ಪುತ್ತೂರಿಗರ ಬಹುದಿನಗಳ ಕನಸು ನನಸು: ಕಬಕ ಪುತ್ತೂರಿನಲ್ಲಿ ವಂದೇ ಭಾರತ್ ರೈಲಿಗೆ ನಿಲುಗಡೆ!

ಪುತ್ತೂರು : ಪುತ್ತೂರಿಗರ ಬಹುದಿನಗಳ ಕನಸು ನನಸಾಗಿದೆ. ಕರಾವಳಿ ಕರ್ನಾಟಕ ಹಾಗೂ ರಾಜಧಾನಿ ಬೆಂಗಳೂರು ನಡುವೆ ಸಂಚರಿಸಲಿರುವ ನೂತನ ಯಶವಂತಪುರ-ಮಡಗಾಂವ್-ಯಶವಂತಪುರ ವಂದೇ ಭಾರತ್ ಎಕ್ಸ್‌ಪ್ರೆಸ್ (26655/26656) ಗೆ ಕಬಕ ಪುತ್ತೂರು ರೈಲು ನಿಲ್ದಾಣದಲ್ಲಿ ಅಧಿಕೃತ ನಿಲುಗಡೆ ನೀಡಿ ರೈಲ್ವೆ ಮಂಡಳಿ ನೂತನ ವೇಳಾಪಟ್ಟಿಯೊಂದಿಗೆ ಅಧಿಕೃತ ಆದೇಶ ಹೊರಡಿಸಿದೆ.

ಈ ಹಿಂದೆ ಮಂಗಳೂರು ಸೆಂಟ್ರಲ್-ಮಡಗಾಂವ್‌ ನಡುವೆ ಮಾತ್ರ ಓಡುತ್ತಿದ್ದ ವಂದೇ ಭಾರತ್ (20645/20646) ಅನ್ನು ರದ್ದುಗೊಳಿಸಿ, ಈಗ ಯಶವಂತಪುರದವರೆಗೆ ವಿಸ್ತರಿಸಲಾಗಿದೆ. ಪುತ್ತೂರಿನ ಪ್ರಯಾಣಿಕರು ಇನ್ನು ಬೆಂಗಳೂರಿಗೆ ತೆರಳಲು ಮಂಗಳೂರು ಜಂಕ್ಷನ್ ವರೆಗೆ ಹೋಗುವ ಅಗತ್ಯವಿಲ್ಲ. ಕಬಕ ಪುತ್ತೂರಿನಿಂದಲೇ ವಂದೇ ಭಾರತ್ ಹತ್ತಬಹುದು.

ಸಂಪೂರ್ಣ ನಿಲುಗಡೆ ನಿಲ್ದಾಣಗಳು: ಯಶವಂತಪುರ,ಶ್ರವಣಬೆಳಗೊಳ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕ ಪುತ್ತೂರು, ಮಂಗಳೂರು ಜಂಕ್ಷನ್, ಉಡುಪಿ, ಕುಂದಾಪುರ, ಮೂಕಾಂಬಿಕಾ ರೋಡ್ ಬೈಂದೂರು, ಮುರುಡೇಶ್ವರ, ಗೋಕರ್ಣ ರೋಡ್, ಕಾರವಾರ, ಮಡಗಾಂವ್. ನವೆಂಬರ್ 3ನೇ ವಾರದೊಳಗೆ ಈ ವಿಸ್ತರಿತ ಸೇವೆಗೆ ಚಾಲನೆ ನೀಡಲಾಗುವುದು ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್‌ ಭರವಸೆ ನೀಡಿದ್ದಾರೆ. ಸಚಿವರು ಖುದ್ದಾಗಿ ಮಂಗಳೂರಿಗೆ ಆಗಮಿಸಿ ಉದ್ಘಾಟನೆ ನೆರವೇರಿಸಲಿದ್ದಾರೆ.

ಬುಧವಾರ ನವದೆಹಲಿಯಲ್ಲಿ ಸಂಸದರು ಸಚಿವರನ್ನು ಭೇಟಿಯಾಗಿ ಚರ್ಚಿಸಿದ್ದರು. ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ನಿರಂತರ ಶ್ರಮದಿಂದ ಈ ವಿಸ್ತರಣೆ ಸಾಧ್ಯವಾಗಿದೆ. ಸಂಸದರು ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರನ್ನೂ ಭೇಟಿಯಾಗಿ ಧನ್ಯವಾದ ತಿಳಿಸಿದ್ದು, ಮಂಗಳೂರು ರೈಲ್ವೆ ವಲಯವನ್ನು ಪಾಲಕ್ಕಾಡ್ ವಿಭಾಗದಿಂದ ಮೈಸೂರು ವಿಭಾಗಕ್ಕೆ ತರುವಲ್ಲಿ ಅವರ ಪಾತ್ರವನ್ನು ಶ್ಲಾಘಿಸಿದ್ದಾರೆ. ಹೊಸ ರೈಲು ಸೇವೆ ಆರಂಭಿಸುವುದರ ಜತೆಗೆ, 20645/20646 ಸಂಖ್ಯೆಯ ಮಡಗಾಂವ್-ಮಂಗಳೂರು ಸೆಂಟ್ರಲ್ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆಯನ್ನು ಸ್ಥಗಿತಗೊಳಿಸುವುದಾಗಿಯೂ ರೈಲ್ವೆ ಸಚಿವಾಲಯದ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಹೊಸ ರೈಲು ಸೇವೆಯನ್ನು ಅನುಕೂಲಕರ ದಿನಾಂಕದಿಂದ ಜಾರಿಗೆ ತರಲು ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ರೈಲ್ವೆ ವಲಯಗಳಿಗೆ ಸೂಚಿಸಲಾಗಿದೆ. ಅಗತ್ಯವಿದ್ದರೆ ಉದ್ಘಾಟನಾ ರೈಲನ್ನು ವಿಶೇಷ ಸೇವೆಯಾಗಿ ಓಡಿಸಿ, ನಂತರ ನಿಯಮಿತ ವೇಳಾಪಟ್ಟಿಗೆ ಸೇರಿಸಿಕೊಳ್ಳುವಂತೆಯೂ ಆದೇಶದಲ್ಲಿ ತಿಳಿಸಲಾಗಿದೆ.

ಪಂಚಗಂಗಾ ಎಕ್ಸ್‌ಪ್ರೆಸ್‌ನ ರಾತ್ರಿ ದಟ್ಟಣೆಗೆ ಪರ್ಯಾಯವಾಗಿ ಬೆಳಗ್ಗಿನ ವೇಳೆಯಲ್ಲಿ ಕರಾವಳಿಗರಿಗೆ, ಅದರಲ್ಲೂ ಪುತ್ತೂರಿಗರಿಗೆ ಇದು ಅತ್ಯಂತ ವೇಗದ ಮತ್ತು ಆರಾಮದಾಯಕ ಪ್ರಯಾಣವಾಗಲಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!