ್ರಿಯ ವೇಳೆ ಅಪರಿಚಿತರು ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದಾಗ, ಬೀಚ್‌ನಲ್ಲಿ ಯಾರಾದರೂ ಆತ್ಮಹತ್ಯೆ ಮಾಡಿಕೊಳ್ಳಲು ಬಂದಿದ್ದಾರೆಯೇ ಅಥವಾ ಯಾವುದೇ ಅನಾಹುತ ಸಂಭವಿಸಬಾರದು ಎಂಬ ಸಾಮಾಜಿಕ ಕಾಳಜಿಯಿಂದ ಸ್ಥಳೀಯರು ವಿಚಾರಿಸುವುದು ಸಾಮಾನ್ಯ ಹಾಗೂ ಪ್ರಜ್ಞಾವಂತ ನಾಗರಿಕರ ಕರ್ತವ್ಯ। ಸ್ಥಳೀಯರು ಯಾವುದೇ ಜಾತಿ-ಧರ್ಮ ಕೇಳಿಲ್ಲ ಅಥವಾ ದೈಹಿಕವಾಗಿ ಹಲ್ಲೆ ಕೂಡ ಮಾಡಿಲ್ಲ। ಸ್ವತಃ ದೂರು ನೀಡಿದ ಯುವತಿಯೇ ಹಲ್ಲೆಯಾಗಿಲ್ಲ ಎಂದು ಹೇಳಿದ್ದರೂ, ಪೊಲೀಸರು ಆ ಸಣ್ಣ ವಿಚಾರವನ್ನೇ ದುರುಪಯೋಗಪಡಿಸಿಕೊಂಡು ಸೋಮನಾಥ್ ಅವರಿಗೆ ಠಾಣೆಯಲ್ಲಿ ದೌರ್ಜನ್ಯ ಎಸಗಿರುವುದು ಅತ್ಯಂತ ಖಂಡನೀಯ” ಎಂದರು.

ಒಂದು ಜೀವ ಹೋದದ್ದಕ್ಕೆ ಹೊಣೆ ಯಾರು?:

“ಪೊಲೀಸ್ ಠಾಣೆಗೆ ಕರೆಸಿ ಬೆಳಿಗ್ಗೆಯಿಂದ ರಾತ್ರಿಯವರೆಗೆ ಅಕ್ರಮವಾಗಿ ಕೂರಿಸಿಕೊಳ್ಳುವುದು, ಯುವತಿಯ ಕಾಲಿಗೆ ಬೀಳಿಸಿ ವಿಡಿಯೋ ಮಾಡಿ ಮಾನಸಿಕವಾಗಿ ಹಿಂಸಿಸುವುದು, 10 ವರ್ಷ ಜೈಲಿನಲ್ಲಿ ಕೊಳೆಯುವಂತೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿ ಒಬ್ಬ ಅಮಾಯಕ ಜೀವವನ್ನು ಆತ್ಮಹತ್ಯೆಯ ಹಂತಕ್ಕೆ ತಳ್ಳಿರುವುದು ಕಾನೂನು ರಕ್ಷಕರೇ ಮಾಡಿದ ಅಕ್ಷಮ್ಯ ಅಪರಾಧ। ಕೇವಲ ಊರಿನ ಸುರಕ್ಷತೆ ಬಗ್ಗೆ ಮಾತನಾಡಿದ್ದಕ್ಕೆ ಒಬ್ಬ ವ್ಯಕ್ತಿ ಹೆದರಿ ಪ್ರಾಣ ಕಳೆದುಕೊಳ್ಳಬೇಕೇ? ಇಂದು ಆ ಕುಟುಂಬ ತನ್ನ ಆಧಾರಸ್ತಂಭವನ್ನೇ ಕಳೆದುಕೊಂಡು ಬೀದಿಗೆ ಬಿದ್ದಿದೆ, ಈ ಜೀವ ಹೋದದ್ದಕ್ಕೆ ಯಾರು ಹೊಣೆ? ಎಂದು ಕಿಶೋರ್ ಕುಮಾರ್ ಪುತ್ತೂರು ನೇರವಾಗಿ ಪ್ರಶ್ನಿಸಿದರು.”

ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಒತ್ತಾಯ:

ಪೊಲೀಸ್ ಇಲಾಖೆಯ ಈ ಅತಿಯಾದ ಅಧಿಕಾರ ದುರುಪಯೋಗ ಮತ್ತು ಏಕಪಕ್ಷೀಯ ನಡವಳಿಕೆಯೇ ಅಮಾಯಕ ಸೋಮನಾಥ್ ಸಾವಿಗೆ ನೇರ ಕಾರಣವಾಗಿದೆ। ಕೇವಲ ಕರ್ತವ್ಯಲೋಪ ಎಂದು ಪ್ರಕರಣ ಮುಚ್ಚಿಹಾಕದೆ, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಸಂಬಂಧಪಟ್ಟ ಎಲ್ಲಾ ಪೊಲೀಸ್ ಸಿಬ್ಬಂದಿ ಹಾಗೂ ದುರುದ್ದೇಶಪೂರ್ವಕ ದೂರು ನೀಡಿದವರ ವಿರುದ್ಧ ಸೂಕ್ತ ತನಿಖೆ ನಡೆಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು। ನೊಂದ ಕುಟುಂಬಕ್ಕೆ ಸರ್ಕಾರ ತಕ್ಷಣವೇ ಸೂಕ್ತ ಪರಿಹಾರ ಘೋಷಿಸಬೇಕು ಎಂದು ಅವರು ಗೃಹ ಇಲಾಖೆ ಹಾಗೂ ಜಿಲ್ಲಾಡಳಿತವನ್ನು ಬಲವಾಗಿ ಒತ್ತಾಯಿಸಿದರು। ಈ ಸಂದರ್ಭದಲ್ಲಿ ಜೊತೆಗಿದ್ದ ಬಿಜೆಪಿ ಜಿಲಾಧ್ಯಕ್ಷ ಶ್ರೀ ಸತೀಶ್ ಕುಂಪಲ ಅವರು ಕೂಡ ಇದನ್ನು ಬಲವಾಗಿ ಖಂಡಿಸಿದ್ದು ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!