ಮಂಗಳೂರಿನಲ್ಲಿ ಪುಣೆ ಗ್ಯಾಸ್ ಎಕ್ಸ್‌ಪೀರಿಯನ್ಸ್ ಸೆಂಟರ್ ಉದ್ಘಾಟನೆ

ಮಂಗಳೂರು: ಅಡುಗೆ ಅನಿಲದ ಸುರಕ್ಷತೆ, ಕ್ಷಮತೆ ಹಾಗೂ ಕಾರ್ಯಾಚರಣೆ ಎಂಜಿನಿಯರಿಂಗ್ ಕ್ಷೇತ್ರದಲ್ಲಿ 40 ವರ್ಷಗಳ ಅನುಭವ ಹೊಂದಿರುವ ಪುಣೆ ಗ್ಯಾಸ್ ಸಂಸ್ಥೆಯ ನೂತನ ಎಕ್ಸ್‌ಪೀರಿಯನ್ಸ್ ಸೆಂಟರ್ ಮಂಗಳೂರಿನ ಅಶೋಕನಗರದ ವಿಂದ್ಯಾ ಅಪ್ಲಯನ್ಸಸ್, ಲೋಟಸ್ ಅಥರ್ವದಲ್ಲಿರುವ ಪುಣೆ ಗ್ಯಾಸ್ ಎಕ್ಸ್‌ಪೀರಿಯನ್ಸ್ ಸೆಂಟರ್‌ನಲ್ಲಿ ಉದ್ಘಾಟನೆಗೊಂಡಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಐಡಿಯಲ್ ಐಸ್‌ಕ್ರೀಮ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಸ್. ಮುಕುಂದ್ ಕಾಮತ್, ಪುಣೆ ಗ್ಯಾಸ್ ಸಂಸ್ಥೆಯ ಉತ್ಪನ್ನಗಳ ಗುಣಮಟ್ಟ, ಬ್ರ್ಯಾಂಡಿಂಗ್ ಹಾಗೂ ಸುರಕ್ಷತಾ ವ್ಯವಸ್ಥೆಗಳು ಮೆಚ್ಚುಗೆಗೆ ಪಾತ್ರವಾಗಿವೆ. ಭಾರತೀಯ ಸಂಸ್ಥೆಯೊಂದು ಬಹುರಾಷ್ಟ್ರೀಯ ಕಂಪನಿಗಳ ಮಟ್ಟದಲ್ಲಿ ಸುರಕ್ಷತಾ ತಂತ್ರಜ್ಞಾನಕ್ಕೆ ಆದ್ಯತೆ ನೀಡಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.

ಉದ್ಯಮ ಕ್ಷೇತ್ರದಲ್ಲಿ ಸ್ಪರ್ಧೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರತಿಯೊಂದು ರೂಪಾಯಿಯ ಉಳಿತಾಯವೂ ಮಹತ್ವದ್ದಾಗಿದೆ. ಆರಂಭದಲ್ಲಿ ಹೂಡಿಕೆ ಸ್ವಲ್ಪ ಹೆಚ್ಚಾದರೂ, ಪುಣೆ ಗ್ಯಾಸ್‌ನ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡರೆ ಒಂದು ವರ್ಷದೊಳಗೆ ಹೂಡಿಕೆಯ ಪ್ರತಿಫಲ (ROI) ಪಡೆಯಬಹುದು. ಇದರಿಂದ ಮುಂದಿನ ಹಲವು ವರ್ಷಗಳವರೆಗೆ ಇಂಧನ ವೆಚ್ಚದಲ್ಲಿ ಉಳಿತಾಯ ಸಾಧ್ಯ. ಎಲ್ಲಕ್ಕಿಂತ ಮುಖ್ಯವಾಗಿ ಮಾನವ ಜೀವದ ಸುರಕ್ಷತೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಹೀಗಾಗಿ ಯಾವುದೇ ಸಂಸ್ಥೆಯೂ ಸುರಕ್ಷತೆಯಲ್ಲಿ ರಾಜಿ ಮಾಡಿಕೊಳ್ಳಬಾರದು. ಉತ್ಪನ್ನಗಳನ್ನು ನೇರವಾಗಿ ವೀಕ್ಷಿಸಿ, ಅವುಗಳ ಕಾರ್ಯವೈಖರಿಯನ್ನು ತಿಳಿದುಕೊಳ್ಳಲು ಅವಕಾಶ ಕಲ್ಪಿಸುವ ಎಕ್ಸ್‌ಪೀರಿಯನ್ಸ್ ಸೆಂಟರ್ ಉದ್ಯಮಿಗಳಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಹೇಳಿದರು.

ಪುಣೆ ಗ್ಯಾಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಸಿಇಒ ಜೆಸಲ್ ಸಂಪತ್ ಮಾತನಾಡಿ, ಮಂಗಳೂರಿನ ಎಕ್ಸ್‌ಪೀರಿಯನ್ಸ್ ಸೆಂಟರ್ ಭಾರತದಲ್ಲಿನ ಸಂಸ್ಥೆಯ 10ನೇ ಕೇಂದ್ರವಾಗಿದೆ. ಈಗಾಗಲೇ ದೇಶದ ಒಂಬತ್ತು ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ದೇಶದ ಮೂಲೆಮೂಲೆಗಳಲ್ಲಿರುವ ಹೋಟೆಲ್, ರೆಸ್ಟೋರೆಂಟ್, ಕೈಗಾರಿಕೆ, ಕಾರ್ಖಾನೆ, ಕ್ಯಾಂಟೀನ್, ಕ್ಲೌಡ್ ಕಿಚನ್ ಹಾಗೂ ಆಹಾರ ತಯಾರಿಕಾ ಘಟಕಗಳಿಗೆ ಸುರಕ್ಷಿತ ಮತ್ತು ದಕ್ಷ ಅನಿಲ ವ್ಯವಸ್ಥೆಗಳನ್ನು ತಲುಪಿಸುವ ಉದ್ದೇಶ ಹೊಂದಲಾಗಿದೆ ಎಂದರು.

ಮೂರು ವರ್ಷಗಳ ಹಿಂದೆ ಪರಿಚಯಿಸಲಾದ ಎಲ್‌ಪಿ ಜೀನಿಯಸ್ ಸ್ಮಾರ್ಟ್ ಎಲ್‌ಪಿಜಿ ವ್ಯವಸ್ಥೆ ಸಂಸ್ಥೆಯ ಪ್ರಮುಖ ಉತ್ಪನ್ನವಾಗಿದೆ. ಇದರೊಂದಿಗೆ ಅನಿಲ ಬಳಕೆಯನ್ನು ನಿಖರವಾಗಿ ಅಳೆಯುವ ಫ್ಲೋ ಮೀಟರಿಂಗ್ ವ್ಯವಸ್ಥೆ, ಅನಿಲ ಸೋರಿಕೆಯನ್ನು ಪತ್ತೆಹಚ್ಚುವ ಲೀಕ್ ಡಿಟೆಕ್ಷನ್ ವ್ಯವಸ್ಥೆ ಹಾಗೂ ಸೋರಿಕೆಯಾಗುತ್ತಿರುವ ಅನಿಲವನ್ನು ಗುರುತಿಸಲು ನೆರವಾಗುವ ಪೋರ್ಟಬಲ್ ಲೀಕ್ ಸ್ನಿಫರ್ ಸಾಧನಗಳನ್ನು ಪರಿಚಯಿಸಲಾಗಿದೆ. ಅಲ್ಲದೆ, ಡೀಸೆಲ್ ಜನರೇಟರ್‌ಗಳನ್ನು ಎಲ್‌ಪಿಜಿ ಅಥವಾ ಪಿಎನ್‌ಜಿ ಮತ್ತು ಡೀಸೆಲ್ ಬಳಕೆಯ ಡ್ಯುಯಲ್ ಫ್ಯೂಯೆಲ್ ವ್ಯವಸ್ಥೆಯಾಗಿ ಪರಿವರ್ತಿಸುವ ಫ್ಯೂಯೆಲ್ ಫ್ಯೂಷನ್ ತಂತ್ರಜ್ಞಾನವೂ ಲಭ್ಯವಿದೆ ಎಂದು ತಿಳಿಸಿದರು.

ಈ ತಂತ್ರಜ್ಞಾನಗಳು ಅನಿಲ ಬಳಕೆಯ ವೆಚ್ಚವನ್ನು ಕಡಿಮೆ ಮಾಡುವುದರ ಜತೆಗೆ ಸುರಕ್ಷತೆಯನ್ನು ಹೆಚ್ಚಿಸಲಿವೆ. ಮಂಗಳೂರಿನಲ್ಲಿಯೂ ಈಗಾಗಲೇ ತಾಜ್ ಮಂಗಳೂರು, ತಾಜ್ ಉಡುಪಿ ಸೇರಿದಂತೆ ಹಲವು ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಕೈಗಾರಿಕಾ ಘಟಕಗಳು ಪುಣೆ ಗ್ಯಾಸ್‌ನ ವ್ಯವಸ್ಥೆಗಳನ್ನು ಬಳಸುತ್ತಿವೆ. ಈ ನೂತನ ಕೇಂದ್ರದ ಮೂಲಕ ಕರಾವಳಿ ಭಾಗದ ಇನ್ನಷ್ಟು ಉದ್ಯಮಗಳಿಗೆ ಆಧುನಿಕ ಅನಿಲ ತಂತ್ರಜ್ಞಾನವನ್ನು ತಲುಪಿಸುವ ಉದ್ದೇಶವಿದೆ ಎಂದು ಹೇಳಿದರು.

ವಿಂದ್ಯಾ ಅಪ್ಲಯನ್ಸಸ್ ಮುಖ್ಯಸ್ಥ ನಿತ್ಯಾನಂದ ಪೈ ಮಾತನಾಡಿ, ಅನಿಲ ಬಳಕೆಯಲ್ಲಿ ಸುರಕ್ಷತೆ ಮತ್ತು ಉಳಿತಾಯ ಎರಡಕ್ಕೂ ಸಮಾನ ಆದ್ಯತೆ ನೀಡಬೇಕು. ಸಾಮಾನ್ಯವಾಗಿ ಹೋಟೆಲ್‌ಗಳಲ್ಲಿ ಬಳಸುವ 19 ಕೆ.ಜಿ. ಸಿಲಿಂಡರ್‌ಗಳಲ್ಲಿ ಅನಿಲ ಸಂಪೂರ್ಣ ಬಳಕೆಯಾಗದೆ ಉಳಿಯುವ ಸಾಧ್ಯತೆ ಇದೆ. ಆದರೆ ಪುಣೆ ಗ್ಯಾಸ್‌ನ ಎಲ್‌ಪಿ ಜೀನಿಯಸ್ ವ್ಯವಸ್ಥೆಯಲ್ಲಿ 42.5 ಲೀಟರ್ ಸಾಮರ್ಥ್ಯದ ಸಿಲಿಂಡರ್‌ಗಳನ್ನು ಬಳಸುವ ಮೂಲಕ ಅನಿಲದ ವ್ಯರ್ಥ ಬಳಕೆಯನ್ನು ಕಡಿಮೆ ಮಾಡಬಹುದು. ಸಿಲಿಂಡರ್‌ನಲ್ಲಿರುವ ಅನಿಲವನ್ನು ಕೊನೆಯ ಹನಿಯವರೆಗೂ ಪರಿಣಾಮಕಾರಿಯಾಗಿ ಬಳಸಲು ಈ ವ್ಯವಸ್ಥೆ ನೆರವಾಗುತ್ತದೆ ಎಂದರು.

ಪುಣೆ ಗ್ಯಾಸ್ ಅಭಿವೃದ್ಧಿಪಡಿಸಿರುವ ಡ್ರೈ ಟೈಪ್ ವೇಪರೈಸರ್ ವಿಶೇಷ ತಂತ್ರಜ್ಞಾನವಾಗಿದ್ದು, ಕಡಿಮೆ ಸ್ಥಳಾವಕಾಶದಲ್ಲಿಯೇ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬಹುದು. ಸುಮಾರು 10 ಚದರ ಅಡಿ ಜಾಗದಲ್ಲಿಯೂ ಇದನ್ನು ಸ್ಥಾಪಿಸಲು ಸಾಧ್ಯವಿದೆ. ಆರಂಭಿಕ ಹೂಡಿಕೆಯ ಮೂಲಕ ಸಿಲಿಂಡರ್‌ಗಳಲ್ಲಿ ಉಳಿಯುವ ಅನಿಲದ ವ್ಯರ್ಥತೆಯನ್ನು ತಡೆದು, ಉಳಿತಾಯದ ಮೂಲಕ ಹೂಡಿಕೆಯ ಮೊತ್ತವನ್ನು ಸುಮಾರು ಒಂದು ವರ್ಷದೊಳಗೆ ಮರಳಿ ಪಡೆಯಲು ಅವಕಾಶವಿದೆ ಎಂದು ವಿವರಿಸಿದರು.

ಸುರಕ್ಷತಾ ತಂತ್ರಜ್ಞಾನದಲ್ಲಿ ನಿರಂತರ ಸಂಶೋಧನೆ ಮತ್ತು ಅಭಿವೃದ್ಧಿಗೆ ಪುಣೆ ಗ್ಯಾಸ್ ಹೆಚ್ಚಿನ ಆದ್ಯತೆ ನೀಡುತ್ತಿದೆ. ಇನ್ಫೋಸಿಸ್, ಟಾಟಾ, ನೆಸ್ಲೆ ಸೇರಿದಂತೆ ಪ್ರಮುಖ ಸಂಸ್ಥೆಗಳು ಹಾಗೂ ತಾಜ್, ಹಯಾತ್, ರೆಡಿಸನ್‌ನಂತಹ ಹೋಟೆಲ್ ಸಮೂಹಗಳು ಪುಣೆ ಗ್ಯಾಸ್‌ನೊಂದಿಗೆ ಕಾರ್ಯನಿರ್ವಹಿಸುತ್ತಿರುವುದು ಅದರ ಗುಣಮಟ್ಟ ಮತ್ತು ಸುರಕ್ಷತಾ ವ್ಯವಸ್ಥೆಗಳಿಗೆ ಸಾಕ್ಷಿಯಾಗಿದೆ. ಮಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಉದ್ಯಮಿಗಳಿಗೆ ಸೇವೆ ಒದಗಿಸಲು ಅವಕಾಶ ಕಲ್ಪಿಸಿರುವುದಕ್ಕೆ ಸಂಸ್ಥೆಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.

ನೂತನ ಎಕ್ಸ್‌ಪೀರಿಯನ್ಸ್ ಸೆಂಟರ್ ಮೂಲಕ ಹೋಟೆಲ್ ಉದ್ಯಮ, ಆಹಾರ ತಯಾರಿಕಾ ಘಟಕಗಳು ಹಾಗೂ ಕೈಗಾರಿಕೆಗಳಿಗೆ ಅನಿಲ ಸುರಕ್ಷತೆ, ಇಂಧನ ಉಳಿತಾಯ ಮತ್ತು ಆಧುನಿಕ ತಂತ್ರಜ್ಞಾನದ ಕುರಿತು ನೇರ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!